ಕನ್ನಡಪ್ರಭ ವಾರ್ತೆ ಗುಬ್ಬಿ

ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ 28ರಂದು ನಡೆಯುವ ಹಿನ್ನೆಲೆ ಯಾವುದೇ ರೀತಿಯ ಸಮಸ್ಯೆಗಳು ಉದ್ಭವವಾಗದಂತೆ ಜಾಗ್ರತೆಯಿಂದ ಲಸಿಕೆ ನೀಡಬೇಕು ಎಂದು ತಹಸೀಲ್ದಾರ್ ಬಿ. ಆರತಿ ತಿಳಿಸಿದರು.ತಾಲೂಕು ಕಚೇರಿಯ ಕಂದಾಯ ಭವನದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 28ರಿಂದ ಜು.1 ರವರೆಗೆ ಅಭಿಯಾನ ನಡೆಯಲಿದೆ. ಮೊದಲನೇ ದಿನ ಬೆಳಗ್ಗೆ 8 ರಿಂದ 5 ಗಂಟೆಯವರೆಗೆ ಪಲ್ಸ್ ಪೋಲಿಯೋ ಲಸಿಕೆಯನ್ನು ಲಸಿಕಾ ಕೇಂದ್ರದಲ್ಲಿ ಹಾಕಲಾಗುತ್ತದೆ. 29 ರಿಂದ ಜು.1 ರವರೆಗೆ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಲಸಿಕೆ ಹಾಕಲಿದ್ದಾರೆ. ತಾಲೂಕು ವೈದ್ಯಾಧಿಕಾರಿ ಡಾ.ವಿಜಯ್ ಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದ 16,206 ಮಕ್ಕಳು ಹಾಗೂ ನಗರ ಪ್ರದೇಶದ 1423 ಮಕ್ಕಳು ಒಟ್ಟು 17629 ಮಕ್ಕಳಿದ್ದು, 68955 ಮನೆಗಳಿಗೆ ಲಸಿಕಾ ಕಾರ್ಯಕರ್ತರು ಭೇಟಿ ನೀಡಲಿದ್ದು, ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆಯನ್ನು ಹಾಕಲಾಗುತ್ತದೆ. ಪೋಷಕರು ಹುಟ್ಟಿ ನಿಂದ ಐದು ವರ್ಷದೊಳಗಿನ ಎಲ್ಲಾ ಬಮಕ್ಕಳಿಗೂ ಲಸಿಕೆಯನ್ನು ಹಾಕಿಸಲು ತಿಳಿಸಿದರು.

ಈ ಸಂದರ್ಭದಲ್ಲಿ ತಾಪಂ ಇಒ ರಂಗನಾಥ್, ಬಿಇಒ ಎಂ.ಎಸ್.ನಟರಾಜ್, ವೈದ್ಯಾಧಿಕಾರಿ ಡಾ. ಕೇಶವರಾಜ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಎಂ.ಎಸ್.ವೀಣಾ, ಬಿಸಿಎಂ ಇಲಾಖೆಯ ಪವಿತ್ರ, ಕಾರ್ಮಿಕ ಇಲಾಖೆಯ ತಿಲಕ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.