ಸಾರ್ವಜನಿಕರು ಇಲಿ ಜ್ವರ ಕುರಿತು ಎಚ್ಚರ ವಹಿಸಿ

| Published : Jan 23 2025, 12:46 AM IST

ಸಾರಾಂಶ

ವೈಜ್ಞಾನಿಕವಾಗಿ ಲೆಷ್ಟೋಸ್ಪೆರೊಸಿಸ್ ಎಂದು ಕರೆಸಿಕೊಳ್ಳುವ ಇಲಿ ಜ್ವರ "ಲೆಸ್ಟೋಸೈರ್ " ಎಂಬ ಬ್ಯಾಕ್ಟಿರಿಯ ರೋಗಾಣುವಿನಿಂದ ಬರುವ ಕಾಯಿಲೆಯಾಗಿದೆ.

ಬಳ್ಳಾರಿ: ಸಾರ್ವಜನಿಕರು ತಮ್ಮ ಮನೆಯ ಸುತ್ತ-ಮುತ್ತ ಹಾಗೂ ಇತರೆ ವಾಸಸ್ಥಳ ಸುತ್ತ ಇಲಿಯ ಬಿಲಗಳು ಕಂಡುಬಂದಲ್ಲಿ ಅವುಗಳನ್ನು ಮುಚ್ಚಿ ಆಹಾರ ಮತ್ತು ನೀರು ಸುರಕ್ಷಿತವಾಗಿ ಇಡುವ ಮೂಲಕ ಇಲಿಜ್ವರ ಹರಡುವಿಕೆಯನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ಹೇಳಿದರು.

ನಗರದ ಗುಗ್ಗರಹಟ್ಟಿ ಬಡಾವಣೆಯಲ್ಲಿ ಶಂಕಿತ ಪ್ರಕರಣದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಜಾಗೃತಿ ನೀಡುವ ಮೂಲಕ ಅವರು ಮಾತನಾಡಿದರು.

ವೈಜ್ಞಾನಿಕವಾಗಿ ಲೆಷ್ಟೋಸ್ಪೆರೊಸಿಸ್ ಎಂದು ಕರೆಸಿಕೊಳ್ಳುವ ಇಲಿ ಜ್ವರ "ಲೆಸ್ಟೋಸೈರ್ " ಎಂಬ ಬ್ಯಾಕ್ಟಿರಿಯ ರೋಗಾಣುವಿನಿಂದ ಬರುವ ಕಾಯಿಲೆಯಾಗಿದೆ. ಈ ಸೋಂಕು ಹೊಂದಿದ ಇಲಿ ಮನುಷ್ಯನನ್ನು ಕಚ್ಚಿದರೆ ಅಥವಾ ಅದರ ಎಂಜಲು, ಮೂತ್ರ, ಮಲ ಅಥವಾ ಇಲಿಯ ದೇಹದ ದ್ರವ ಮನುಷ್ಯನ ಚರ್ಮಕ್ಕೆ ತಾಕಿದರೆ ಸೋಂಕು ಉಂಟಾಗಬಹುದು ಎಂದು ಅವರು ತಿಳಿಸಿದರು.

ಇಲಿಜ್ವರ ದನ, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ, ಬೆಕ್ಕು ಸೇರಿದಂತೆ ಕಾಡು ಮೃಗಗಳಿಗೂ ಬರುವ ಸಾಧ್ಯತೆಯಿದೆ. ಇಲಿ- ಹೆಗ್ಗಣಗಳಿಂದ ಹೆಚ್ಚು ಹರಡುವುದರಿಂದ ಇಲಿಜ್ವರ ಎಂದು ಹೇಳಲಾಗುತ್ತದೆ. ಕೆಲವು ಬಾರಿ ಸೋಂಕಿತ ಇಲಿಗಳನ್ನು ಹಿಡಿದಿರುವ ಬೆಕ್ಕುಗಳು ಮತ್ತು ನಾಯಿಗಳಿಂದ ಕೂಡ ನಮಗೆ ರೋಗ ಬರುವ ಸಾಧ್ಯತೆ ಇದೆ ಎಂದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ ಮಾತನಾಡಿ, ಮನೆಯ ಹೊರಗಡೆ ಕಾರ್ಯ ನಿರ್ವಹಿಸುವಾಗ ತಪ್ಪದೇ ಪಾದರಕ್ಷೆ ಧರಿಸಬೇಕು. ಒಂದು ವೇಳೆ ಇಲಿ ಎಂಜಲು ಅಥವಾ ನಮ್ಮ ದೇಹದ ಮೇಲಿನ ಗಾಯಕ್ಕೆ ಸಂಪರ್ಕಿಸಿದರೆ ಅಥವಾ ಕಡಿದರೆ ತಕ್ಷಣವೇ ಸೋಪಿನಿಂದ ಚೆನ್ನಾಗಿ ತೊಳೆದು ಆಸ್ಪತ್ರೆಗೆ ವೈದ್ಯರ ಬಳಿ ತೆರಳಬೇಕು ಎಂದು ಅವರು ತಿಳಿಸಿದರು.

ಆಡಳಿತ ವೈದ್ಯಾಧಿಕಾರಿ ಡಾ.ಕಾಶಿಪ್ರಸಾದ್, ವೈದ್ಯಾಧಿಕಾರಿ ಡಾ.ಶಗುಪ್ತಾ, ನವೀನ್ ಸೇರಿದಂತೆ ಸಿಬ್ಬಂದಿ ಮಂಜುಳಾ, ಅರುಣಾ, ಜಿಲಾನ್ ಇದ್ದರು.

ಬಳ್ಳಾರಿಯ ಗುಗ್ಗರಹಟ್ಟಿ ಬಡಾವಣೆಯಲ್ಲಿ ಇಲಿಜ್ವರ ಕುರಿತು ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮನೆಮನೆಗೆ ತೆರಳಿ ಜಾಗೃತಿ ಮೂಡಿಸಿದರು.