ಸಾರಾಂಶ
ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ ತಡೆ ಜಾಗೃತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಬಸವಾಪಟ್ಟಣಸರ್ಕಾರ ಯಾವುದೇ ಕಾನೂನುಗಳನ್ನು ಜಾರಿಗೆ ತಂದರೂ ಸಹ ಅದಕ್ಕೆ ಸಾರ್ವಜನಿಕರ ಸಹಕಾರ ದೊರೆತಾಗ ಮಾತ್ರ ಸರ್ಕಾರದ ಯಾವುದೇ ಕಾನೂನುಗಳು ಯಶಸ್ವಿಯಾಗಲು ಸಾಧ್ಯ ಎಂದು ಅರಕಲಗೂಡು ತಾಲೂಕು ಮಹಿಳಾ ಮತ್ತು ಮಕ್ಕಳ ಕಲಾಣ್ಯ ಇಲಾಖೆಯ ಅಭಿವೃದ್ದಿ ಅಧಿಕಾರಿ ವೆಂಕಟೇಶ್ ಹೇಳಿದರು.
ಇಲ್ಲಿಗೆ ಸಮೀಪದ ಕೇರಳಾಪುರ ಗ್ರಾಮದ ಶ್ರೀವಿದ್ಯಾಗಣಪತಿ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಪಾಠಶಾಲೆ ಮತ್ತು ತಾಲೂಕು ಮಹಿಳಾ ಮತ್ತು ಮಕ್ಕಳ ಕಲಾಣ್ಯ ಇಲಾಖೆಯು ಹಮ್ಮಿಕೊಂಡ ಶಾಲಾ ಮಕ್ಕಳಲ್ಲಿ ಬಾಲ್ಯ ವಿವಾಹ ಮತ್ತು ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜ್ಯನ್ಯ ನಿಯಂತ್ರಣ ಕಾಯ್ದೆ-೨೦೧೨ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಬಾಲ್ಯ ವಿವಾಹ ಎನ್ನುವುದು ಸಮಾಜದಲ್ಲಿ ಒಂದು ಪಿಡುಗಾಗಿದ್ದು ಮಕ್ಕಳ ಮಾನಸಿಕ, ದೈಹಿಕ ಬೆಳವಣಿಗೆಯ ಮುನ್ನವೇ ವಿವಾಹ ಮಾಡುವುದರಿಂದ ಅಂತಹ ಮಕ್ಕಳ ಸಂಪೂರ್ಣ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರಲಿದ್ದು ಸಾಂಸಾರಿಕ ಜವಾಬ್ದಾರಿ ಹೊರಲಾಗದೆ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಮೂಢನಂಬಿಕೆಗಳನ್ನು ಬಿಟ್ಟು ಹೆಣ್ಣು ಮತ್ತು ಗಂಡು ಮಕ್ಕಳಿಗೆ ಸರ್ಕಾರ ನಿಗದಿಪಡಿಸಿರುವ ವಯೋಮಾನಕ್ಕೆ ಅನುಗುಣವಾಗಿ ವಿವಾಹ ಮಾಡಬೇಕಾಗಿರುವುದು ಪ್ರತಿಯೊಬ್ಬ ನಾಗರಿಕನ ಹೊಣೆಯಾಗಿದೆ ಎಂದು ಹೇಳಿದರು.
ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಅನೇಕ ಕಾನೂನುಗಳನ್ನು ತರಲಾಗಿದೆ. ಇದನ್ನು ಅನುಸರಿಸದಿದ್ದರೆ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಬಾಲ್ಯ ವಿವಾಹಗಳು ಕಂಡು ಬಂದಲ್ಲಿ ಸಾರ್ವಜನಿಕರು ಸಮೀಪದ ಪೋಲಿಸ್ ಠಾಣೆಗಾಗಲೀ ಅಥವಾ ತಾಲೂಕು ಮಕ್ಕಳ ಮಹಿಳಾ ಕಲ್ಯಾಣಾಧಿಕಾರಿಗಳ ಗಮನಕ್ಕೆ ತರಬೇಕು. ಇದರಿಂದ ಬಾಲ್ಯ ವಿವಾಹ ತಡೆಗಟ್ಟಲು ಸಹಕಾರಿಯಾಗುತ್ತದೆ. ಅಲ್ಲದೆ ಇದೇ ವೇಳೆ ಫೋಕ್ಸ್ ಕಾಯ್ದೆಯ ಬಗ್ಗೆಯೂ ತಿಳಿಸಿಕೊಡಲಾಯಿತು. ಮಕ್ಕಳ ಅಂದರೆ ೧೮ ವರ್ಷದ ಒಳಗಿನ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳ ತಡೆ ಕಾಯ್ದೆ ೨೦೧೨ರ ಬಗ್ಗೆ ಮತ್ತು ಕಾನೂನನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಎಸಗಿದಲ್ಲಿ ಇರುವ ಕಾನೂನು ಶಿಕ್ಷೆಗಳ ಬಗ್ಗೆ ತಿಳಿಸಲಾಯಿತು.ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ ೧೦೯೮ಕ್ಕೆ ತಿಳಿಸಿದಲ್ಲಿ ತಕ್ಷಣವೇ ಸಹಾಯವಾಣಿಯ ಮಾಹಿತಿಯ ಅಧಾರದ ಮೇಲೆ ನೊಂದ ಮಕ್ಕಳ ನೆರವಿಗೆ ಬರಲಿದ್ದು ಅಪರಾಧಿಗಳನ್ನು ಶಿಕ್ಷಗೆ ಒಳಪಡಿಸಲು ಸಹಕಾರಿಯಾಗಲಿದೆ ಎಂದು ವೆಂಕಟೇಶ್ ತಿಳಿಸಿದರು.
ಇದೇ ವೇಳೆ ಕೇರಳಾಪುರ ಶ್ರೀವಿದ್ಯಾಗಣಪತಿ ಶಾಲೆಯ ಶಿಕ್ಷಕವರ್ಗ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಫೋಟೋ: ಬಸವಾಪಟ್ಟಣದ ಕೇರಳಾಪುರ ಗ್ರಾಮದ ಶ್ರೀವಿದ್ಯಾಗಣಪತಿ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳಲ್ಲಿ ಬಾಲ್ಯ ವಿವಾಹ ಮತ್ತು ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜ್ಯನ್ಯ ನಿಯಂತ್ರಣ ಕಾಯ್ದೆ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಹಿಳಾ ಇಲಾಖೆಯ ಅಭಿವೃದ್ದಿ ಅಧಿಕಾರಿ ವೆಂಕಟೇಶ್ ಮಾತನಾಡಿದರು.