ಆಂದೋಲನ ಸಭೆಯಲ್ಲಿ ನೂರಾರು ಅರ್ಜಿಗನ್ನು ಗ್ರಾಮಸ್ಥರು ಸಲ್ಲಿಸಿದರು. ಶಾಸಕರು ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಅಧಿಕಾರಿಗಳಿಗೆ ರವಾನಿಸಿದರು.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಜನರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡುಸುವುದನ್ನು ತಪ್ಪಿಸಲು ಸಮಸ್ಯೆಗಳಿಗೆ ಅರ್ಜಿ ಕೊಟ್ಟ ಸ್ಥಳದಲ್ಲೇ ಸಾಧ್ಯವಾದಷ್ಟು ಬಗೆಹರಿಸುವ ಸಲುವಾಗಿ ವಿನೂತನವಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪ್ರಜಾ ಸೇವೆ ಆಂದೋಲನ ಹೆಚ್ಚು ಜನಪ್ರಿಯಗೊಳ್ಳುತ್ತಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.ತಾಲೂಕಿನ ಬೂದಿಕೋಟೆ ಹೋಬಳಿ ಕೇಂದ್ರದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ವಾರ ಈ ಆಂದೋಲನ ಜಾರಿಗೆ ಬಂದಿದೆ, ಗ್ರಾಮೀಣ ಜನರು ಪ್ರತಿಯೊಂದು ವಿಷಯಕ್ಕೂ ಅರ್ಜಿ ಹಿಡಿದು ತಾಲೂಕು ಕಚೇರಿಗೆ ಅಲೆಯುವಂತಾಗಿ, ಚಪ್ಪಲಿ ಸವೆದರೂ ಕೆಲಸ ಮಾತ್ರ ಶೂನ್ಯವಾಗಿತ್ತು. ಇದನ್ನು ಅರಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಆಡಳಿತ ಅವಧಿಯಲ್ಲಿ ಹೆಜ್ಜೆ ಗುರುತು ಬಿಟ್ಟು ಹೋಗುವ ಸಲುವಾಗಿ ಈ ಪ್ರಜಾಸೇವೆ ಆಂದೋಲನ ಕಾರ್ಯಕ್ರಮ ಜಾರಿಗೊಳಿಸಿದ್ದಾರೆ. ಈ ಆಂದೋಲನ ಜನರ ಧ್ವನಿಯಾಗಿದೆ. ವಿನಾಕಾರಣ ಜನರನ್ನು ಅಲೆಯುವಂತೆ ಮಾಡದೆ ಎಲ್ಲಾ ದೂರುಗಳನ್ನು ದಾಖಲಿಸಿ ಪರಿಹಾರ ಕಲ್ಪಿಸಲಾಗುವುದು ಎಂದು ಹೇಳಿದರು.
ಆಂದೋಲನ ಸಭೆಯಲ್ಲಿ ನೂರಾರು ಅರ್ಜಿಗನ್ನು ಗ್ರಾಮಸ್ಥರು ಸಲ್ಲಿಸಿದರು. ಶಾಸಕರು ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಅಧಿಕಾರಿಗಳಿಗೆ ರವಾನಿಸಿದರು.ಸಭೆಯಲ್ಲಿ ತಹಸೀಲ್ದಾರ್ ಸುಜಾತ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಮುನಿರಾಜು, ಡಿಡಿಎಲ್ ಆರ್ ಸಂಜಯ್, ತಾಪಂ ಇಒ ರವಿಕುಮಾರ್, ಸಮಾಜ ಸೇವಕ ಎ.ಬಾಬು, ಬ್ಲಾಕ್ ಅಧ್ಯಕ್ಷ ನಾಗರಾಜ್, ಬಿಇಒ ಚಂದ್ರಶೇಖರ್, ಆಹಾರ ಶಿರಸ್ತೇದಾರ್ ಸುಬ್ರಮಣಿ, ನಿರೀಕ್ಷಕ ಚೌಡಪ್ಪ, ನಗರಸಭೆ ಆಯುಕ್ತರಾದ ಜಗ್ಗಾರೆಡ್ಡಿ ಇತರರು ಇದ್ದರು.