ಸಾರಾಂಶ
ತಾಲೂಕಿನ ಹಿರಾಳು ಗ್ರಾಮದಲ್ಲಿ ಈಗಿರುವ ಸ್ಮಶಾನ ಜಾಗವು ಕೆರೆಯ ಪಕದಲ್ಲಿದೆಯಲ್ಲದೆ, ಅಲ್ಲಿಗೆ ಗ್ರಾಮದ ಚರಂಡಿ ನೀರು ಹರಿದು ಬಂದು ನಿಲ್ಲುತ್ತದೆ. ಇದರಿಂದ, ಈಗಿರುವ ಸ್ಮಶಾನ ಜಾಗದಲ್ಲಿ ಮೃತದೇಹ ಹೂಳಲು ತೊಂದರೆಯಾಗುತ್ತಿದೆ. ಆದ್ದರಿಂದ, ಗ್ರಾಮದಲ್ಲಿ ಸ್ಮಶಾನಕ್ಕಾಗಿ ಗುರುತಿಸಿರುವ ಹೊಸ ಜಮೀನನ್ನು ಸ್ಮಶಾನ ಜಾಗವೆಂದು ಕಾಯ್ದಿರಿಸಲು ಅಧಿಕಾರಿಗಳನ್ನು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಸಂಡೂರು
ತಾಲೂಕಿನ ಹಿರಾಳು ಗ್ರಾಮದಲ್ಲಿ ಈಗಿರುವ ಸ್ಮಶಾನ ಜಾಗವು ಕೆರೆಯ ಪಕದಲ್ಲಿದೆಯಲ್ಲದೆ, ಅಲ್ಲಿಗೆ ಗ್ರಾಮದ ಚರಂಡಿ ನೀರು ಹರಿದು ಬಂದು ನಿಲ್ಲುತ್ತದೆ. ಇದರಿಂದ, ಈಗಿರುವ ಸ್ಮಶಾನ ಜಾಗದಲ್ಲಿ ಮೃತದೇಹ ಹೂಳಲು ತೊಂದರೆಯಾಗುತ್ತಿದೆ. ಆದ್ದರಿಂದ, ಗ್ರಾಮದಲ್ಲಿ ಸ್ಮಶಾನಕ್ಕಾಗಿ ಗುರುತಿಸಿರುವ ಹೊಸ ಜಮೀನನ್ನು ಸ್ಮಶಾನ ಜಾಗವೆಂದು ಕಾಯ್ದಿರಿಸಲು ಅಧಿಕಾರಿಗಳನ್ನು ಸಾರ್ವಜನಿಕರು ಆಗ್ರಹಿಸಿದ್ದಾರೆ.ಗ್ರಾಮದ ಮುಖಂಡ ಕೆ. ನಾಗರಾಜ ಕನ್ನಡಪ್ರಭದೊಂದಿಗೆ ಮಾತನಾಡಿ, ಈಗಿರುವ ಸ್ಮಶಾನ ಜಾಗದಲ್ಲಿ ಚರಂಡಿ ನೀರು ನಿಲ್ಲುತ್ತದೆಯಲ್ಲದೆ, ಪಕ್ಕದಲ್ಲಿ ಕೆರೆ ಇರುವುದರಿಂದ ನೆಲ ಅಗೆದರೆ ಬಸಿ ನೀರು ಬರುತ್ತದೆ. ಇದರಿಂದ ಮೃತದೇಹ ಹೂಳಲು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ಗ್ರಾಮಸ್ಥರಿಗೆ ಹೊಸ ಜಾಗವೊಂದನ್ನು ಸ್ಮಶಾನಕ್ಕಾಗಿ ಗುರುತಿಸಲು ಕೋರಿ ಮನವಿ ಸಲ್ಲಿಸಿದ್ದೆವು ಎಂದರು.
ಸಾರ್ವಜನಿಕರ ಮನವಿ ಹಿನ್ನೆಲೆ ಕಂದಾಯ ನಿರೀಕ್ಷಕರು ಕಾಳಿಂಗೇರಿ ಗ್ರಾಮದ ೧.೭೩ ಎಕರೆ ಪ್ರದೇಶದಲ್ಲಿ ಒಂದು ಎಕರೆ ಪ್ರದೇಶವನ್ನು ಸಾರ್ವಜನಿಕ ಸ್ಮಶಾನಕ್ಕಾಗಿ ಕಾಯ್ದಿರಿಸುವ ಸಲುವಾಗಿ ಸ್ಥಳ ಪರಿಶೀಲನೆ ಮಾಡಿ, ತಹಶೀಲ್ದಾರ್ ಅವರಿಗೆ ೨೦೨೪ರ ಜು.೨೪ ರಂದು ವರದಿ ಸಲ್ಲಿಸಿರುತ್ತಾರೆ. ಸದರಿ ಸ್ಥಳದಲ್ಲಿ ಯಾವುದೇ ಅನಧೀಕೃತ ಕಟ್ಟಡ, ಐತಿಹಾಸಿಕ ಸ್ಮಾರಕಗಳು ಇರುವುದಿಲ್ಲ. ಅಧಿಕ ವಿದ್ಯುತ್ ಪ್ರಸರಣ ತಂತಿಗಳು ಹಾದು ಹೋಗಿರುವುದಿಲ್ಲ. ಬೆಲೆ ಬಾಳುವ ಗಿಡಮರ ಇರುವುದಿಲ್ಲ. ಸದರಿ ಜಮೀನಿಗೆ ರಸ್ತೆ ಸಂಪರ್ಕ ಇದೆ. ಈ ಜಮೀನಿನಲ್ಲಿ ಯಾವುದೇ ೫೦, ೫೩ ಅರ್ಜಿಗಳು ಬಾಕಿ ಇರುವುದಿಲ್ಲ. ಈ ಜಮೀನಿಗೆ ಸಂಬಂಧಿಸಿದಂತೆ ಯಾವುದೇ ನಮೂನೆ ೫೭ ಅರ್ಜಿ ಸಲ್ಲಿಕೆಯಾಗಿರುವುದಿಲ್ಲ. ಈ ಹಿನ್ನೆಲೆ ಈ ಪ್ರದೇಶವನ್ನು ಸಾರ್ವಜನಿಕ ಸ್ಮಶಾನಕ್ಕೆ ಕಾಯ್ದಿರಿಸಲು ಸೂಕ್ತವಾದ ಸ್ಥಳವೆಂದು ವರದಿ ನೀಡಿದ್ದಾರೆ. ಆದರೆ, ಸದರಿ ಜಾಗವನ್ನು ಸ್ಮಶಾನ ಜಾಗವೆಂದು ಕಾಯ್ದಿರಿಸುವ ಕಾರ್ಯ ಈವರೆಗೆ ಆಗಿಲ್ಲ.ಆದ್ದರಿಂದ ಗ್ರಾಮದ ಬಳಿಯಲ್ಲಿ ಗುರುತಿಸಿರುವ ಹೊಸ ಜಾಗವನ್ನು ಸ್ಮಶಾನ ಜಾಗವೆಂದು ಕಾಯ್ದಿರಿಸಿ, ಮೃತದೇಹ ಹೂಳಲು ಅನುಮತಿ ನೀಡುವ ಕುರಿತ ವಿಷಯವನ್ನು ತಹಶೀಲ್ದಾರ್ ಅವರ ಗಮನಕ್ಕೆ ತಂದಿದ್ದೇವೆ. ತಹಶೀಲ್ದಾರ್ ಹಿರಾಳು ಬಳಿಯ ಸದರಿ ಜಾಗವನ್ನು ಸ್ಮಶಾನ ಜಾಗವೆಂದು ಕಾಯ್ದಿರಿಸಲು ಶೀಘ್ರ ಕ್ರಮಕೈಗೊಳ್ಳಬೇಕೆಂದು ನಾಗರಾಜ ಮನವಿ ಮಾಡಿದ್ದಾರೆ.