ವಿದ್ಯುತ್‌ ಕಡಿತಕ್ಕೆ ಜನಾಕ್ರೋಶ: ರಸ್ತೆಗಿಳಿದು ಪ್ರತಿಭಟನೆ

| Published : Apr 24 2024, 02:18 AM IST

ವಿದ್ಯುತ್‌ ಕಡಿತಕ್ಕೆ ಜನಾಕ್ರೋಶ: ರಸ್ತೆಗಿಳಿದು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಗವಾಡ ತಾಲೂಕಿನ ಜುಗೂಳ, ಮಂಗಾವತಿ, ಶಹಾಪೂರ ಮತ್ತು ಶಿರಗುಪ್ಪಿ ಗ್ರಾಮಗಳ ಕೃಷ್ಣಾ ನದಿ ತೀರದ ರೈತರ ಪಂಪ್‌ಸೆಟ್‌ಗಳಿಗೆ 7 ಗಂಟೆ ನಿರಂತರ ಥ್ರೀಫೆಸ್ ವಿದ್ಯುತ್ ನೀಡುವಂತೆ ಆಗ್ರಹಿಸಿ, ರೈತರು ಮಿರಜ್-ಚಿಕ್ಕೋಡಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ತಾಲೂಕಿನ ಜುಗೂಳ, ಮಂಗಾವತಿ, ಶಹಾಪೂರ ಮತ್ತು ಶಿರಗುಪ್ಪಿ ಗ್ರಾಮಗಳ ಕೃಷ್ಣಾ ನದಿ ತೀರದ ರೈತರ ಪಂಪ್‌ಸೆಟ್‌ಗಳಿಗೆ 7 ಗಂಟೆ ನಿರಂತರ ಥ್ರೀಫೆಸ್ ವಿದ್ಯುತ್ ನೀಡುವಂತೆ ಆಗ್ರಹಿಸಿ, ರೈತರು ಮಿರಜ್-ಚಿಕ್ಕೋಡಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿದರು.

ಈ ವೇಳೆ ಅನೇಕ ರೈತ ಮುಖಂಡರು ಮಾತನಾಡಿ, ಜುಗೂಳ, ಶಿರಗುಪ್ಪಿ ಶಹಾಪೂರ ಮತ್ತು ಮಂಗಾವತಿ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ. ಕೃಷ್ಣಾ ನದಿಯಲ್ಲಿ ಇನ್ನೂ ಸಾಕಷ್ಟು ನೀರು ಇದೆ. ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಬೆಳೆದಿರುವ ನಮ್ಮ ಬೆಳೆಗಳು ನೀರಿಲ್ಲದೇ ಒಣಗುತ್ತೀವೆ. ಕೃಷ್ಣಾ ನದಿ ನೀರು ನಾವು ಉಪಯೋಗ ಮಾಡದೇ ಹೋದರೂ ಸಹ ನದಿ ಪಕ್ಕದಲ್ಲಿ ಮಹಾರಾಷ್ಟ್ರದ ಗ್ರಾಮಗಳಲ್ಲಿ ನಿರಂತರ ವಿದ್ಯುತ್ ಪೂರೈಕೆ ಇದ್ದು, ಅವರು ಆ ನೀರನ್ನು ತಮ್ಮ ಜಮೀನುಗಳುಗೆ ಉಪಯೋಗಿಸುತ್ತಿದ್ದಾರೆ. ಆದ್ದರಿಂದ ಕೂಡಲೇ 7 ಗಂಟೆ ನಿರಂತರ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿ, ರಸ್ತೆ ತಡೆ ನಡೆಸಿದರು.

ಈ ವೇಳೆ ಕೆಲಹೊತ್ತು ರೈತರ ಮತ್ತು ಪೊಲೀಸ್‌ರ ಮಧ್ಯ ಮಾತಿನ ಚಕಮಕಿ ಉಂಟಾಯಿತು. ಸಿಪಿಐ ರವೀಂದ್ರ ನಾಯ್ಕೋಡಿ ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿ ಪ್ರತಿಭನಾಕಾರರಿಗೆ ಮನವರಿಕೆ ಮಾಡಿದರು. ನಿಮ್ಮ ಬೇಡಿಕೆಗಳನ್ನು ಜಿಲ್ಲಾಧಿಕಾರಿಗೊಂದಿಗೆ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳಿ. ಹೀಗೆ ರಸ್ತೆ ತಡೆ ಮಾಡಿ ನಾಗರೀಕರಿಗೆ ತೊಂದರೆ ನೀಡಬೇಡಿ ಎಂದು ತಿಳಿಹೇಳಿದರು. ಅದಕ್ಕೆ ಪ್ರತಿಭಟನಾನಿರತ ರೈತರು ಒಪ್ಪಿ ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಂಡು ಎರಡು ದಿನಗಳಲ್ಲಿ ನಮ್ಮ ಬೇಡಿಕೆ ಈಡೇರಿಸದಿದ್ದರೇ ತಹಸೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ತಹಸೀಲ್ದಾರ್‌ ಎಸ್.ಬಿ.ಇಂಗಳೆ, ಪಿಎಸೈ ಎಂ.ಬಿ.ಬಿರಾದಾರ, ಉಗಾರ ಹೆಸ್ಮಾಂ ಎಇಇ ಡಿ.ಎ.ಮಾಳಿ, ಶಿರಗುಪ್ಪಿ ಗ್ರಾಪಂ ಉಪಾಧ್ಯಕ್ಷ ರಾಮಗೌಡ ಪಾಟೀಲ, ಜುಗೂಳ ಗ್ರಾಪಂ ಅಧ್ಯಕ್ಷ ಕಾಕಾಸಾಬ ಪಾಟೀಲ, ರೈತ ಮುಖಂಡರಾದ ಅಣ್ಣಾಸಾಬ ಪಾಟೀಲ, ಅಭಯಕುಮಾರ ಅಕಿವಾಟೆ, ಸುರೇಶ ಚೌಗುಲೆ, ಅನೀಲ ಕಡೋಲೆ, ಅನೀಲ ಸುಂಕೆ, ಸುಧಾಕರ ಗಣೇಶವಾಡಿ, ಎಸ್.ಬಿ.ಪಾಟೀಲ, ಭಮ್ಮಣ್ಣಾ ಚೌಗುಲಾ, ರವಿಂದ್ರ ವವಹಾಂಟೆ, ರಾಜು ಕಡೋಲಿ ಸೇರಿದಂತೆ ಎಲ್ಲ ಗ್ರಾಮಗಳ ಮುಖಂಡರು, ರೈತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

-----

ನದಿಯಲ್ಲಿ ಸಾಕಷ್ಟು ಪ್ರಮಾನದಲ್ಲಿ ನೀರಿದ್ದರೂ ಸಹ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ. ಆ ಕಡೆ ಮಹಾರಾಷ್ಟ್ರದ ರೈರಿಗೆ ದಿನದ 24 ಗಂಟೆ ವಿದ್ಯುತ್ ಇದೆ. ನಮ್ಮ ಭಾಗಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೂ ಮಹಾರಾಷ್ಟ್ರದವರು ನೀರೆತ್ತುತ್ತಿದ್ದಾರೆ. ಆದ್ದರಿಂದ ಕುಡಿಯುವ ನೀರಿನ ಯಾವುದೇ ಸಮಸ್ಯೆಯಲ್ಲಿ ನಮಗೆ ದಿನದ 7 ಗಂಟೆಯಾದರೂ ವಿದ್ಯುತ್ ನೀಡುವಂತೆ ಮನವಿ ಮಾಡುತ್ತಿದ್ದೇವೆ. ಆದರೆ, ಈ ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ.

ಅಣ್ಣಾಸಾಬ ಪಾಟೀಲ, ಪ್ರಗತಿಪರ ರೈತರು ಜುಗೂಳ.ಮಹಾರಾಷ್ಟ್ರದ ರೈತರು ದಿನದ 24 ಗಂಟೆ ನದಿಯಲ್ಲಿಯ ನೀರನ್ನು ಬೆಳೆಗಳಿಗೆ ಹಾಯಿಸುತ್ತಿದ್ದರೇ ನಾವು ಒಂದು ದಿನ ಬಿಟ್ಟು ಒಂದು ದಿನ 4 ಗಂಟೆ ನೀರು ಹಾಯಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದೋದಗಿದೆ. ಜಿಲ್ಲಾಧಿಕಾರಿಗಳು ಜಿಲ್ಲಾ ಕಚೇರಿಯಲ್ಲಿ ಕುಳಿತು ಆದೇಶ ಮಾಡುವುದಕ್ಕಿಂತ ಈ ಭಾಗಕ್ಕೆ ಆಗಮಿಸಿ ಪರಿಸ್ಥಿತಿ ಅರ್ಥ ಮಾಡಿಕೊಂಡು ರೈತರಿಗೆ ನ್ಯಾಯ ಒದಗಿಸಬೇಕು.

-ಅಭಯಕುಮಾರ ಅಕಿವಾಟೆ,

ಜನಪರ ಹೋರಾಟಗಾರರು ಶಿರಗುಪ್ಪಿ.