ಸಾರಾಂಶ
ಹಿರೇಕೊಳಲೆ ಗ್ರಾಮ ಪಂಚಾಯ್ತಿಯಲ್ಲಿ ಜನ ಸಂಪರ್ಕ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜನಸಂಪರ್ಕ ಸಭೆಗಳು ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಭೆಗಳಾಗಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದ್ದಾರೆ.
ಹಿರೇಕೊಳಲೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಜನಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದಿಂದ ತಾಲೂಕು, ಜಿಲ್ಲಾ ಕೇಂದ್ರಕ್ಕೆ ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ಬರುವುದನ್ನು ತಡೆಯುವ ಉದ್ದೇಶದಿಂದ ತಾಲೂಕು ಅಧಿಕಾರಿಗಳ ಮೂಲಕ ಆಡಳಿತ ವ್ಯವಸ್ಥೆಯನ್ನು ಜನರ ಮನೆಯ ಬಾಗಿಲಿಗೆ ತರಲು ಜನಸಂಪರ್ಕ ಸಭೆ ನಡೆಸಿ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲಾಗುತ್ತಿದೆ ಎಂದರು.ನಾಗರಿಕರ ಮೂಲಭೂತ ಸಮಸ್ಯೆಗಳಾದ ಮನೆ, ನಿವೇಶನ, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯ ಸಿಗದಿರುವವರು, ವೃದ್ಧಾಪ್ಯ ವೇತನ ಸೇರಿದಂತೆ ಸಮಸ್ಯೆಗಳನ್ನು ಸಭೆ ಗಮನಕ್ಕೆ ತರಬೇಕು ಎಂದ ಅವರು, ನಿಜವಾದ ಬಡವರು ಹೊಂದಿರುವ ಬಿಪಿಎಲ್ ಕಾರ್ಡನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸಬಾರದೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಹಿರೇಕೊಳಲೆ ಗ್ರಾ.ಪಂ ವ್ಯಾಪ್ತಿಯ ಹಿರೇಕೊಳಲೆಗೆ ₹ 20 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ, ಹೊಸಪುರ ರಸ್ತೆಗೆ ₹50 ಲಕ್ಷ, ಕಾಲೋನಿಗೆ ₹20 ಲಕ್ಷ , ನರಗನಹಳ್ಳಿ ಸಮುದಾಯ ಭವನಕ್ಕೆ ₹5 ಲಕ್ಷ , ಹಿರೇಕೊಳಲೆ ಸಾರ್ವಜನಿಕ ಸಮುದಾಯ ಭವನಕ್ಕೆ ₹5 ಲಕ್ಷ , ಚಿಕ್ಕೊಳಲೆ-ಕಾರೇಮನೆ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ₹5 ಲಕ್ಷ ಸೇರಿದಂತೆ ಒಟ್ಟು ₹90 ಲಕ್ಷ ಅನುದಾನವನ್ನು ಈ ಪಂಚಾಯಿತಿಗೆ ನೀಡಲಾಗಿದೆ ಎಂದರು.ಇದೇ ಪಂಚಾಯಿತಿ ವ್ಯಾಪ್ತಿಯ ಹೊಸಪುರ-ವಡೆಯರಪುರ ಈ ಎರಡು ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಆಯ್ಕೆ ಮಾಡಲಾಗಿದ್ದು, ಹೊಸಪುರ ಗ್ರಾಮದ 16 ಫಲಾನುಭವಿಗಳಿಗೆ ನಿವೇಶನ, ಹಕ್ಕುಪತ್ರ ನೀಡಲಾಗಿದೆ ಎಂದು ತಿಳಿಸಿದ ಅವರು, ಕ್ಷೇತ್ರದ ಪ್ರತೀ ಗ್ರಾಪಂ ವ್ಯಾಪ್ತಿ ಯಲ್ಲಿ 2 ರಿಂದ 4 ಎಕರೆ ಜಾಗ ಗುರುತಿಸಿ ಬಡವರಿಗೆ, ನಿರಾಶ್ರಿತರಿಗೆ, ನಿವೇಶನ ರಹಿತರಿಗೆ ಉಚಿತವಾಗಿ ನಿವೇಶನ ನೀಡುವಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.ಕ್ಷೇತ್ರದ 34 ಗ್ರಾಪಂ ಗಳಲ್ಲಿ ಇದೇ ಆದೇಶ ಹೊರಡಿಸಲಾಗಿದ್ದು, ಸಧ್ಯದಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಶಾಸಕರು, ಜನಸಂಪರ್ಕ ಸಭೆಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಸೂಕ್ತ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್. ಹರೀಶ್ ಮಾತನಾಡಿ, ಜನಪರವಾಗಿ ಕೆಲಸ ಮಾಡಬೇಕೆಂಬ ಉದ್ದೇಶದಿಂದ ಸರ್ಕಾರ ಜನಸಂಪರ್ಕ ಸಭೆಗಳನ್ನು ಆಯೋಜನೆ ಮಾಡುತ್ತಿದೆ. ಸರ್ಕಾರದ ಸೌಲಭ್ಯ ಜನರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದರು.
ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದ ಹಿರೇಕೊಳಲೆ ಗ್ರಾಪಂ ಅಧ್ಯಕ್ಷೆ ಕವಿತಾ ಸುನಿಲ್‌ಕುಮಾರ್, ಮನೆ, ಹಕ್ಕುಪತ್ರ, ನಿವೇಶನ ಸೇರಿ ದಂತೆ ಜನರ ಯಾವುದೇ ಸಮಸ್ಯೆಗಳಿದ್ದರೂ ಈ ಸಭೆಯಲ್ಲಿ ಶಾಸಕರು, ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದರು.ತಹಸೀಲ್ದಾರ್ ಡಾ. ಸುಮಂತ್ ಮಾತನಾಡಿ, ಹೊಸಪುರ, ವಡೆಯರಪುರ ಈ ಎರಡು ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಆಯ್ಕೆ ಮಾಡಿ ಹೊಸಪುರದ 16 ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ನೀಡಲಾಗಿದೆ. ವಡೆಯರಪುರದ ಫಲಾನುಭವಿಗಳಿಗೆ ಮುಂದೆ ನಿವೇಶನ ಹಕ್ಕು ಪತ್ರ ನೀಡಲಾಗುವುದು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ತಾಪಂ ಕಾರ್ಯನಿರ್ವಹಕ ಅಧಿಕಾರಿ ವಿಜಯಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಕೆ.ರೇಣುಕ, ಪುಷ್ಪ, ಪೂರ್ಣೇಶ್, ಎಚ್.ಎನ್. ಶಿವಕುಮಾರ್, ಸಿ.ಪಿ.ವಿನಯ್, ಜಿ.ಎಸ್.ಪೂರ್ಣಿಮ, ಎನ್.ಇ. ಸಂದೀಪ್, ಪ್ರಕಾಶ್, ವಿಶಾಲಾಕ್ಷಿ ಉಪಸ್ಥಿತರಿದ್ದರು. 24 ಕೆಸಿಕೆಎಂ 2ಚಿಕ್ಕಮಗಳೂರು ತಾಲೂಕಿನ ಹಿರೇಕೊಳಲೆ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಜನಸಂಪರ್ಕ ಸಭೆಯನ್ನು ಪಂಚಾಯ್ತಿ ಅಧ್ಯಕ್ಷೆ ಕವಿತಾ ಸುನಿಲ್ ಕುಮಾರ್ ಉದ್ಘಾಟಿಸಿದರು. ಶಾಸಕ ಎಚ್.ಡಿ. ತಮ್ಮಯ್ಯ, ಬಿ.ಎಚ್. ಹರೀಶ್, ತಹಸೀಲ್ದಾರ್ ಡಾ. ಸುಮಂತ್, ತಾಪಂ ಇಒ ವಿಜಯಕುಮಾರ್ ಇದ್ದರು.