ಕೋಳಿ ಶೀತ ಜ್ವರಕ್ಕೆ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ: ಜಿಲ್ಲಾಧಿಕಾರಿ

| Published : Mar 04 2025, 12:32 AM IST

ಕೋಳಿ ಶೀತ ಜ್ವರಕ್ಕೆ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ: ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಕೋಳಿ ಶೀತ ಜ್ವರ (ಹಕ್ಕಿ ಜ್ವರ)ವು ಎಚ್5ಎನ್1 ವೈರಸ್ ನಿಂದ ಪಕ್ಷಿಗಳಿಗೆ ಹರಡುವ ಕಾಯಿಲೆಯಾಗಿದ್ದು, ಮನುಷ್ಯರಿಂದ ಮನುಷ್ಯರಿಗೆ ಸಾಂಕ್ರಾಮಿಕವಾಗಿ ಹರಡುವುದಿಲ್ಲ. ಹಾಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ.

ಸುದ್ದಿಗೋಷ್ಠಿಯಲ್ಲಿ ಪ್ರಶಾಂತ್ ಕುಮಾರ್ ಮಿಶ್ರಾ ಸ್ಪಷ್ಟನೆಕನ್ನಡಪ್ರಭ ವಾರ್ತೆ ಬಳ್ಳಾರಿ

ಕೋಳಿ ಶೀತ ಜ್ವರ (ಹಕ್ಕಿ ಜ್ವರ)ವು ಎಚ್5ಎನ್1 ವೈರಸ್ ನಿಂದ ಪಕ್ಷಿಗಳಿಗೆ ಹರಡುವ ಕಾಯಿಲೆಯಾಗಿದ್ದು, ಮನುಷ್ಯರಿಂದ ಮನುಷ್ಯರಿಗೆ ಸಾಂಕ್ರಾಮಿಕವಾಗಿ ಹರಡುವುದಿಲ್ಲ. ಹಾಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸ್ಪಷ್ಟನೆ ನೀಡಿದರು.

ಜಿಲ್ಲೆಯಲ್ಲಿ ಕಾಣಿಸಿಕೊಂಡ ಕೋಳಿ ಶೀತ ಜ್ವರಕ್ಕೆ ಸಂಬಂಧಿಸಿದಂತೆ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಾಮಾನ್ಯವಾಗಿ ಶೀಥಲ ಪ್ರದೇಶದ ವಲಸೆ ಹಕ್ಕಿಗಳು ವಂಶಾಭಿವೃದ್ಧಿಗಾಗಿ ಬಂದಾಗ ಹಿಕ್ಕೆ, ಪುಕ್ಕ ಹಾಗೂ ಬಾಯಿ ಮತ್ತು ಕಣ್ಣಿನಿಂದ ಹೊರಬರುವ ಸ್ರವಿಕೆಯಿಂದ ಕಾಯಿಲೆ ಹರಡುವ ಸಂಭವವಿದ್ದು, ಪಕ್ಷಿಗಳಿಗೆ ರೋಗವು ಹರಡುತ್ತದೆ ಎಂದು ತಿಳಿಸಿದರು.

ಬೇಯಿಸಿ ನಂತರ ಸೇವಿಸಿ:

ಸಾರ್ವಜನಿಕರು ಮಾಂಸ ಮತ್ತು ಮೊಟ್ಟೆಗಳನ್ನು 70 ಡಿಗ್ರಿ ಅಧಿಕ ಉಷ್ಣಾಂಶದಲ್ಲಿ ಕನಿಷ್ಠ 30 ನಿಮಿಷ ಬೇಯಿಸಿದಾಗ ವೈರಾಣು ನಾಶಗೊಳ್ಳುತ್ತದೆ. ಹಾಗಾಗಿ ಸಾರ್ವಜನಿಕರು ಮಾಂಸ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿದ ನಂತರ ಸೇವನೆ ಮಾಡಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಫೆ.23ರಂದು ಕುರೇಕುಪ್ಪ ಕುಕ್ಕುಟ ಸಂವರ್ಧನಾ ಕೇಂದ್ರದಲ್ಲಿ ಸಾಕಾಣಿಕೆ ಮಾಡಿದ ಅಸಿಲ್ ಮತ್ತು ಕಾವೇರಿ ತಳಿಯ ಕೋಳಿಗಳಿಗೆ ಕೋಳಿ ಶೀತ ಜ್ವರ ರೋಗದ ಲಕ್ಷಣ ಕಂಡುಬಂದು ಕೆಲವು ಕೋಳಿಗಳು ಮರಣ ಹೊಂದಿದ್ದವು. ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿನ ಐಎಹೆಚ್ ಮತ್ತು ವಿಬಿಗೆ ಮರಣ ಹೊಂದಿದ ಕೋಳಿಗಳ ಮಾದರಿ ಕಳುಹಿಸಲಾಗಿತ್ತು. ಫೆ.25 ರಂದು ಭೋಪಾಲ್‌ನ ಐಸಿಎಆರ್–ರಾಷ್ಟ್ರೀಯ ಹೈ ಸೆಕ್ಯುರಿಟಿ ಪ್ರಾಣಿ ರೋಗಗಳ ಪ್ರಯೋಗಾಲಯ ಸಂಸ್ಥೆಯಿಂದ ರೋಗ ದೃಢೀಕರಣವಾಗಿರುವ ವರದಿ ಬಂದ ನಂತರ ಕೋಳಿ ಶೀತ ಜ್ವರ ರೋಗೋದ್ರೇಕಗೊಂಡಿರುವ ಬಗ್ಗೆ ಘೋಷಿಸಲಾಯಿತು. ಆಗ ಮಾರ್ಗಸೂಚಿಯಂತೆ ಇರುವ 2400 ಕೋಳಿಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ ಎಂದರು.

ಫೆ.28ರಂದು ಕಪ್ಪಗಲ್ ಗ್ರಾಮದಲ್ಲಿ ಇಂಟಿಗ್ರೇಷನ್ ಪದ್ಧತಿಯಲ್ಲಿ ಮಾಂಸದ ಕೋಳಿಗಳನ್ನು ಸಾಕಾಣಿಕೆ ಮಾಡುವ ಕೇಂದ್ರದಲ್ಲಿ ಅಸಹಜವಾಗಿ ಕೋಳಿಗಳು ಮರಣ ಹೊಂದಿದ್ದವು. ಪಶುಪಾಲನಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಒಟ್ಟು 15,000 ಕೋಳಿಗಳ ಪೈಕಿ 8,000 ಕೋಳಿಗಳು ಮರಣ ಹೊಂದಿದ್ದವು. ಮರಣ ಹೊಂದಿದ ಕೋಳಿಗಳ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿನ ಐಎಹೆಚ್ ಮತ್ತು ವಿಬಿ ಹಾಗೂ ಭೋಪಾಲ್‌ನ ಐಸಿಎಆರ್–ರಾಷ್ಟ್ರೀಯ ಹೈ ಸೆಕ್ಯುರಿಟಿ ಪ್ರಾಣಿ ರೋಗಗಳ ಪ್ರಯೋಗಾಲಯ ಸಂಸ್ಥೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಜಿಲ್ಲೆಯಲ್ಲಿ ಒಟ್ಟು 74 ಮಾಂಸದ ಕೋಳಿ (ಫಾರಂ) ಹಾಗೂ 14 ಮೊಟ್ಟೆ ಕೋಳಿ ಸಾಕಾಣಿಕೆ ಕೇಂದ್ರಗಳಿವೆ ಹಾಗೂ 1,30,221 ಹಿತ್ತಲ ಕೋಳಿ ಇವೆ. ಮರಣ ಹೊಂದಿದ ಕೋಳಿಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ ಮತ್ತು ಕೋಳಿ ಶೀತ ಜ್ವರ ಕಂಡಿರುವ ಕೋಳಿ ಸಾಕಾಣಿಕೆ ಕೇಂದ್ರವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಿ ವಾಹನಗಳ ಮತ್ತು ಸಾರ್ವಜನಿಕರ ಪ್ರವೇಶ ನಿಷೇಧಿಸಲು ಕ್ರಮವಹಿಸಲಾಗಿದೆ ಎಂದರು.

ಕಪ್ಪಗಲ್ ಗ್ರಾಮದ ಕೋಳಿ ಸಾಕಾಣಿಕೆ ಕೇಂದ್ರದ 1 ಕಿಮೀ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಕೋಳಿ ಶೀತ ಜ್ವರದ ಬಗ್ಗೆ ಅರಿವು ಮೂಡಿಸಲು ಡಂಗುರ ಸಾರಲಾಗಿದೆ. ರಸಾಯನಿಕ ದ್ರಾವಣ ಸಿಂಪಡಿಸಿ ಸ್ಯಾನಿಟೈಜೇಷನ್ ಮಾಡಲಾಗಿದೆ. ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಇರುವ ಹಿತ್ತಲ ಕೋಳಿಗಳ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.

ಜಿಪಂ ಸಿಇಒ ಮಹಮ್ಮದ್ ಹಾರಿಸ್ ಸುಮೇರ್ ಮಾತನಾಡಿ, ಜಿಲ್ಲೆಯಲ್ಲಿ ಕೋಳಿ, ಬಾತುಕೋಳಿ, ವಲಸೆ ಬರುವ ಹಕ್ಕಿಗಳಲ್ಲಿ ಅಸಹಜ ಸಾವು ಉಂಟಾದಲ್ಲಿ ಕೂಡಲೇ ಹತ್ತಿರದ ಪಶು ವೈದ್ಯಕೀಯ ಇಲಾಖೆಗೆ ಮಾಹಿತಿ ನೀಡಬೇಕು. ಈ ಭಾಗದಲ್ಲಿ ದರೋಜಿ ಕೆರೆ ಭಾಗದಲ್ಲಿ ವಿವಿಧ ರೀತಿಯ ಪಕ್ಷಿಗಳು ವಲಸೆ ಬರುತ್ತಿರುತ್ತವೆ. ಈ ಕುರಿತು ನಿಗಾವಹಿಸಲಾಗಿದೆ ಎಂದರು.

ಅಧಿಕಾರಿಗಳಿಗೆ ನಿರ್ದೇಶನ:

ಈಗಾಗಲೇ ಜಿಲ್ಲೆಯಲ್ಲಿ ಕೋಳಿ ಶೀತ ಜ್ವರದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಎಲ್ಲಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಕೋಳಿ ಸಾಕಾಣಿಕಾ ಕೇಂದ್ರಗಳ ಮಾಲೀಕರಿಗೆ ಕೋಳಿಗಳಲ್ಲಿ ಅಸಹಜ ಸಾವು ಕಂಡು ಬಂದಲ್ಲಿ ತಕ್ಷಣವೇ ಪಶು ಪಾಲನಾ ಇಲಾಖೆಗೆ ತಿಳಿಸುವಂತೆ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟ ಅಂಗಡಿಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಕ್ರಮವಹಿಸಲು ಸೂಚನೆ ನೀಡಲಾಗಿದೆ ಎಂದರು.

ಈ ಸಂದರ್ಭ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಹನುಮಂತ ನಾಯ್ಕ ಕಾರಬಾರಿ, ಸಹಾಯಕ ನಿರ್ದೇಶಕ ಡಾ. ಶ್ರೀನಿವಾಸ ಇದ್ದರು.

ಸಿಬ್ಬಂದಿಗೆ ತರಬೇತಿ:ಜಿಲ್ಲೆಗೆ ಬೆಂಗಳೂರಿನ ಐಎಎಚ್ ಮತ್ತು ವಿಬಿ ಪ್ರಯೋಗಾಲಯದ ವಿಜ್ಞಾನಿಗಳು ಮತ್ತು ಪಶುಪಾಲನಾ ಇಲಾಖೆಯ ನಿರ್ದೇಶಕರು ಭೇಟಿ ನೀಡಿ ಹಕ್ಕಿ ಜ್ವರದ ನಿಯಂತ್ರಣ ಮಾರ್ಗಸೂಚಿಯಂತೆ ಕಟ್ಟೆಚ್ಚರ ವಹಿಸಲು ಜಿಲ್ಲೆಯ ವಿವಿಧ ತಾಲೂಕುಗಳ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಗೆ ತರಬೇತಿ ನೀಡಿ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಕ್ರಮ ಜರುಗಿಸಲು ಪಶುವೈದ್ಯಾಧಿಕಾರಿಗಳ ನೇತೃತ್ವದಲ್ಲಿ 13 ಕ್ಷೀಪ್ರ ಪ್ರತಿಕ್ರಿಯೆ ತಂಡ (ರಾಪಿಡ್ ರೆಸ್ಪಾನ್ಸ್ ಟೀಮ್) ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.