ಜನಸೇವೆಯೇ ಶಾಸಕರ ಗುರಿಯಾಗಲಿ: ಸಿಎಂ

| Published : Mar 05 2024, 01:36 AM IST / Updated: Mar 05 2024, 11:20 AM IST

ಸಾರಾಂಶ

ನಾವು ಹಸಿವು ಮುಕ್ತ ರಾಜ್ಯ ಮಾಡಲು ಪಣ ತೊಟ್ಟಿದ್ದೇವೆ. ಪ್ರತಿಯೊಬ್ಬರೂ ಮೂರು ಹೊತ್ತು ಊಟ ಮಾಡಬೇಕು ಎಂಬುದು ನಮ್ಮ ಕಾಂಗ್ರೆಸ್ ಪಕ್ಷದ ಉದ್ದೇಶವಾಗಿದೆ, ಬಡವರ ಬಗ್ಗೆ ಕಾಳಜಿ ಇಲ್ಲದ ಬಿಜೆಪಿ ಸರ್ಕಾರಕ್ಕೆ ಈ ರೀತಿ ಯೋಜನೆಗಳೇ ಹೊಳೆಯುವುದಿಲ್ಲ.

ಕನ್ನಡಪ್ರಭ ವಾರ್ತೆ ನೆಲಮಂಗಲ/ದಾಬಸ್ ಪೇಟೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ದೊಡ್ಡನದಿಗಳಿಲ್ಲದ್ದರಿಂದ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಕೆರೆ ತುಂಬಿಸಿ ಅಂತರ್ಜಲ ಹೆಚ್ಚಿಸುವ ಬೃಹತ್ ಜನಸೇವಾ ಕಾರ್ಯವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. 

ಜನಪರ ಕಾಳಜಿಯ ಕಳಕಳಿಯ ಸರ್ಕಾರ ನಮ್ಮದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸರ್ಕಾರದ ಸಾಧನೆಯ ವಿವರಗಳನ್ನು ಒಂದೊಂದಾಗಿ ಜನತೆಗೆ ಒಪ್ಪಿಸಿ ಅವರಿಂದಲೇ ಕೈ ಎತ್ತಿಸುವ ಮೂಲಕ ಸಮ್ಮತಿ ಪಡೆದರು.

ಇಲ್ಲಿಗೆ ಸಮೀಪದ ಬೂದಿಹಾಳ ಗ್ರಾಮದಲ್ಲಿ ಜಿಲ್ಲಾ ಆಡಳಿತ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ರು.869 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮಾಡಿ ಮಾತನಾಡಿದ ಅವರು, ಬಿಜೆಪಿಯವರು ಕಾಂಗ್ರೆಸ್ ಮುಕ್ತ ರಾಜ್ಯ ಮಾಡುತ್ತೇವೆ ಎನ್ನುತ್ತಾರೆ.

ಆದರೆ, ನಾವು ಹಸಿವು ಮುಕ್ತ ರಾಜ್ಯ ಮಾಡಲು ಪಣ ತೊಟ್ಟಿದ್ದೇವೆ. ಪ್ರತಿಯೊಬ್ಬರೂ ಮೂರು ಹೊತ್ತು ಊಟ ಮಾಡಬೇಕು ಎಂಬುದು ನಮ್ಮ ಕಾಂಗ್ರೆಸ್ ಪಕ್ಷದ ಉದ್ದೇಶವಾಗಿದೆ, ಬಡವರ ಬಗ್ಗೆ ಕಾಳಜಿ ಇಲ್ಲದ ಬಿಜೆಪಿ ಸರ್ಕಾರಕ್ಕೆ ಈ ರೀತಿ ಯೋಜನೆಗಳೇ ಹೊಳೆಯುವುದಿಲ್ಲ. 

ಹಣಕ್ಕಾಗಿ ಅಧಿಕಾರಕ್ಕಾಗಿ ಶಾಸಕರಾಗಬಾರದು, ಜನಸೇವೆ ಶಾಸಕರ ಮುಖ್ಯ ಗುರಿಯಾಗಬೇಕು, ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ ಮಾದರಿ ಶಾಸಕರಾಗಿದ್ದಾರೆ.

 ಎಂಟು ತಿಂಗಳಲ್ಲಿ ಕ್ಷೇತ್ರಕ್ಕಾಗಿ ನಮ್ಮನ್ನು ಕಾಡಿ,ಬೇಡಿ ರು. 869 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಜನಪ್ರಿಯರಾಗಿದ್ದಾರೆ. ಅವರು ಶಾಶ್ವತ ಶಾಸಕರಾಗುವ ಎಲ್ಲ ಲಕ್ಷಣಗಳನ್ನೂ ಹೊಂದಿದ್ದಾರೆ ಎಂದರು.

ಕ್ಷೇತ್ರದ ಅಂತರ್ಜಲ ವೃದ್ಧಿಗಾಗಿ ನಗರದ ವೃಷಭಾವತಿ ವ್ಯಾಲಿ ಕಣಿವೆಯ ಸಂಸ್ಕರಿಸಿದ ತ್ಯಾಜ್ಯ ನೀರನ್ನು ರು .1081 ಕೋಟಿ ವೆಚ್ಚದ ಮೊದಲ ಹಂತದಲ್ಲಿ 70 ಕೆರೆಗಳಿಗೆ ನೀರನ್ನು ತುಂಬಿಸುವ ಬೃಹತ್ ಯೋಜನೆಯನ್ನು ಕೈಗೊಂಡಿದೆ. 

ಎರಡು ಮತ್ತು ಮೂರನೇ ಹಂತದಲ್ಲಿ 189 ಕೆರೆಗಳನ್ನು ಜಿಲ್ಲೆಯಾದ್ಯಂತ ಒಟ್ಟು 259 ಕೆರೆಗಳಿಗೆ ನೀರನ್ನು ಹರಿಸಲು ಸಣ್ಣ ನೀರಾವರಿ ಇಲಾಖೆ ಯೋಜನೆಯನ್ನು ರೂಪಿಸಿದೆ. 

ಇದು ಜನಪರ ಕಾಳಜಿಯ ಸರ್ಕಾರವಲ್ಲವೆ? ಗ್ಯಾರಂಟಿ ಯೋಜನೆಗಳಿಂದ ಸರ್ಕಾರದಲ್ಲಿ ಹಣವೇ ಇಲ್ಲ ಎಂದು ವಿರೋಧ ಪಕ್ಷಗಳು ನಮ್ಮ ಅಭಿವೃದ್ಧಿ ಮತ್ತು ಜನಪ್ರಿಯತೆಯನ್ನು ಸಹಿಸದೆ ಟೀಕಿಸುತ್ತಿವೆ, ಮುಂದಿನ ಲೋಕಸಭೆಯಲ್ಲಿ ಮಹಾ ಜನತೆ ಇದಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಕೇಳಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಖಂಡಿಸಿ ನಮ್ಮ ಸರ್ಕಾರ 36,789 ಮನೆ ನೀಡಿ, ಬಡವರಿಗೆ ಭಾಗ್ಯ ನೀಡಿದೆ ಎಂದರು.

ಸಚಿವ ಜಮೀರ್ ಅಹಮದ್ ಖಾನ್ ಮಾತನಾಡಿ, ರಾಜ್ಯದಲ್ಲಿ 224 ಕ್ಷೇತ್ರದ ಶಾಸಕರಲ್ಲಿ ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ ಯುವಕನಾಗಿ ಕ್ಷೇತ್ರದ ಬಗ್ಗೆ ಕಾಳಜಿ ವಹಿಸಿಕೊಂಡಿರುವ ಶಾಸಕನಾಗಿದ್ದು, ಕ್ಷೇತ್ರಕ್ಕೆ ನಿರಂತರವಾಗಿ ಭೇಟಿ ಮಾಡಿ 2500 ಮನೆಗಳನ್ನು ಪಡೆದುಕೊಂಡಿದ್ದಾರೆ. 

ನನ್ನ ಬಳಿ ಗಲಾಟೆ ಮಾಡಿ 15 ಕೋಟಿ ಅನುದಾನವನ್ನು ಪಡೆದುಕೊಂಡಿದ್ದಾರೆ. 9 ತಿಂಗಳಲ್ಲಿ ಯಾವುದೇ ಶಾಸಕರು ಮಾಡದೇ ಇರುವ ಸಾಧನೆಯನ್ನು ಶ್ರೀನಿವಾಸ್ ಮಾಡಿದ್ದಾರೆ. 

ಬಡವರಿಗೆ 6 ಸಾವಿರ ಕೋಟಿ ಬಡವರಿಗೆ ಮನೆ ನಿರ್ಮಾಣ ನೀಡಿದ್ದು ತಾತ್ಕಲಿಕವಾಗಿ ೫೦೦ಕೋಟಿ ಅನುದಾನವನ್ನು ನೀಡಿದ್ದಾರೆ. ಮಾ.೨ರಂದು ರಾಜ್ಯದಲ್ಲಿ 36789 ಮನೆಗಳನ್ನು ನೀಡಲಾಗಿದ್ದು ಮನೆ ನೀಡುವುದು ಸರ್ಕಾರದ ೬ನೇ ಗ್ಯಾರಂಟಿಯಾಗಿದೆ ಎಂದರು.

ಶಾಸಕ ಎನ್.‍ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿ, ನಗರ ವ್ಯಾಪ್ತಿಯ ಒಳಚರಂಡಿ ಕಾಮಗಾರಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿ ಅನುದಾನ ಮೀಸಲಿಡಲಾಗಿದೆ, 100 ಬೆಡ್ಗಳ ಆಸ್ಪತ್ರೆಗೆ ಮತ್ತು ಟೌನ್ ಶಿಪ್ ಗೆ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಒಟ್ಟಾರೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಕಾರ್ಯವನ್ನು ಮಾಡಿ ನಿಮ್ಮ ಋಣ ತೀರಿಸುತ್ತೇನೆ ಎಂದು ಭರವಸೆ ನೀಡಿದರು.

ಯೋಜನೆಗೆ ಅಪಸ್ವರ: ನಗರದಲ್ಲಿ ಉತ್ಪಾದನೆಯಾಗುವ ಕೊಳಚೆ ನೀರಿನ ನಿರ್ವಹಣೆ ಸಮರ್ಪಕವಾಗಿಲ್ಲದ್ದರಿಂದ ಆ ನೀರು ಮರು ಬಳಕೆಗೆ ಯೋಗ್ಯವಾಗಿರುವುದಿಲ್ಲ. ಈ ಪ್ರಯೋಗಕ್ಕೆ ನಾವು ಇನ್ನೂ ಪರಿಣಿತಿಯನ್ನು ಪಡೆದಿರುವುದಿಲ್ಲ, 

ಕೆ.ಸಿ.ವ್ಯಾಲಿ ಮತ್ತು ಎಚ್.ಎನ್.ವ್ಯಾಲಿ ನೀರು ಸಂಸ್ಕರಿಸಿ ಕೋಲಾರ ಜಿಲ್ಲೆಗೆ ಹರಿಸಿ ಸಮಸ್ಯೆ ಸೃಷ್ಟಿಯಾ ಗಿರುವುದು ಇನ್ನು ಹಸಿರಾಗಿರುವಾಗಲೇ ರೋಗಸ್ಥ ಗ್ರಾಮೀಣ ಸಮಾಜ ಸೃಷ್ಟಿಗೆ ಸರ್ಕಾರ ಅವಕಾಶ ನೀಡಬಾರದು ಎಂದು ಕೊಡಿಗೆಹಳ್ಳಿಯ ಪ್ರಗತಿಪರ ರೈತ ಡಾ.ಭೈರೇಗೌಡ ಒತ್ತಾಯಿಸಿದರು.

ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ, ಸಚಿವ ಎನ್.ಎಸ್.ಬೋಸರಾಜ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ನಗರಸಭೆ ಅಧ್ಯಕ್ಷೆ ಲತಾ ಹೇಮಂತ ಕುಮಾರ್, ಬೂದಿಹಾಲ್ ಗ್ರಾಪಂ ಅಧ್ಯ ಕ್ಷೆ ಶೈ ಲಜಾ , ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ ಇದ್ದರು . ಜಿಲ್ಲಾಧಿಕಾರಿ ಎನ್.ಶಿವಶಂಕರ್ ಸ್ವಾ ಗತಿಸಿ, ಜಿಪಂ ಉಪಕಾರ್ಯದರ್ಶಿ ಟಿ.ಕೆ.ರಮೇಶ್ ವಂದಿಸಿದರು.

ಕಾಂಗ್ರೆಸ್ ಬಡತನದ ವಿರುದ್ಧವಿರುವ ಸರ್ಕಾರ: ಡಿಕೆಶಿ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ನನಗೂ ನೆಲಮಂಗಲಕ್ಕೂ ಸುಮಾರು 40 ವರ್ಷಗಳ ರಾಜಕೀಯ ಸಂಬಂಧವಿದೆ. ನೆಲಮಂಗಲದಲ್ಲಿ ಇಂದು 869 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ. ಕಾಂಗ್ರೆಸ್ ಸರ್ಕಾರ ಬಡವರ ಮೇಲಲ್ಲ, ಬದಲಾಗಿ ಬಡತನದ ವಿರುದ್ಧ ಹೋರಾಟ ಮಾಡುತ್ತಿದೆ. 

ಕೆಲವು ಬಿಜೆಪಿ ನಾಯಕರು ಕಾಂಗ್ರೆಸ್ ಗ್ಯಾರಂಟಿಗಳನ್ನು 420 ಗ್ಯಾರಂಟಿ ಅಂದಿದ್ದರು. ಅವು ನಕಲಿ ಗ್ಯಾರಂಟಿಗಳೇ ಆಗಿದ್ದರೆ ಬಿಜೆಪಿ ನಾಯಕರು ತಮ್ಮ ಕಾರ್ಯಕರ್ತರಿಗೆ ಉಚಿತ ಬಸ್‌ನಲ್ಲಿ ಓಡಾಡಬೇಡಿ, ಉಚಿತ ವಿದ್ಯುತ್ ಪಡೆಯಬೇಡಿ, ಗೃಹಲಕ್ಷ್ಮೀ ಯೋಜನೆಯ ಹಣ ತೆಗೆದುಕೊಳ್ಳಬೇಡಿ ಎಂದು ಹೇಳಲಿ ಸವಾಲು ಹಾಕಿದರು. 

ಬಿಜೆಪಿಯವರು ಧರ್ಮದಲ್ಲಿ ರಾಜಕಾರಣ ಮಾಡುತ್ತಿದ್ದರೆ ನಾವು ರಾಜಕಾರಣದಲ್ಲಿ ಧರ್ಮ ಅನುಸರಿಸುತ್ತಿದ್ದೇವೆ ಎಂದ ಅವರು, ಜನಪರ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಮಾತ್ರ ಅನುಷ್ಠಾನಗೊಳಿಸಿದೆ. 

ಕಳೆದ ನಾಲ್ಕಾರು ದಶಕಗಳ ಇತಿಹಾಸದಿಂದ ಇದು ತಿಳಿದು ಬರುತ್ತದೆ. ಭೂಮಿ ಹಕ್ಕು, ಆಶ್ರಯ ಯೋಜನೆ, ಅನೇಕ ಭಾಗ್ಯಗಳನ್ನು ನೀಡಿದ ಸಾಧನೆ ಕಾಂಗ್ರೆಸ್ ಸರ್ಕಾರದ್ದು. 

ನೆಲಮಂಗಲ ಕ್ಷೇತ್ರದ ಸುಸಜ್ಜಿತ ರಸ್ತೆ ನಿರ್ಮಾಣ, ನಿರಂತರ ವಿದ್ಯುತ್, ಆರೋಗ್ಯ ಭಾಗ್ಯಗಳನ್ನು ನೀಡಿ ನೆಲಮಂಗಲವನ್ನು ಅಭಿವೃದ್ಧಿಮಂಗಲ ಮಾಡುವ ಇಚ್ಛಾ ಶಕ್ತಿ ಹೊಂ ದಿರುವ ಶಾಸಕ ಎನ್.ಶ್ರೀನಿವಾಸ್ ಅವರ ಬೆಂಬಲಕ್ಕೆ ನಾವೆಲ್ಲರೂ ಇದ್ದೇವೆ ಎಂದರು.