ಗ್ರಾಮಕ್ಕೆ ಆಗಮಿಸಿದ ಪ್ರಥಮ ಬಸ್ಸಿಗೆ ಪೂಜೆ

| Published : Feb 12 2024, 01:39 AM IST

ಸಾರಾಂಶ

ಸರ್ಕಾರಿ ಬಸ್ ವ್ಯವಸ್ಥೆಗಾಗಿ ಕಳೆದ ಹಲವಾರು ವರ್ಷಗಳಿಂದ ಗ್ರಾಮಸ್ಥರು ನಡೆಸಿದ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದ್ದು, ಅಲ್ಲಿನ ಜನರ ಶತಮಾನಗಳ ಕನಸು ನನಸಾಗಿದೆ. ಗ್ರಾಮಕ್ಕೆ ಸರ್ಕಾರಿ ಬಸ್ ಆಗಮಿಸುತ್ತಿದ್ದಂತೆ ಇಲ್ಲಿನ ಗ್ರಾಮಸ್ಥರು ಪೂಜೆ ಸಲ್ಲಿಸಿ

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ತಾಲೂಕಿನ ಪೋಕಮಾಕಲಪಲ್ಲಿ ಗ್ರಾಮಕ್ಕೆ ಮೊದಲ ಬಾರಿ ಆಗಮಿಸಿದ ಕೆಎಸ್ಸಾರ್ಟಿಸಿ ಬಸ್‌ಗೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಸಂಭ್ರಮಾಚರಣೆ ನಡೆಸಿದರು.

ತಾಲೂಕಿನ ಮಾರ್ಗಾನುಕುಂಟೆ ಗ್ರಾಪಂ ವ್ಯಾಪ್ತಿಯ ಪೋಕಮಾಕಲಪಲ್ಲಿ ಕುಗ್ರಾಮ ಕಳೆದ ಹಲವಾರು ವರ್ಷಗಳಿಂದ ಸಾರಿಗೆ ವ್ಯವಸ್ಥೆ ಇಲ್ಲದೆ ಈ ಗ್ರಾಮದಿಂದ ವಿವಿಧ ಕೆಲಸಗಳ ನಿಮಿತ್ತ ಹಾಗೂ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ, ಗ್ರಾ.ಪಂ ಕೇಂದ್ರ ಸ್ಥಾನ ಹಾಗೂ ತಾಲೂಕು ಕೇಂದ್ರಕ್ಕೆ ಹೋಗಿಬರಲು ಪರದಾಡುತ್ತಿದ್ದರು.

ಸರ್ಕಾರಿ ಬಸ್ ವ್ಯವಸ್ಥೆಗಾಗಿ ಕಳೆದ ಹಲವಾರು ವರ್ಷಗಳಿಂದ ಗ್ರಾಮಸ್ಥರು ನಡೆಸಿದ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದ್ದು, ಅಲ್ಲಿನ ಜನರ ಶತಮಾನಗಳ ಕನಸು ನನಸಾಗಿದೆ. ಗ್ರಾಮಕ್ಕೆ ಸರ್ಕಾರಿ ಬಸ್ ಆಗಮಿಸುತ್ತಿದ್ದಂತೆ ಇಲ್ಲಿನ ಗ್ರಾಮಸ್ಥರು ಪೂಜೆ ಸಲ್ಲಿಸಿ ಸ್ವಾಗತಿಸಿದರು.

ಕೆ ಎಸ್ ಆರ್ ಟಿ ಸಿ ಬಾಗೇಪಲ್ಲಿ ಬಸ್ ಘಟಕದ ವ್ಯವಸ್ಥಾಪಕರು ಮಾತನಾಡಿ, ಬಾಗೇಪಲ್ಲಿ ತಾಲೂಕು ಕೇಂದ್ರದಿಂದ ತಾಲೂಕಿನ ಪೋಕಮಾಕಲಪಲ್ಲಿ ಗ್ರಾಮಕ್ಕೆ ಪ್ರತಿನಿತ್ಯ ಬೆಳಗ್ಗೆ 9 ಹಾಗೂ ಸಂಜೆ 5 ಗಂಟೆಗೆ ಎರಡು ಬಸ್ ವ್ಯವಸ್ಥೆ ಕಲಿಸಲಾಗಿದೆ. ಈ ಸೌಲಭ್ಯವನ್ನು ಗ್ರಾಮದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

ಗ್ರಾ.ಪಂ ಸದಸ್ಯ ಲಕ್ಷ್ಮೀನಾರಾಯಣ ಮಾತನಾಡಿ, ನಮ್ಮ ಬೇಡಿಕೆ ಈಡೇರಿದೆ, ನಮ್ಮ ಗ್ರಾಮಕ್ಕೆ ಸರ್ಕಾರಿ ಬಸ್ ಸೌಲಭ್ಯ ಒದಗಿಸಿರುವುದಕ್ಕೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಘುನಾಥರೆಡ್ಡಿ, ರಾಮಲಿಂಗಾರೆಡ್ಡಿ, ಎಚ್.ನಾಗೇಂದ್ರ, ನಂಜಪ್ಪ, ಅಶೋಕರೆಡ್ಡಿ, ಬಸ್ ಚಾಲಕ ನರಸಿಂಹಮೂರ್ತಿ, ನಿರ್ವಾಹಕ ಅನಿಲ್ ಕುಮಾರ್ ಸೇರಿದಂತೆ ಗ್ರಾಮಸ್ಥರು ಇದ್ದರು.