ಹೊಯ್ಸಳ ಸಿಬ್ಬಂದಿಗೇ ಕಳ್ಳ ಕಳ್ಳ ಎಂದು ಸಾರ್ವಜನಿಕರು

| Published : May 22 2024, 01:16 AM IST

ಸಾರಾಂಶ

ಹೊಯ್ಸಳ ವಾಹನದಲ್ಲಿ ಹೊರಟ ಸಿಬ್ಬಂದಿಯನ್ನು ‘ಕಳ್ಳ ಕಳ್ಳ’ ಎಂದು ಕೂಗುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗಸ್ತು ತಿರುಗುವ ವೇಳೆ ಬೀದಿ ಬದಿ ವ್ಯಾಪಾರಿಗಳಿಗೆ ಬೆದರಿಸಿ ಹಫ್ತಾ ವಸೂಲಿ ಮಾಡುತ್ತಿದ್ದರು ಎಂಬ ಗಂಭೀರ ಆರೋಪ ರಾಜಗೋಪಾಲನಗರ ಠಾಣೆ ಹೊಯ್ಸಳ ಸಿಬ್ಬಂದಿ ವಿರುದ್ಧ ಕೇಳಿ ಬಂದಿದೆ.

ಅಲ್ಲದೆ ಈ ವೇಳೆ ಸಾರ್ವಜನಿಕರು ಪ್ರಶ್ನಿಸಿದ್ದಕ್ಕೆ ಹೆದರಿ ಹೊಯ್ಸಳ ವಾಹನದಲ್ಲಿ ಹೊರಟ ಸಿಬ್ಬಂದಿಯನ್ನು ‘ಕಳ್ಳ ಕಳ್ಳ’ ಎಂದು ಕೂಗುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು, ಈ ಬಗ್ಗೆ ಇಲಾಖಾ ಮಟ್ಟದ ವಿಚಾರಣೆ ನಡೆಸುವಂತೆ ಸೂಚಿಸಿದ್ದಾರೆ.

ರಾಜಗೋಪಾಲ ನಗರ ವ್ಯಾಪ್ತಿಯಲ್ಲಿ ಮೇ 17ರಂದು ಹೊಯ್ಸಳ ಸಿಬ್ಬಂದಿ ಜತೆ ಕೆಲವರು ಮಾತಿನ ಚಕಮಕಿ ನಡೆಸಿದ್ದು, ಆ ವೇಳೆ ಅಲ್ಲಿಂದ ಹೊರಟ ಹೊಯ್ಸಳ ಸಿಬ್ಬಂದಿ ಮೇಲೆ ಲಂಚದ ಆರೋಪ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜಗೋಪಾಲನಗರ ಹೊಯ್ಸಳ ಸಿಬ್ಬಂದಿ ಮೇಲಿನ ಲಂಚದ ಆರೋಪ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡಿದಾಡಿರುವ ವಿಡಿಯೋಗಳನ್ನು ಕೂಡ ಪರಿಶೀಲಿಸಲಾಗುತ್ತಿದ್ದು, ತಪ್ಪು ಕಂಡು ಬಂದರೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಕಮಾಂಡ್‌ ಸೆಂಟರ್‌ ಡಿಸಿಪಿ ಕ್ಷಮಾ ಮಿಶ್ರಾ ತಿಳಿಸಿದ್ದಾರೆ.