ಸಾರಾಂಶ
ಗ್ರಾಮ ಒನ್ ಸಿಬ್ಬಂದಿಗೆ ದೊಡ್ಡ ತಲೆನೋವಾದ ಸರ್ವರ್ ಸಮಸ್ಯೆ, ಕಾಯ್ದು ಸುಸ್ತಾದ ಗ್ರಾಹಕರು
ಪರಶಿವಮೂರ್ತಿ ದೋಟಿಹಾಳ
ಕನ್ನಡಪ್ರಭ ವಾರ್ತೆ ಕುಷ್ಟಗಿಸರ್ಕಾರದ ಸೌಲಭ್ಯ ಪಡೆಯಲು ಪಡಿತರ ಚೀಟಿ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದ್ದು, ಸರ್ವರ್ ಸಮಸ್ಯೆಯಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜನರು ತಾಲೂಕಿನ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಅಲೆದಾಡುವಂತಾಗಿದೆ.
ಆಹಾರ ಇಲಾಖೆಯು ತಂತ್ರಾಂಶದಲ್ಲಿ ಜು. 2 ಮತ್ತು 3ರಂದು ಪಡಿತರ ಚೀಟಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಿತ್ತು. ಆದರೆ ಸರ್ವರ್ ತೊಂದರೆಯಿಂದಾಗಿ ಜನರು ಪರದಾಡಿದರು, ಯಾವುದೇ ಪ್ರಯೋಜನವಾಗಿಲ್ಲಗ್ರಾಮೀಣ ಪ್ರದೇಶದ ಗ್ರಾಮ ಒನ್ ಕೇಂದ್ರ, ಪಟ್ಟಣ ಹಾಗೂ ನಗರದ ಕರ್ನಾಟಕ ಒನ್ ಕೇಂದ್ರಗಳಲ್ಲಿ ಹೊಸ ಅರ್ಜಿ ಹಾಗೂ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿತ್ತು. ದಿನಾಂಕ ವಿಸ್ತರಣೆ ಮಾಡಿದಾಗಲೆಲ್ಲ ಸರ್ವರ್ ಸ್ಥಗಿತೊಳ್ಳುವುದು ಸಾಮಾನ್ಯವಾಗಿದ್ದು, ಇದು ತಾಲೂಕು, ಜಿಲ್ಲೆ ಮತ್ತು ರಾಜ್ಯಾದ್ಯಂತ ವ್ಯಾಪಿಸಿದೆ.
ದೊಡ್ಡ ತಲೆನೋವು:ಆಹಾರ ಇಲಾಖೆಯವರು ತಿಂಗಳಿಗೆ ಒಂದು ಅಥವಾ ಎರಡು ದಿನ ಪಡಿತರ ಚೀಟಿ ಕೆಲಸಕ್ಕಾಗಿ ಸೈಟ್‌ನ್ನು ಓಪನ್ ಮಾಡುತ್ತಿದ್ದು, ಇದರಿಂದ ಗ್ರಾಮದಲ್ಲಿರುವ ಜನರು ಕೇಂದ್ರಗಳ ಮುಂದೆ ಜಮಾವಣೆಯಾಗುತ್ತಿದ್ದು, ಬೇರೆ ಕೆಲಸ ಬಿಟ್ಟು ಪಡಿತರ ಚೀಟಿ ಮಾಡಿಸಿಕೊಳ್ಳಲೆಂದೆ ಬರುತ್ತಿದ್ದಾರೆ. ಆದರೆ ಸರ್ವರ್ ಸಮಸ್ಯೆಯಿಂದ ಅದು ಸಾಧ್ಯವಾಗುತ್ತಿಲ್ಲ. ಇದರಿಂದ ದೊಡ್ಡ ತಲೆನೋವಾಗಿದೆ ಎನ್ನುತ್ತಾರೆ ಗ್ರಾಮ ಒನ್ ಸಿಬ್ಬಂದಿ.
ಹೊಸ ಪಡಿತರಕ್ಕಾಗಿ ಬೆಳಗ್ಗೆ 10ರಿಂದ ಮಧ್ಯಾಹ್ನ 12 ಗಂಟೆ ಹಾಗೂ ತಿದ್ದುಪಡಿಗಾಗಿ ಸಂಜೆ 4ರಿಂದ 6ರವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಎರಡು ದಿನವೂ ಬೆಳಗ್ಗೆ 10 ಗಂಟೆಯಿಂದ ಗ್ರಾಮ ಒನ್ ಕೇಂದ್ರ ಹಾಗೂ ಕರ್ನಾಟಕ ಒನ್ ಕೇಂದ್ರಕ್ಕೆ ಬರುತ್ತಿದ್ದ ಜನರು ಸರ್ವರ್‌ಗಾಗಿ ಕಾದು ನಿರಾಸೆಯಿಂದ ಹೋಗುತ್ತಿದ್ದರು. 2 ದಿನದಲ್ಲಿ ಕೇವಲ 10 ಅರ್ಜಿ ಸಲ್ಲಿಕೆಯಾಗಿವೆ. ಕೇಸೂರು ಗ್ರಾಮ ಒನ್ ಕೇಂದ್ರದಲ್ಲಿ ಸುಮಾರು 50ಕ್ಕೂ ಹೆಚ್ಚಿನ ಜನ ಬಂದಿದ್ದರೂ ಒಬ್ಬರದೂ ಅರ್ಜಿ ಸ್ವೀಕಾರವಾಗಿಲ್ಲ. ಹಾಗಾಗಿ ಎಲ್ಲರೂ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿದರು.ಇಲಾಖೆ ವಿರುದ್ಧ ಆಕ್ರೋಶ:
ಜನಸಾಮಾನ್ಯರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಇಡೀ ದಿನ ಸೇವಾ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಂತರೂ ಕೆಲಸ ಆಗುತ್ತಿಲ್ಲ. ಇದರಿಂದ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.ಕೂಡಲೇ ಸರ್ವರ್ ಸರಿಪಡಿಸಬೇಕು ಹಾಗೂ ನೋಂದಣಿ ದಿನಾಂಕ ವಿಸ್ತರಣೆ ಮಾಡಬೇಕು ಎಂದು ಕೇಸೂರು ಗ್ರಾಮ ಒನ್ ಕೇಂದ್ರಕ್ಕೆ ಬಂದಿದ್ದ ಸಾರ್ವಜನಿಕರಾದ ಸುರೇಶ ಮೇಟಿ, ಬಸವರಾಜ ಕಡಿವಾಳ, ಮಂಜುನಾಥ ಅಂಗಡಿ, ಶಿವನಗೌಡ ಒತ್ತಾಯಿಸಿದ್ದಾರೆ.