ಕನ್ನಡಪ್ರಭ ವಾರ್ತೆ ಹಾಸನ
ಮಕ್ಕಳನ್ನು ಪೋಲಿಯೋ ರೋಗದಿಂದ ಸಂಪೂರ್ಣವಾಗಿ ರಕ್ಷಿಸುವ ಉದ್ದೇಶದಿಂದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನವನ್ನು ಜೂನ್ ೨೮ರಂದು ಭಾನುವಾರ ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ೦ರಿಂದ ೫ ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆ ನೀಡಲಾಗುತ್ತಿದ್ದು, ಪೋಷಕರು ಯಾವುದೇ ಕಾರಣಕ್ಕೂ ಮಕ್ಕಳನ್ನು ಲಸಿಕೆಯಿಂದ ವಂಚಿತರನ್ನಾಗಿಸಬಾರದು ಎಂದು ಜಿಲ್ಲಾಧಿಕಾರಿ ಕೆ. ಎಸ್. ಲತಾಕುಮಾರಿ ಮನವಿ ಮಾಡಿದರು.ನಗರದಲ್ಲಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಒಟ್ಟು ೮೭೨ ಪಲ್ಸ್ ಪೋಲಿಯೋ ಬೂತ್‌ಗಳನ್ನು ತೆರೆಯಲಾಗಿದ್ದು, ೧,೦೫,೫೩೬ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಉಪ ಆರೋಗ್ಯ ಕೇಂದ್ರಗಳು, ಅಂಗನವಾಡಿ ಕೇಂದ್ರಗಳು, ಸರ್ಕಾರಿ ಆಸ್ಪತ್ರೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ವಯಂಸೇವಕರು ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ಅಭಿಯಾನದ ಮೊದಲ ದಿನವಾದ ಜೂನ್ ೨೮ರಂದು ಎಲ್ಲ ಬೂತ್‌ಗಳಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕಲಾಗುತ್ತದೆ. ನಂತರ ಎರಡನೇ ಮತ್ತು ಮೂರನೇ ದಿನ ಗ್ರಾಮೀಣ ಪ್ರದೇಶಗಳಲ್ಲಿ, ನಾಲ್ಕನೇ ದಿನದವರೆಗೆ ನಗರ ಪ್ರದೇಶಗಳಲ್ಲಿ ಆರೋಗ್ಯ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಬೂತ್‌ಗೆ ಬರದ ಮಕ್ಕಳನ್ನು ಗುರುತಿಸಿ ಲಸಿಕೆ ನೀಡಲಿದ್ದಾರೆ. ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ವಿಶೇಷ ನಿಗಾ ವಹಿಸಲಾಗುತ್ತದೆ ಎಂದರು.
ಜನನದಿಂದ ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಪಲ್ಸ್ ಪೋಲಿಯೋ ಲಸಿಕೆ ಅತ್ಯಗತ್ಯವಾಗಿದೆ. ಈಗಾಗಲೇ ಹಲವು ಬಾರಿ ಲಸಿಕೆ ಪಡೆದಿದ್ದರೂ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ವೇಳೆ ಮತ್ತೆ ಲಸಿಕೆ ಹಾಕಿಸುವುದು ಸುರಕ್ಷಿತವಾಗಿದ್ದು, ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಜಿಲ್ಲೆಯ ಎಲ್ಲ ಪೋಷಕರು ಸಮೀಪದ ಪಲ್ಸ್ ಪೋಲಿಯೋ ಬೂತ್‌ಗೆ ತಮ್ಮ ಮಕ್ಕಳನ್ನು ಕರೆತಂದು ಲಸಿಕೆ ಹಾಕಿಸಬೇಕು. ಮೊದಲ ದಿನ ಬೂತ್‌ಗೆ ಬರಲು ಸಾಧ್ಯವಾಗದಿದ್ದರೆ, ನಂತರ ಮನೆಗೆ ಬರುವ ಆರೋಗ್ಯ ಸಿಬ್ಬಂದಿಗೆ ಮಕ್ಕಳಿಗೆ ಲಸಿಕೆ ಹಾಕಿಸಬೇಕು. ಪೋಲಿಯೋ ನಿರ್ಮೂಲನೆಯ ರಾಷ್ಟ್ರೀಯ ಗುರಿ ಸಾಧಿಸಲು ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸುವಂತೆ ಕೋರಿದರು. ಪ್ರತಿ ಮಗುವಿಗೂ ಎರಡು ಹನಿ ಪೋಲಿಯೋ ಮುಕ್ತ ಸುರಕ್ಷಿತ ಭವಿಷ್ಯ ಎಂಬ ಸಂದೇಶದೊಂದಿಗೆ ನಡೆಯುತ್ತಿರುವ ಈ ಅಭಿಯಾನವನ್ನು ಯಶಸ್ವಿಗೊಳಿಸಲು ಜಿಲ್ಲೆಯ ಎಲ್ಲಾ ಪೋಷಕರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಆರೋಗ್ಯ ಇಲಾಖೆ ಕೋರಿದರು.ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಅಧಿಕಾರಿ ಡಾ. ಅನಿಲ್ ಕುಮಾರ್ ಇತರರು ಉಪಸ್ಥಿತರಿದ್ದರು.====================
* ಜನನದಿಂದ ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಪಲ್ಸ್ ಪೋಲಿಯೋ ಲಸಿಕೆ ಅತ್ಯಗತ್ಯ
ಜಿಲ್ಲೆಯಾದ್ಯಂತ ಒಟ್ಟು ೮೭೨ ಪಲ್ಸ್ ಪೋಲಿಯೋ ಬೂತ್‌ಗಳಲ್ಲಿ ಲಸಿಕೆ ಲಭ್ಯ
ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಲಸಿಕೆ ಸಹಕಾರಿ