ಕನ್ನಡಪ್ರಭ ವಾರ್ತೆ ಗೋಕರ್ಣ
ಗಂಗಾವಳಿ-ಮಂಜುಗುಣಿ ನಡುವಣ ಸಂಪರ್ಕ ಕಲ್ಪಿಸುವ ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆಯ ಮೇಲೆ ವಾಹನಗಳನ್ನ ನಿಲ್ಲಿಸಿ ಮಾತನಾಡುವುದು, ಮೀನಿಗೆ ಗಾಳ ಹಾಕುವುದು ಮಾಡುತ್ತಿದ್ದು, ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.ಪ್ರವಾಸಿ ತಾಣ ಗೋಕರ್ಣ ಹಾಗೂ ಅಂಕೋಲಾ ಹತ್ತಿರದ ಮಾರ್ಗವಾಗಿ ಸಂಪರ್ಕ ಕಲ್ಪಿಸುವ ಈ ಸೇತುವೆ ಕೇವಲ ಸಂಪರ್ಕ ಕೊಂಡಿಯಷ್ಟೆಯಲ್ಲದೆ, ಸಂಜೆ ಸೂರ್ಯಾಸ್ತದ ವೇಳೆ ಸಮುದ್ರ ಹಾಗೂ ನದಿಯ ಸಂಗಮಗಳ ಸುತ್ತ ಸುಂದರ ಪರಿಸರದ ನೋಟ ಎಲ್ಲರನ್ನ ಗಮನ ಸೆಳೆಯುತ್ತಿದೆ. ಈ ವೇಳೆ ಸಾಕಷ್ಟು ಜನರು ವಿಹಾರಕ್ಕೆ ಆಗಮಿಸುತ್ತಾರೆ. ಇವರು ಪಾದಚಾರಿಗಳು ಸಂಚರಿಸಲು ಮೀಸಲಿಟ್ಟ ಮಾರ್ಗದಲ್ಲಿ ಸಾಗುತ್ತಾರೆ. ಆದರೆ ಒಂದಿಷ್ಟು ಮೊಬೈಲ್ ಮಾತುಗಾರರು, ಮತ್ತಿತರರು ರಸ್ತೆಯಲ್ಲಿ ಬೈಕ್ ಇಟ್ಟು ಅದರ ಮೇಲೆ ಕುಳಿತು ಮಾತನಾಡುವುದು, ಇಲ್ಲವೇ ಸೇತುವೆ ಮೇಲಿಂದ ಮೀನಿನ ಬೇಟೆ ಮಾಡುವುದು ಮಾಡುತ್ತಿದ್ದಾರೆ. ಇದರಿಂದ ಶರವೇಗದಲ್ಲಿ ಬರುವ ವಾಹನಗಳಿಗೆ ಇಲ್ಲಿ ನಿಂತಿರುವ ವಾಹನಗಳು ಗೋಚರಿಸದೆ ಅವಘಡವಾಗುವ ಆತಂಕವಿದೆ. ಹೊರ ಊರಿನಿಂದ ಬರುವ ಪ್ರವಾಸಿಗರಿಗೆ ಇಲ್ಲಿನ ಸ್ಥಿತಿ ತಿಳಿಯದೆ ಅಪಾಯ ಎದುರಾಹಬಹುದಾಗಿದೆ. ಇನ್ನೂ ಮಂಜುಗುಣಿ ಭಾಗದಲ್ಲಿ ಅಪಾಯಕಾರಿ ತಿರುವು ಸಹ ಇದೆ.
ರಾತ್ರಿ ಮತ್ತಷ್ಟು ಸಮಸ್ಯೆ:ಸಂಜೆ ವೇಳೆ ಕೇವಲ ದ್ವಿಚಕ್ರವಾಹನ ಅತ್ತಿತ್ತ ನಿಲ್ಲಿಸಲಾಗುತ್ತಿದೆ. ಆದರೆ ರಾತ್ರಿ ವೇಳೆ ಕಾರು ಮತ್ತಿತರ ದೊಡ್ಡ ವಾಹನವನ್ನ ಇಂಡಿಕೇಟರ್ ಹಾಕದೆ ಹಾಗಿ ನಿಲ್ಲಿಸುತ್ತಿದ್ದಾರೆ. ಈ ವೇಳೆ ಹಲವು ಮೀನಿಗೆ ಗಾಳ ಹಾಕುತ್ತಾ ಸೇತುವೆ ಅಂಚಿನಲ್ಲಿ ತಮ್ಮ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ.
ಬೇಕಿದೆ ಸಿಸಿ ಕ್ಯಾಮೆರಾದ ಕ್ರಮ:
ಈ ಹಿಂದೆ ಸೇತುವೆ ಮೇಲೆ ಗೋಕರ್ಣ ಪೊಲೀಸ್ ಠಾಣೆ ವತಿಯಿಂದ ಸಿಸಿ ಕ್ಯಾಮೆರಾ ಅಳವಡಿಸಿ ಠಾಣೆಯಿಂದ ವೀಕ್ಷಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪ್ರವಾಸಿಗರು ಪೋಟೋ ತೆಗೆಯುವ ಭರದಲ್ಲಿ ಪುಟ್ಟ ಮಗುವನ್ನ ಸೇತುವೆಯ ಅಂಚಿನಲ್ಲಿರುವುದನ್ನ ಗಮನಿಸಿ ಎಚ್ಚರಿಕೆ ಸಂದೇಶ ನೀಡಿ ತಿಳುವಳಿಕೆ ಜೊತೆ ಪ್ರಾಣ ರಕ್ಷಿಸಿದ್ದರು. ಇದರಂತೆ ಈಗ ಆಗುತ್ತಿರುವ ಸಮಸ್ಯೆಯ ಬಗ್ಗೆ ಗಮನಿಸಿ ಕ್ರಮ ತೆಗೆದುಕೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.