ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿಯನ್ನು ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲೆಯ ಪ್ರತಿಯೊಬ್ಬ ನಾಗರಿಕರೂ ಸಹಕರಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೇಶ್ ಪಿ.ಆರ್ ಹೇಳಿದ್ದಾರೆ.ಸೋಮವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ವಿಶ್ವ ಕ್ಷಯ ರೋಗ ದಿನಾಚರಣೆ ಹಾಗೂ ಕ್ಷಯ ಮುಕ್ತ ಗ್ರಾಮ ಪಂಚಾಯತ್-ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ 2030 ರ ಒಳಗೆ ಕ್ಷಯ ಮುಕ್ತ ಭಾರತವನ್ನಾಗಿಸುವ ಆಂದೋಲನ ಹಮ್ಮಿಕೊಂಡಿದೆ. ಜಿಲ್ಲೆಯನ್ನೂ ಸಹ ಕ್ಷಯ ಮುಕ್ತವನ್ನಾಗಿಸಬೇಕು. ಕ್ಷಯರೋಗಿಗಳನ್ನು ಮುಂಚಿತವಾಗಿ ಪತ್ತೆ ಹಚ್ಚುವುದು, ಸಂಪೂರ್ಣ ಚಿಕಿತ್ಸೆಯನ್ನು ನೀಡುವುದು ಹಾಗೂ ರೋಗವು ಇತರರಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸಿ ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಬೇಕು ಎಂದರು.ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಷಯ ರೋಗವು ಸಾಂಕ್ರಾಮಿಕ ರೋಗವಾಗಿದ್ದು, ರೋಗವನ್ನು ತಡೆಗಟ್ಟಲು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ನೂರು ದಿನಗಳ ಕ್ಷಯರೋಗ ಅಭಿಯಾನದಲ್ಲಿ ಕ್ಷಯ ರೋಗಿಗಳನ್ನು ಗುರುತಿಸಿ, ಅವರಿಗೆ ಗುಣಮಟ್ಟದ ಚಿಕಿತ್ಸೆ ನೀಡಿ ಅವರು ಸಂಪೂರ್ಣ ಗುಣಮುಖರಾಗುವವರೆಗೂ ಮೌಲ್ಯಮಾಪನ ಮಾಡಲಾಗುವುದು ಎಂದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಚಿದಾನಂದ ಸಂಜು ಪ್ರಾಸ್ತಾವಿಕವಾಗಿ ಮಾತನಾಡಿ, 2015 ಕ್ಕೆ ಹೋಲಿಸಿದ್ದಲ್ಲಿ ಜಿಲ್ಲೆಯಲ್ಲಿ 2022 ರಲ್ಲಿ ಶೇ.40-60 ರಷ್ಟು ಟಿ.ಬಿ ಪ್ರಕರಣಗಳನ್ನು ಕಡಿಮೆ ಮಾಡುವುದರೊಂದಿಗೆ, ರಾಷ್ಟçಮಟ್ಟದಲ್ಲಿ ಬೆಳ್ಳಿಯ ಪದಕವನ್ನು ಉಡುಪಿ ಜಿಲ್ಲೆಯು ಪಡೆದುಕೊಂಡಿದೆ. ಕಳೆದ ಸಾಲಿನಲ್ಲಿ ಶೇ. 9 ರಷ್ಟು ಟಿ.ಬಿ ಪ್ರಕರಣಗಳನ್ನು ಸಹ ಕಡಿಮೆ ಮಾಡಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಗ್ರಾಮದ ಜನರ ಆರೋಗ್ಯ ತಪಾಸಣೆ, ಗುಣಮುಖವಾಗಿರುವ ಅಂಕಿ-ಅಂಶ, ಸೇರಿದಂತೆ ಮತ್ತಿತರ ಮಾನದಂಡಗಳನ್ನು ಅನುಸರಿಸುವುದರೊಂದಿಗೆ ಕಳೆದ ಸಾಲಿನಲ್ಲಿ ಜಿಲ್ಲೆಯ 26 ಗ್ರಾಮ ಪಂಚಾಯತ್ ಗ ಳನ್ನು ಕ್ಷಯ ಮುಕ್ತ ಗ್ರಾಮ ಪಂಚಾಯತ್ ಗಳೆಂದು ಆಯ್ಕೆ ಮಾಡಲಾಗಿದ್ದು, ಅವುಗಳ ಪೈಕಿ ಪ್ರಸಕ್ತ ಸಾಲಿನಲ್ಲಿ 23 ಗ್ರಾಮ ಪಂಚಾಯತ್ ಗಳಿಗೆ ರಜತ ಪದಕ ಹಾಗೂ ಪ್ರಸಕ್ತ ಸಾಲಿನಲ್ಲಿ ಹೊಸದಾಗಿ ಕ್ಷಯ ಮುಕ್ತ ಗ್ರಾಮ ಪಂಚಾಯತ್ ಗಳೆಂದು ಆಯ್ಕೆ ಮಾಡಲಾದ 39 ಗ್ರಾಮ ಪಂಚಾಯತ್ ಗಳಿಗೆ ಕಂಚಿನ ಪದಕದೊಂದಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಪ್ರಸಕ್ತ ಸಾಲಿನ ಕ್ಷಯ ನಿರ್ಮೂಲನಾ ಕಾರ್ಯಕ್ರಮದಲ್ಲಿ ವಿಶೇಷ ಸೇವೆ ಸಲ್ಲಿಸಿದ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ್ ಉಡುಪ, ಜಿಲ್ಲೆಯ ಎಲ್ಲಾ ತಾಲೂಕಿನ ಗ್ರಾಪಂಗಳ ಅಧ್ಯಕ್ಷರುಗಳು, ಉಪಾಧ್ಯಕ್ಷರು, ಸದಸ್ಯರುಗಳು, ಪಿ.ಡಿ.ಒ.ಗಳು, ತಾಲೂಕು ವೈದ್ಯಾಧಿಕಾರಿಗಳು, ಇಲಾಖೆಯ ವೈದ್ಯಾಧಿಕಾರಿಗಳು, ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಆಲಂದೂರು ಮಂಜುನಾಥ ಎಸ್ ಗಾಣಿಗ ಸ್ವಾಗತಿಸಿ, ನಿರೂಪಿಸಿದರೆ, ಸಂದೀಪ್ ವಂದಿಸಿದರು.