ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಮಡಿಕೇರಿ ತಾಲೂಕಿನ ಎರಡನೇ ದೊಡ್ಡ ಪಟ್ಟಣ ನಾಪೋಕ್ಲಿನಲ್ಲಿ ಕಿರಿದಾದ ರಸ್ತೆಯಿಂದಾಗಿ ಟ್ರಾಫಿಕ್ ಸಮಸ್ಯೆ ವಿಪರೀತವಾಗಿದೆ. ರಸ್ತೆ ಅಗಲೀಕರಣಕ್ಕೆ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಸ್ಥಳೀಯ ಕೊಡವ ಸಮಾಜದಲ್ಲಿ ಜರುಗಿದ ಗ್ರಾಮ ಸಭೆಯಲ್ಲಿ ಸಾರ್ವಜನಿಕರಿಂದ ಪ್ರಶ್ನೆಗಳ ಸುರಿಮಳೆಯೇ ಕಂಡುಬಂತು.
ಕುಡಿಯುವ ನೀರಿನ ಶುದ್ಧೀಕರಣ ಘಟಕ ಸ್ಥಾಪನೆ ಕೆಲಸ ಪ್ರಾರಂಭವಾಗಿ ಹತ್ತು ವರ್ಷಗಳಾಗಿದ್ದರೂ ಶುದ್ಧ ಕುಡಿಯುವ ನೀರು ಸಾರ್ವಜನಿಕರಿಗೆ ದೊರಕುತ್ತಿಲ್ಲ. ಕಾವೇರಿ ಹೊಳೆಯಿಂದ ನೇರವಾಗಿ ಸಾರ್ವಜನಿಕರಿಗೆ ನೀರು ಸರಬರಾಜು ಮಾಡಲಾಗುತ್ತಿದೆ, ಬೀದಿ ನಾಯಿ ಮತ್ತು ಜಾನುವಾರುಗಳು ಪಟ್ಟಣದಲ್ಲಿ ಸಮಸ್ಯೆ ಉಂಟುಮಾಡುತ್ತಿವೆ ಈ ಹಿಂದಿನಂತೆ ಜಾನುವಾರಗಳನ್ನು ದೊಡ್ಡಿಗೆ ಹಾಕಿ ಕಾನೂನು ಕ್ರಮ ಕೈಗೊಳ್ಳಿ ಎಂದು ನಾಗರಿಕರು ಒತ್ತಾಯಿಸಿದರು.ವಿದ್ಯುತ್ ಸಮಸ್ಯೆ ಅಧಿಕವಾಗುತ್ತಿದೆ. ಕೂಡಲೇ ವಿದ್ಯುತ್ ಸ್ಟೇಷನ್‌ಗೆ ಜಾಗ ಗುರುತಿಸಿ ಸಮಸ್ಯೆ
ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.ಗ್ರಾಮ ಸಭೆಯಲ್ಲಿ ಪಂಚಾಯತಿ ಸದಸ್ಯರ ಪೈಕಿ ಎಲ್ಲರೂ ಸಭೆಗೆ ಹಾಜರಾಗಿಲ್ಲ. ಇಲ್ಲಿ ಇಲಾಕೆ ಸಿಬ್ಬಂದಿ ಹಾಜರಾತಿ, ಸಾರ್ವಜನಿಕರಿಂದ ಹೆಚ್ಚಿದೆ. ಸರಿಯಾದ ಮಾಹಿತಿ ಇಲ್ಲದ ಕಾರಣ 17 ಸಾರ್ವಜನಿಕರು ಮಾತ್ರ ಉಪಸ್ಥಿತರಿದ್ದಾರೆ ಎಂದು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಬಿದ್ದಾಟಂಡನ ರೋಜಿ ಚಿನ್ನಪ್ಪ ಆರೋಪಿಸಿದರು.
ಗ್ರಾಮ ಪಂಚಾಯತಿಗೆ ಇಚ್ಛಾಶಕ್ತಿ ಕೊರತೆಯಿಂದ ಅಭಿವೃದ್ಧಿ ಕೆಲಸ ಮಾಡುವಲ್ಲಿ ವಿಫಲವಾಗಿದೆ. ಎಂದು ರೋಜಿ ಚಿನ್ನಪ್ಪ ಅಸಮಾಧಾನ ವ್ಯಕ್ತಪಡಿಸಿದರು.ಸಭೆಗೆ ಇಲಾಖೆಗಳ ಅಧಿಕಾರಿಗಳು ಎಲ್ಲರೂ ಬರಬೇಕಿತ್ತು. ನಮ್ಮ ಸಮಸ್ಯೆ ಪರಿಹರಿಸಲು ನಮ್ಮ ಇಲಾಖೆ ಅಧಿಕಾರಿಗಳು ಬಂದಿಲ್ಲ. ಅವರಿಗೆ ನಾವು ಮಾಹಿತಿ ನೀಡಿದ್ದೇವೆ. ಆದ ಕಾರಣ ಪಂಚಾಯಿತಿ ಅಧಿಕಾರಿಗಳಿಗೆ ನೋಟಿಸ್ ಕಳಿಸಬೇಕು ಎಂದು ಅಂಗನವಾಡಿ ಶಿಕ್ಷಕಿ ಆಶಾಲತಾ ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ವನಜಾಕ್ಷಿ ರೇಣುಕೇಶ್ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಮಡಿಕೇರಿ ತಾಲೂಕು ಶಿಕ್ಷಣಾಧಿಕಾರಿ ಡಾ. ದೊಡ್ಡೇಗೌಡ ಪಾಲ್ಗೊಂಡಿದ್ದರು.ಗ್ರಾಮ ಪಂಚಾಯಿತಿ ಪಿಡಿಓ ಚೋಂದಕ್ಕಿ, ಸದಸ್ಯ ಕುಲ್ಲೇಟಿರ ಅರುಣ್ ಬೇಬ ಪಾಲ್ಗೊಂಡರು.
ಗ್ರಾಮಸ್ಥರಾದ ಕೊಂಡಿರ ನಾಣಯ್ಯ , ಶಿವಚಳಿಯಂಡ ಅಂಬಿ ಕಾರ್ಯಪ್ಪ, ಕುಂಡ್ಯೋಳಂಡ ವಿಶುಪುವಯ್ಯ, ಕೆಟೋಳಿರ ಡಾಲಿ ಅಪ್ಪಚ್ಚ, ಕಲಿಯಂಡ ಹ್ಯಾರಿ ಮಂದಣ್ಣ ಮತ್ತಿತರರು ಚರ್ಚೆಗಳಲ್ಲಿ ಪಾಲ್ಗೊಂಡರು.ಉಪ ಅಧ್ಯಕ್ಷ ಕುಲ್ಲೇಟಿರ ಹೇಮಾ ಅರುಣ್, ಪಂಚಾಯತಿ ಸದಸ್ಯ ಪ್ರತಿನಿಧಿಗಳು, ಸಿಬ್ಬಂದಿ, ಅಂಗನವಾಡಿ, ಆಶಾ ಹಾಗೂ ಆರೋಗ್ಯ ಕಾರ್ಯಕರ್ತರು, ಸ್ವಸಹಾಯ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.