ಹಗರಿಬೊಮ್ಮನಹಳ್ಳಿ: ನೆಮ್ಮದಿ ಹುಡುಕುವ ಭರದಲ್ಲಿ ಜನರು ಒತ್ತಡಕ್ಕೆ ಒಳಗಾಗಿ ದಿನವಿಡೀ ಶ್ರಮಿಸುತ್ತಿದ್ದಾರೆ. ದುಡಿದಿರುವ ಹಣ ನೆಮ್ಮದಿಯನ್ನು ಕಿತ್ತುಕೊಳ್ಳುತ್ತದೆ. ಪೂಜೆ, ದೈವ ನಂಬಿಕೆ ಮತ್ತು ಧ್ಯಾನ ನೆಮ್ಮದಿಯ ಬದುಕಿಗೆ ಮೂಲವಾಗಿದೆ ಎಂದು ಚಿತ್ತಾಪುರದ ದಂಡೋತಿಯ ಬಾಲಯೋಗಿನಿ ಜಯಶ್ರೀ ಮಾತಾಜಿ ಕಿವಿಮಾತು ಹೇಳಿದರು.ಪಟ್ಟಣದ ಜಗದಂಬಾ ದೇಗುಲದ ಕಳಸಾರೋಹಣ ಅಂಗವಾಗಿ ದೇಗುಲದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗಣೇಶ ಹಾಗೂ ದತ್ತಾತ್ರೇಯ, ನೂತನ ಕಳಸದ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಗದಂಬೆ, ಬ್ರಹ್ಮ ರುದ್ರ ದೇವರು ಲಕ್ಷ್ಮೀನಾರಾಯಣ ಸಹಿತ ಪರಿವಾರ ದೇವರ ಕಳಶ ಸ್ಥಾಪನೆ ನಡೆಸಿ ದೇವತೆಗಳ ಆವಾಹನೆಗೈದು ಕಳಸ ಪೂಜೆಯ ಜೊತೆಗೆ ನವಗ್ರಹ ಮತ್ತು ಅಷ್ಟ ದಿಕ್ಪಾಲಕರ ಹೋಮವನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.ಪೂಜೆಗೈದಿರುವ ಗಣೇಶ ಹಾಗೂ ದತ್ತಾತ್ರೇಯ ಮೂರ್ತಿಗಳ ಜೊತೆಗೆ ಕಳಶಗಳ ಜಲಾಧಿವಾಸ ನಡೆಸಲಾಯಿತು. ಪುರೋಹಿತ ಬದರಿನಾರಾಯಣ ಆಚಾರ್ ನೇತೃತ್ವದಲ್ಲಿ ಸಂಗಡಿಗರಾದ ಬಿ.ಕೆ.ಕೃಷ್ಣರಾವ್, ಗೋಪಿ ಭಟ್ಟರು, ಶೇಷಗಿರಿ ಆಚಾರ್ ಮತ್ತು ಸುಬ್ರಹಣ್ಯ ಆಚಾರ್ ಶ್ರದ್ಧಾ ಭಕ್ತಿಯಿಂದ ಪೂಜೆ, ಹೋಮ ನೆರವೇರಿಸಿದರು. ದೇಗುಲದ ಪೂಜಾರಿ ರಾಘವೇಂದ್ರ ನಿರಂಜನ್ ಸಹರಿಸಿದರು.
ಇದಕ್ಕೂ ಮುನ್ನ ಭಾನುವಾರ ಸಂಜೆ ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಇರಿಸಲಾಗಿದ್ದ ಗಣೇಶ, ದತ್ತಾತ್ರೇಯ ಮೂರ್ತಿಗಳ ಜತೆ ಕಳಶಗಳ ಗಂಗಾ ಪೂಜೆಗೈದು ಬೆಳ್ಳಿಯ ಸಾರೋಟಿನಲ್ಲಿ ಮೆರವಣಿಗೆಯ ಮೂಲಕ ಜಗದಂಬಾ ದೇವಸ್ಥಾನಕ್ಕೆ ತರಲಾಯಿತು.ಮೆರವಣಿಗೆಯಲ್ಲಿ ಕಳಸ ಮತ್ತು ಕುಂಭ ಹೊತ್ತು ಸಮಾಜದ ಮಹಿಳೆಯರು ಪಾಲ್ಗೊಂಡಿದ್ದರು. ಜಾನಪದ ವಾದ್ಯಗಳು ಮೆರವಣಿಗೆಗೆ ಮೆರಗು ನೀಡಿದವು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ದೀಪಕ್ ಕಠಾರೆ, ಉಪಾಧ್ಯಕ್ಷ ಪರಶುರಾಮಸಾ ಪವಾರ್ ಸೇರಿದಂತೆ ಮುಖಂಡರಾದ ರಂಗನಾಥಸಾ ಕಠಾರೆ, ಅಶೋಕ್ ಮೆಹರವಾಡೆ, ಬಾಳಕೃಷ್ಣಸಾ ದಲಬಂಜನ್, ರಾಮೂಸಾ ಕಾಟವಾ, ಬಾಲಚಂದ್ರಸಾ ಮೇಘರಾಜ್, ದಿಲೀಪ್ ಭಾವಿಕಟ್ಟಿ, ರಾಜು ಮೇಘರಾಜ್, ಪರಶುರಾಮಸಾ ದಲಬಂಜನ್, ಲಕ್ಷ್ಮಣಸಾ ಬಾಕಳೆ, ವೆಂಕಟೇಶ್ ಮಿಸ್ಕಿನ್, ಲಕ್ಷ್ಮೀಬಾಯಿ ಕಠಾರೆ, ಲಕ್ಷ್ಮೀ ಮೇಘರಾಜ್, ರೇಖಾ ದಲಬಂಜನ್, ಸುಮನ್ ದಲಬಂಜನ್, ಸುಧಾ ಭಾಂಡಗೆ, ನಾಗೂಬಾಯಿ ರಾಜೊಳ್ಳಿ, ಸೋನಾಬಾಯಿ ಭಾವಿಕಟ್ಟಿ, ಅನುಸೂಯಾ ಭಾವಿಕಟ್ಟಿ ಹಾಗೂ ಮತ್ತಿತರರಿದ್ದರು.