ಸಾರಾಂಶ
ಜಿ.ಸೋಮಶೇಖರ
ಕೊಟ್ಟೂರು: ಪಟ್ಟಣ ಮಾರ್ಗವಾಗಿ 10ಕ್ಕೂ ಅಧಿಕ ಸರಕು ಸಾಗಣೆ ರೈಲುಗಳು ಸಂಚರಿಸುತ್ತಿವೆ. ಆದರೆ ಪ್ರಯಾಣಿಕರಿಗಾಗಿ ಕೇವಲ ಮೂರು ರೈಲುಗಳು ಮಾತ್ರ ಸಂಚರಿಸುತ್ತಿದ್ದು, ಇವುಗಳ ಸಂಖ್ಯೆ ಹೆಚ್ಚಳಕ್ಕೆ ಸ್ಥಳೀಯರಿಂದ ಆಗ್ರಹ ಕೇಳಿ ಬರುತ್ತಿದೆ.ಕೊಟ್ಟೂರು ಮೂಲಕ ಪ್ರತಿದಿನ 10ಕ್ಕೂ ಹೆಚ್ಚು ಸರಕು ರೈಲುಗಳು ಸಂಚರಿಸುತ್ತಿವೆ. ಇದರಂತೆ ಪ್ರಯಾಣಿಕರ ರೈಲುಗಳನ್ನು ಹೆಚ್ಚಿಸುವುದರ ಜೊತೆಗೆ ರೈಲು ಮಾರ್ಗಗಳನ್ನೂ ಹೆಚ್ಚಿಸಬೇಕು. ಇದರಿಂದ ತಾಲೂಕಿನ ಸುತ್ತಮುತ್ತಲಿನ ಜನರಿಗೆ ಪ್ರಯೋಜನವಾಗಲಿದೆ. ಜತೆಗೆ ಸರ್ಕಾರಕ್ಕೂ ಆದಾಯ ಬರಲಿದೆ ಎನ್ನುತ್ತಾರೆ ಇಲ್ಲಿನ ರೈಲು ಹೋರಾಟಗಾರರು.
ನಿಯೋಗ ತೆರಳಲು ನಿರ್ಧಾರ: ರಾಜ್ಯದವರೇ ಆದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಈ ಬಗ್ಗೆ ಪ್ರತಿ ಅಂಶಗಳನ್ನು ಗಮನಿಸಿ ರೈಲುಗಳ ಸೇವೆ ಒದಗಿಸಬೇಕು. ಶೀಘ್ರವೇ ಸಚಿವರ ಬಳಿ ರೈಲ್ವೆ ಹೋರಾಟಗಾರರು ನಿಯೋಗ ತೆರಳಿ ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ.ಕೊಟ್ಟೂರು ಭಾಗದ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ದೂರದ ನಗರ, ಯಾತ್ರಾ ಸ್ಥಳಗಳಿಗೆ ತೆರಳಲು ಹೊಸ ರೈಲುಗಳ ಅಗತ್ಯವಿದೆ. ಜೊತೆಗೆ ದಶಕಗಳಿಂದಲೂ ರೈಲ್ವೆ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಕೊಟ್ಟೂರು- ಚಿತ್ರದುರ್ಗ ಹೊಸ ಮಾರ್ಗದ ಸರ್ವೆ ಕಾರ್ಯಕ್ಕೂ ಚಾಲನೆ ನೀಡಿದರೆ, ಕೊಟ್ಟೂರು, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ ಜನತೆಯ ಬೇಡಿಕೆ ಈಡೇರಿದಂತಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಿದರೆ ತಾಲೂಕಿನ ಜನತೆಗೆ ಅನುಕೂಲ ಕಲ್ಪಿಸಿದಂತಾಗುತ್ತದೆ ಎನ್ನುತ್ತಾರೆ ರೈಲು ಹೋರಾಟಗಾರರು.
₹1.50 ಕೋಟಿ ಅನುದಾನ ಮಂಜೂರು: ರೈತರಿಗೆ ಮತ್ತು ವರ್ತಕರಿಗೆ ಅಗತ್ಯವಿದ್ದ ಗೊಬ್ಬರ ರೇಕ್ ಪಾಯಿಂಟ್‌ನ್ನು ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಆರಂಭಿಸಲು ರೈಲ್ವೆ ಇಲಾಖೆ ಇತ್ತೀಚೆಗೆ ₹1.50 ಕೋಟಿ ಅನುದಾನ ಮಂಜೂರಾತಿ ನೀಡಿದೆ. ಬಹುವರ್ಷಗಳ ಬೇಡಿಕೆಯಾಗಿದ್ದ ರೇಕ್ ಪಾಯಿಂಟ್ ಕೊಟ್ಟೂರಲ್ಲಿ ಪ್ರಾರಂಭಿಸುವುದರಿಂದ ರಸಗೊಬ್ಬರ ಮತ್ತಿತರ ಕೃಷಿ ಸಂಬಂಧಿಸಿದ ಸರಂಜಾಮುಗಳನ್ನು ಪಡೆಯಲು ಅನುಕೂಲವಾಗಿದೆ.ಕೊಟ್ಟೂರಿಗೆ ಪ್ರಯಾಣಿಕ ರೈಲುಗಳ ಸಂಖ್ಯೆ ಹೆಚ್ಚಿಸಬೇಕು. ಈಗಾಗಲೇ ಘೋಷಿಸಿರುವ ಕೊಟ್ಟೂರು- ಚಿತ್ರದುರ್ಗ ರೈಲು ಮಾರ್ಗಕ್ಕೆ ಚಾಲನೆ ನೀಡಲು ಕೇಂದ್ರ ಸರ್ಕಾರ ಮುಂದಾಗಬೇಕು. ಈ ಕಾರಣಕ್ಕಾಗಿ ರೈಲ್ವೆ ರಾಜ್ಯ ಸಚಿವರನ್ನು ಶೀಘ್ರವೇ ಭೇಟಿ ಮಾಡಲಿದ್ದೇವೆ ಎನ್ನುತ್ತಾರೆ ಕೊಟ್ಟೂರು ಹಿರಿಯ ಮುಖಂಡ ಎಸ್.ತಿಂದಪ್ಪ.