ಸಾರ್ವಜನಿಕರು ರಾಷ್ಟ್ರೀಯ ಲೋಕ ಅದಾಲತ್‌ ಸದ್ಬಳಸಿಕೊಳ್ಳಿ: ನ್ಯಾ. ನೇರಳೆ ವೀರಭದ್ರಯ್ಯಭವಾನಿ

| Published : Aug 30 2024, 01:08 AM IST

ಸಾರ್ವಜನಿಕರು ರಾಷ್ಟ್ರೀಯ ಲೋಕ ಅದಾಲತ್‌ ಸದ್ಬಳಸಿಕೊಳ್ಳಿ: ನ್ಯಾ. ನೇರಳೆ ವೀರಭದ್ರಯ್ಯಭವಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ಲೋಕ ಅದಾಲತ್ ನಲ್ಲಿ ಕೆಲವೊಂದು ಕರ ವಸೂಲಿ ಪ್ರಕರಣಗಳನ್ನು ಸೇರಿಸಿಕೊಳ್ಳಲಾಗಿದೆ. ನ್ಯಾಯಾಲಯದಲ್ಲಿ ಇಬ್ಬರಿಗೂ ಒಪ್ಪಿಗೆಯಾಗುವಂತೆ ಪ್ರಕರಣ ತೀರ್ಮಾನವಾಗುವುದರಿಂದ ಬಾಂಧವ್ಯವು ಉಳಿದು ಮನಶಾಂತಿ ಮತ್ತು ನೆಮ್ಮದಿ ವಾತಾವರಣ ಮೂಡಲಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಜಿಲ್ಲೆಯಾದ್ಯಂತ ಎಲ್ಲ 20 ನ್ಯಾಯಾಲಯಗಳಲ್ಲಿ ಸೆ.14ರ ಶನಿವಾರದಂದು ರಾಷ್ಟ್ರೀಯ ಲೋಕ ಅದಾಲತ್ ಅನ್ನು ಹಮ್ಮಿಕೊಳ್ಳಲಾಗಿದೆ. ಈ ಸುವರ್ಣಾವಕಾಶವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಅಧ್ಯಕ್ಷೆ, ನ್ಯಾ. ನೇರಳೆ ವೀರಭದ್ರಯ್ಯ ಭವಾನಿ ಮನವಿ ಮಾಡಿದರು.

ಗುರುವಾರ ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಜಿಲ್ಲಾ ಕೇಂದ್ರದ ನ್ಯಾಯಾಲಯಗಳು ಹಾಗೂ ತಾಲೂಕು ಕೇಂದ್ರಗಳ ಎಲ್ಲಾ ನ್ಯಾಯಾಲಯಗಳಲ್ಲಿ ಏಕಕಾಲಕ್ಕೆ ರಾಷ್ಟ್ರೀಯ ಲೋಕ ಅದಾಲತ್ ಅನ್ನು ಸೆಪ್ಟಂಬರ್ 14 ರಂದು ಆಯೋಜಿಸಲಾಗಿದ್ದು, ಘೋರ ಅಪರಾಧಿ ಕೃತ್ಯದ ಪ್ರಕರಣಗಳನ್ನು ಹೊರತುಪಡಿಸಿ, ಉಳಿದಂತಹ ಚಿಕ್ಕ- ಪುಟ್ಟ ಪ್ರಕರಣಗಳನ್ನು ಇತ್ಯರ್ಥಪಡಿಸಲು ಯೋಜಿಸಲಾಗಿದೆ. ಈ ಅದಾಲತ್ ನಲ್ಲಿ ಸಾರ್ವಜನಿಕರು ತಮ್ಮ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಜೊತೆಗೆ ವ್ಯಾಜ್ಯದಾರರ ಹಣ, ಸಮಯ ಉಳಿಯಲಿದೆ. ಜೊತೆಗೆ ನೆಮ್ಮದಿಯುತ ಜೀವನ ಎರಡೂ ವ್ಯಾಜ್ಯದಾರರಿಗೆ ದೊರಕಬಹುದು. ಹಾಗಾಗಿ ಎಲ್ಲರೂ ತಮ್ಮ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಇದೊಂದು ಸುವರ್ಣ ಅವಕಾಶವಾಗಲಿದೆ ಎಂದು ತಿಳಿಸಿದರು.

ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಈ ಬಾರಿ ಲೋಕ ಅದಾಲತ್ ನಲ್ಲಿ 40 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಗುರಿ ಹೊಂದಿದ್ದೇವೆ. ಈ ಬಾರಿ ಲೋಕ ಅದಾಲತ್ ನಲ್ಲಿ ಕೆಲವೊಂದು ಕರ ವಸೂಲಿ ಪ್ರಕರಣಗಳನ್ನು ಸೇರಿಸಿಕೊಳ್ಳಲಾಗಿದೆ. ನ್ಯಾಯಾಲಯದಲ್ಲಿ ಇಬ್ಬರಿಗೂ ಒಪ್ಪಿಗೆಯಾಗುವಂತೆ ಪ್ರಕರಣ ತೀರ್ಮಾನವಾಗುವುದರಿಂದ ಬಾಂಧವ್ಯವು ಉಳಿದು ಮನಶಾಂತಿ ಮತ್ತು ನೆಮ್ಮದಿ ವಾತಾವರಣ ಮೂಡಲಿದೆ. ಕಕ್ಷಿದಾರರು ಸಮಯ ವ್ಯರ್ಥವಿಲ್ಲದೆ ಉಚಿತವಾಗಿ ಕಾನೂನು ನೆರವು ಪಡೆಯಬಹುದು. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಎಂದು ಮನವಿ ಮಾಡಿದರು.

ಕೈಗೆತ್ತಿಕೊಳ್ಳುವ ಪ್ರಕರಣಗಳು: ಲೋಕ ಅದಾಲತ್‌ನಲ್ಲಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು, ರಾಜೀ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು, ಸಿವಿಲ್ ಪ್ರಕರಣಗಳು, ಬ್ಯಾಂಕ್ ಸಂಬಂಧಿಸಿದ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು, ಕಾರ್ಮಿಕರ ವೇತನ, ಜಿಲ್ಲಾ ಗ್ರಾಹಕರ ಪರಿಹಾರ, ಕರ್ನಾಟಕ ರಿಯಲ್ ಎಸ್ಟೇಟ್ ಪ್ರಾಧಿಕರಣದ ಪ್ರಕರಣಗಳು, ಭೂ ಸ್ವಾಧೀನ ಪ್ರಕರಣಗಳು, ಮೋಟಾರ್ ವಾಹನ, ಅಪಘಾತ ಪರಿಹಾರದ ಸ್ವಾಧೀನ ಪ್ರಕರಣಗಳು, ನಗರಸಭೆಯ ನೀರಿನ ಕರ, ಕಂದಾಯ ಪ್ರಕರಣಗಳು, ವಿದ್ಯುತ್ ಮಂಡಳಿ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ವಿಚ್ಚೇಧನ ಹೊರತುಪಡಿಸಿ, ವೈವಾಹಿಕ ಅಥವಾ ಜೀವನಾಂಶ ಪ್ರಕರಣಗಳು ಸೇರಿ ಕಾನೂನಿನನ್ವಯ ಮತ್ತು ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಬಗೆಹರಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.

ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರನ್ನು ಅಥವಾ ಸಹಾಯವಾಣಿ ಸಂಖ್ಯೆ 1800 425-90900 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ನ್ಯಾ.ಶಿಲ್ಪಾ ಇದ್ದರು.