ಕೊಂಡ್ಲಿ ಹೋಬಳಿ ಹಾಗೂ ಪಟ್ಟಣ ಮಟ್ಟದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ
ಕನ್ನಡಪ್ರಭ ವಾರ್ತೆ ಸಿದ್ದಾಪುರಸಾಮಾನ್ಯ ಜನರು ತಮ್ಮ ಕೆಲಸಕ್ಕಾಗಿ ಇಲಾಖೆಯಿಂದ ಇಲಾಖೆಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರ ಜನಸ್ಪಂದನ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಸಾಧ್ಯವಾದಷ್ಟು ಸ್ಥಳದಲ್ಲಿಯೇ ನಿಮ್ಮ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.ಪಟ್ಟಣದ ಶಂಕರಮಠದಲ್ಲಿ ಜರುಗಿದ ಕೊಂಡ್ಲಿ ಹೋಬಳಿ ಹಾಗೂ ಪಟ್ಟಣ ಮಟ್ಟದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಗೂ ಕೂಡ ಸರ್ಕಾರದ ಯೋಜನೆಗಳನ್ನು ತಲುಪಿಸುವುದು ಇದರ ಉದ್ದೇಶವಾಗಿದೆ. ಜನ ಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರ ನಡುವಿನ ಅಂತರವನ್ನು ಈ ಕಾರ್ಯಕ್ರಮ ನಿವಾರಿಸುತ್ತದೆ. ಸಾರ್ವಜನಿಕರು ಸಲ್ಲಿಸುವ ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಗುವುದು. ಕಳೆದ 2-3 ವರ್ಷಗಳಲ್ಲಿ ₹15 ಕೋಟಿಗೂ ಹೆಚ್ಚು ಹಣವನ್ನು ಪಪಂಗೆ ನೀಡಲಾಗಿದೆ. ₹16 ಕೋಟಿ ಗ್ರಾಮೀಣ ಭಾಗದ ಅಭಿವೃದ್ಧಿಗೆ ನೀಡಲಾಗಿದ್ದು 3 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಆಗಿವೆ. ಇನ್ನೂ ಹಲವು ಅಭಿವೃದ್ಧಿ ಕೆಲಸ ಬಾಕಿ ಇದ್ದು ಹಂತ ಹಂತವಾಗಿ ಕೆಲಸ ಪೂರ್ಣಗೊಳಿಸಲಾಗುವುದು. ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯೂ ಕೂಡ ಪ್ರಗತಿಯಲ್ಲಿದೆ. ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಜನತೆ ಪಡೆದುಕೊಳ್ಳುತ್ತಿದ್ದಾರೆ ಎಂದರು.ಅಧಿವೇಶನದಲ್ಲಿ ವಿರೋಧ ಪಕ್ಷದವರು ಗೃಹಲಕ್ಷ್ಮೀ ಯೋಜನೆಯ ಹಣ ಸಂದಾಯವಾಗುತ್ತಿಲ್ಲ ಎಂದು ಆಪಾದನೆ ಮಾಡುತ್ತಿದ್ದಾರೆ. ಆದರೆ ಅಧಿಕಾರಿಗಳಿಂದ ಪಡೆದ ದಾಖಲೆಯನ್ನು ಇಟ್ಟುಕೊಂಡು ಹೇಳುತ್ತಿದ್ದೇನೆ. ಒಂದು ಕಂತಿನ ಹೊರತಾಗಿ ಉಳಿದ ಹಣ ಸರಿಯಾಗಿ ಸಂದಾಯವಾಗುತ್ತಿದೆ. ಕಾರಣ ವಿರೋಧ ಪಕ್ಷಗಳು ಜನರಿಗೆ ಉಪಯೋಗವಾಗುವ ಯೋಜನೆಗಳ ಕುರಿತು ಆರೋಪ ಮಾಡುವುದು ಸರಿಯಲ್ಲ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಬೇಕು. ಹಣದ ಕೊರತೆ ಇದ್ದರೆ ಹಣ ನೀಡುತ್ತೇನೆ. ಸಾಮಾನ್ಯ ಜನರಿಗೆ ಮೂಲಭೂತ ಸೌಕರ್ಯದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ವೇದಿಕೆಯಲ್ಲಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ತಾಪಂ ಇಒ ದೇವರಾಜ ಹಿತ್ತಲಕೊಪ್ಪ ಇದ್ದರು. ತಹಶೀಲ್ದಾರ ಎಂ.ಆರ್. ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಶಿರಸ್ತೇದಾರ ಜಿ.ಎಲ್. ಶ್ಯಾಮಸುಂದರ ಸ್ವಾಗತಿಸಿ, ನಿರೂಪಿಸಿದರು. ಶಿರಸ್ತೇದಾರ ಸಂಗೀತಾ ಭಟ್ಟ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಸಹಕರಿಸಿದರು.93 ಅರ್ಜಿಗಳು ಸ್ವೀಕೃತ
ಎಲ್ಲ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದ ಈ ಸಭೆಯಲ್ಲಿ ರಸ್ತೆ, ವಿದ್ಯುತ್, ವಾಸದ ಮನೆ ನಿರ್ಮಾಣ ಮುಂತಾದ ಹಲವು ಸಮಸ್ಯೆಗಳ ಕುರಿತು 93 ಅರ್ಜಿಗಳು ಸ್ವೀಕೃತಗೊಂಡಿದ್ದು ಅವುಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಹಲವು ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಲಾಯಿತು. ಉಳಿದ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.
ಮಂಜೂರಾದ ಗ್ರಂಥಾಲಯ ಆರಂಭಕ್ಕೆ ಮನವಿಕಾರ್ಯಕ್ರಮದಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಮಂಜೂರಾದ ಗ್ರಂಥಾಲಯಗಳನ್ನು ಆರಂಭಿಸುವಂತೆ ಕ್ರಮ ತೆಗೆದುಕೊಳ್ಳಲು ಹಲವು ಗ್ರಂಥಪಾಲಕಿಯರು ಮನವಿ ಮಾಡಿದರು. ಕಟ್ಟಡ, ಪೀಠೋಪಕರಣ, ಪುಸ್ತಕಗಳೆಲ್ಲ ಇದ್ದೂ ಗ್ರಂಥಾಲಯ ಆರಂಭಗೊಳ್ಳದಿರುವುದು ಸಂಕಟ ತರುತ್ತಿದೆ ಎಂದ ಅವರ ಅಳಲಿಗೆ ಭೀಮಣ್ಣ ನಾಯ್ಕ ತಾಪಂ ಇಒ ಬಳಿ ಮಾಹಿತಿ ಕೇಳಿದರು. ತಾಪಂ ಇಒ ತಾಲೂಕಿಗೆ 10 ಗ್ರಂಥಾಲಯಗಳು ಅಕ್ಟೋಬರ್ ತಿಂಗಳಲ್ಲಿ ಮಂಜೂರಿಯಾಗಿದ್ದು ನಂತರದಲ್ಲಿ ಗ್ರಂಥಾಲಯ ಸ್ಥಗಿತಗೊಳಿಸಲು ಆದೇಶವಾಗಿದೆ ಎಂದರು. ಭೀಮಣ್ಣ ನಾಯ್ಕ ನಂತರ ಉತ್ತರಿಸಿ ನಾನು ನನ್ನ ಅನುದಾನದಲ್ಲಿ ಗ್ರಂಥಾಲಯಗಳಿಗೆ ಸಾಕಷ್ಟು ಹಣ ನೀಡಿದ್ದೇನೆ. ಈ ಕುರಿತು ಸಂಬಂಧಿಸಿದ ಸಚಿವರ ಜೊತೆ ಮಾತನಾಡಿ ಶೀಘ್ರವಾಗಿ ಆರಂಭಗೊಳಿಸಲು ಪ್ರಯತ್ನಿಸುತ್ತೇನೆ ಎಂದರು.