ಸಾರಾಂಶ
ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಮೈಸೂರು ವಲಯ ಸಂಚಾಲಕ ಅಬ್ದುಲ್ ಸಲಾಮ್ ಯು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಮ್ಮ ಭಾರತ ಬಹುಸಂಸ್ಕೃತಿಯ ಸುಂದರ ದೇಶ, ಸರ್ವಜನಾಂಗದ ಶಾಂತಿಯ ತೋಟ, ಬಹುತ್ವವೇ ನಮ್ಮ ಆಸ್ಮಿತೆ, ವಿವಿಧತೆಯಲ್ಲಿ ಏಕತೆ ಇದನ್ನು ಸಾಕಾರಗೊಳಿಸುವ ಪರಸ್ಪರ ಅನ್ಯೋನತೆಯಿಂದ ಬಾಳುವ ಸಂದೇಶ ಸಾರುವುದಕ್ಕಾಗಿ ಸೆ.೧೬ರಂದು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಚಾಮರಾಜನಗರದಲ್ಲಿ ಮದೀನಾ ಮಸೀದ್ ಮತ್ತು ಜಮಾಅತೆ ಇಸ್ಲಾಮಿಕ್ ಜಂಟಿ ಆಶ್ರಯದಲ್ಲಿ ಸಾರ್ವಜನಿಕ ಮಸ್ಜಿದ್ ದರ್ಶನ ಮತ್ತು ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಮೈಸೂರು ವಲಯ ಸಂಚಾಲಕ ಅಬ್ದುಲ್ ಸಲಾಮ್ ಯು. ಹೇಳಿದರು.ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಧರ್ಮ-ಜಾತಿ-ಪಂಗಡ ಹಾಗೂ ಜನಾಂಗದವರು ತಲತಲಾಂತರಗಳಿಂದ ಪರಸ್ಪರ ಅನ್ಯೋನತೆಯಿಂದ ಈ ದೇಶದಲ್ಲಿ ಬಾಳಿ ಬದುಕುತ್ತಿದ್ದಾರೆ. ಆಚಾರ-ವಿಚಾರಗಳಲ್ಲಿ ವೈವಿಧ್ಯತೆಯಿದ್ದರೂ ಅದು ಎಂದೂ ನಮ್ಮ ಸೌಹಾರ್ದ ಪರಂಪರೆಗೆ ಧಕ್ಕೆಯನ್ನುಂಟು ಮಾಡಲಿಲ್ಲ. ಏಕತೆಯೇ ನಮ್ಮ ರಾಷ್ಟ್ರದ ಶಕ್ತಿ. ಇದನ್ನು ಕಾಯ್ದುಕೊಂಡು ಬರಬೇಕಾದುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಎಂದರು.ವಿವಿಧ ಧರ್ಮೀಯರ ಮಧ್ಯೆ ಪರಸ್ಪರ ಪ್ರೀತಿ ವಿಶ್ವಾಸ ಬೆಳೆದು ಬರಬೇಕಾದರೆ ಪರಸ್ಪರರನ್ನು ತಿಳಿಯುವ ಮತ್ತು ಅರಿಯುವ ಪ್ರಯತ್ನಗಳು ನಡೆಯಬೇಕಾಗಿದೆ. ಪರಸ್ಪರರಲ್ಲಿ ಇರುವ ಅಪನಂಬಿಕೆ, ತಪ್ಪುತಿಳಿವಳಿಕೆ, ಅನುಮಾನಗಳು ದೂರವಾಗಿ ಅನ್ಯೋನತೆಯಿಂದ ಬೆರೆತು ಬಾಳುವಂತಾಗಬೇಕು. ಅವರವರ ಧರ್ಮ-ಆಚಾರ-ವಿಚಾರಗಳನ್ನು ಪಾಲಿಸುತ್ತಾ ಇತರರ ಧರ್ಮ ಆಚರಣೆ ವಿಚಾರಗಳನ್ನು ಗೌರವಿಸುವ ವಾತಾವರಣ ನಿರ್ಮಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸೆ.೧೬ರಂದು ಸೋಮವಾರ ಪ್ರವಾದಿ ಮುಹಮ್ಮದ್(ಸ)ರ ಜನ್ಮ ತಿಂಗಳ ಪ್ರಸಕ್ತ ಸಂದರ್ಭದಲ್ಲಿ ಸೀರತ್ ಪ್ರಯುಕ್ತ ಸಾರ್ವಜನಿಕ ಮಸ್ಜಿದ್ ದರ್ಶನ ಕಾರ್ಯಕ್ರಮವನ್ನು ವಿವಿಧ ಧರ್ಮೀಯ ಸಹೋದರ-ಸಹೋದರಿಯರಿಗಾಗಿ ಚಾಮರಾಜನಗರದ ಕೆಎಸ್ಆರ್‌ಟಿಸಿ ಬಸ್ ಸ್ಟ್ಯಾಂಡ್ ಬಳಿಯ ಮದೀನಾ ಮಸೀದಿಯಲ್ಲಿ ಬೆಳಿಗ್ಗೆ ೧೦.೩೦ರಿಂದ ಸಂಜೆ ೬ರ ತನಕ ನಡೆಸಲಾಗುವುದು ಎಂದರು.ಮಧ್ಯಾಹ್ನ ೧೨ ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಹರವೆ ವಿರಕ್ತ ಮಠದ ಸರ್ಪಭೂಷಣ ಸ್ವಾಮೀಜಿ ಮೌಲಾನಾ ಮುಫ್ತಿ ಜಾಫರ್ ಹುಸೇನ್ ಖಾಸ್ಕಿ, ಫಾದರ್ ಅಂಥೋನಪ್ಪ ಸಾನ್ನಿಧ್ಯ ವಹಿಸಲಿದ್ದಾರೆ. ಸಂಸದ ಸುನಿಲ್ ಬೋಸ್ ಕಾರ್ಯಕ್ರಮ ಉದ್ಘಾಟಿಸುವರು. ಮದೀನಾ ಮಸ್ಜಿದ್ ಆಡಳಿತ ಮಂಡಳಿ ಅಧ್ಯಕ್ಷ ಜನಾಬ್ ನಯೀಮ್ ಉಲ್ ಹಕ್ ಅಧ್ಯಕ್ಷತೆ ವಹಿಸುವರು. ಮಸೀದಿಯ ಪರಿಚಯ ಮತ್ತು ಸಂದೇಶವನ್ನು ಕನ್ನಡದ ಪ್ರಮುಖ ವಾಗ್ಮಿ, ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮತ್ತು ಮಂಗಳೂರಿನ ಶಾಂತಿಪ್ರಕಾಶನದ ಮುಹಮ್ಮದ್ ಕುಂಇ ನೀಡುವರು.
ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ಣಮೂರ್ತಿ, ಗಣೇಶ್ ಪ್ರಸಾದ್, ಎಂ.ಆರ್. ಮಂಜುನಾಥ್, ಜಿಲ್ಲಾಧಿಕಾರಿ ಶಿಲ್ಪಾನಾಗ್, ಎಸ್ಪಿ ಡಾ.ಕವಿತಾ, ತಹಸೀಲ್ದಾರ್ ಗಿರಿಜಾ, ಅರ್ಚಕ ರಾಮಕೃಷ್ಣ ಭಾರದ್ವಾಜ್, ಪೌರಾಯಕ್ತ ರಾಮದಾಸ್ ಎಸ್.ವಿ., ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ, ಸೈಯದ್ ಇರ್ಷಾದ್ ಉಲ್ಲಾ, ಮುಹಮ್ಮದ್ ಆಸ್ಗರ್ ಮುಖ್ಯ ಅತಿಥಿಗಳಾಗಿರುವರು.ಕಾರ್ಯಕ್ರಮದಲ್ಲಿ ಸೀರತ್ ಅಭಿಯಾನದ ಪ್ರಯುಕ್ತ ಶಾಂತಿ ಪ್ರಕಾಶನದ ವತಿಯಿಂದ ಪ್ರಕಟಿಸಲಾದ ’ಪ್ರವಾದಿ ಮುಹಮ್ಮದ್(ಸ) ಲೇಖನ ಸಂಕಲನ " ಪುಸ್ತಕವನ್ನು ಬಿಡುಗಡೆಗೊಳಿಸಲಾಗುವುದು. ಸಮಾಜದ ವಿವಿಧ ಕ್ಷೇತ್ರಗಳ ಗಣ್ಯವ್ಯಕ್ತಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದರು.ಪತ್ರಿಕಾಗೋಷ್ಠಿಯಲ್ಲಿ ಜನಾಬ್ ನಯೀಮ್ ಉಲ್ ಹಕ್ ಅಧ್ಯಕ್ಷರು, ಮದೀನಾ ಮಸೀದಿ ಆಡಳಿತ ಮಂಡಳಿ, ಮದೀನಾ ಮಸೀದಿ ಆಡಳಿತ ಮಂಡಳಿ ಕಾರ್ಯದರ್ಶಿ ವಸೀಮ್ ಪಾಷ, ಮೌಲಾನಾ ಹಾಫಿಝ್ ಸೈಯದ್ ಮೊಕ್ತಾರ್ ಅಹ್ಮದ್, ರೆಫ್ರಿನುಲ್ ಆಬಿದೀನ್, ವಸೀಂ ಪಾಷಾ ಇದ್ದರು.