ರೋಗನಿರೋಧಕ ಶಕ್ತಿಗೆ ಜೀವಾಮೃತವಾಗಿ ಹನಿಯಿದ್ದು 3 ದಿನಗಳವರೆಗೆ ನಡೆಯುವ ಲಸಿಕೆ ಕಾರ್ಯಕ್ರಮಕ್ಕೆ ಸಹಕರಿಸಿ. ಸದೃಢ ಆರೋಗ್ಯಕರ ಸಮಾಜ ಕಟ್ಟಲು ಎಲ್ಲರೂ ಸಹಕರಿಸಿ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ದೇಶದಲ್ಲಿ ಪೋಲಿಯೋ ಮಾರಣಾಂತಿಕವಾಗಿ ಕಾಣದಿದ್ದರೂ ಮುನ್ನೇಚ್ಚರಿಕೆ ಕ್ರಮವಾಗಿ ಮತ್ತೊಮ್ಮೆ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹನಿ ಹಾಕಲಾಗುತ್ತಿದೆ ಎಂದು ಗ್ರಾಪಂ ಅಧ್ಯಕ್ಷ ಕೆ.ಬಿ.ಚಂದ್ರಶೇಖರ್ ಹೇಳಿದರು.ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕಿ ಮಾತನಾಡಿ, ರೋಗನಿರೋಧಕ ಶಕ್ತಿಗೆ ಜೀವಾಮೃತವಾಗಿ ಹನಿಯಿದ್ದು 3 ದಿನಗಳವರೆಗೆ ನಡೆಯುವ ಲಸಿಕೆ ಕಾರ್ಯಕ್ರಮಕ್ಕೆ ಸಹಕರಿಸಿ. ಸದೃಢ ಆರೋಗ್ಯಕರ ಸಮಾಜ ಕಟ್ಟಲು ಎಲ್ಲರೂ ಸಹಕರಿಸಿ ಎಂದರು.ಡಾ.ಚಂದನ್ ಮಾತನಾಡಿ, ತಾಲೂಕಿನಲ್ಲಿ 19,372, ಹೋಬಳಿಯಲ್ಲಿ ಲಸಿಕೆ ಹಾಕಿಸುವ ಮಕ್ಕಳು 3,179 ಇದ್ದು, ಎಲ್ಲ ಮಕ್ಕಳಿಗೂ ಲಸಿಕೆ ಹಾಕಿಸಲು ಇಲಾಖೆ ಸಜ್ಜಾಗಿದೆ. ಲಸಿಕೆಯಿಂದ ಯಾವುದೇ ಅಡ್ಡಪರಿಣಾಮವಿಲ್ಲ. ವದಂತಿಗೆ ಕಿವಿಗೊಡದೆ ಕಡ್ಡಾಯವಾಗಿ ಪಾಲಕರು ಮಕ್ಕಳಿಗೆ ಲಸಿಕೆ ಹಾಕಿಸಿ ಎಂದರು.
ಡಾ. ಸುಪ್ರೀತ್ ಮಾತನಾಡಿ, ನಾಳೆಯಿಂದ 2ದಿನಗಳವರೆಗೆ ಮನೆ, ಬಸ್‌ನಿಲ್ದಾಣದಂತಹ ಪ್ರಮುಖ ಕೇಂದ್ರದಲ್ಲಿ ಲಸಿಕೆ ಕಾರ್ಯಕ್ರಮ ಹಾಕಲಾಗುವುದು. ಕಬ್ಬು ಕಟಾವು, ಕೂಲಿ ಕಾರ್ಮಿಕರಂತಹ ಜನಪ್ರದೇಶಗಳಲ್ಲಿರುವ ವಲಸೆ ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಸಂಘ ಸಂಸ್ಥೆ, ಸಾರ್ವಜನಿಕರು ಇಲಾಖೆಯೊಂದಿಗೆ ಕೈಜೋಡಿಸಿ ಎಂದು ವಿನಂತಿಸಿದರು.ಡಾ. ಸುಪ್ರೀತ್, ಡಾ. ಚಂದನ್, ಸಿಬ್ಬಂದಿಗಳಾದ ರಂಗಸ್ವಾಮಿ, ನಾಗೇಂದ್ರ, ಸುಪ್ರಿಯಾ, ಪಾರ್ವತಮ್ಮ, ಆರೋಗ್ಯ ಸಹಾಯಕಿಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಹೆದ್ದಾರಿಯಲ್ಲಿ ರೆಡ್‌ಕ್ರಾಸ್‌ನಿಂದ ಬೂತ್ ತೆರೆದು ಲಸಿಕೆಮಂಡ್ಯ:
ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿರುವ ಜ್ಯೋತಿ ಇಂಟರ್‌ನ್ಯಾಷನಲ್ ಹೋಟೆಲ್ ಬಳಿ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯಿಂದ ಬೂತ್ ತೆರೆದು ವಾಹನಗಳಲ್ಲಿ ತೆರಳುವ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಿದರು.ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಕೆ.ಪಿ.ಅಶ್ವಥ್ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕುವ ಮೂಲಕ ಉದ್ಘಾಟಿಸಿದರು. 3 ವರ್ಷದವರೆಗಿನ ಯಾವ ಮಗುವೂ ಪಲ್ಸ್ ಪೋಲಿಯೋದಿಂದ ವಂಚಿತವಾಗಬಾರದು ಎಂಬ ಕಾರಣಕ್ಕೆ ಹೆದ್ದಾರಿ ಬದಿಯಲ್ಲಿ ಬೂತ್ ತೆರೆಯಲಾಗಿದೆ. ತುರ್ತು ಕೆಲಸದ ಮೇಲೆ ಮಕ್ಕಳೊಂದಿಗೆ ತೆರಳುವವರು ಬೂತ್‌ಗಳಲ್ಲಿ ಲಸಿಕೆ ಹಾಕಿಸಿಕೊಂಡು ಹೋಗಲು ಸುಲಭವಾಗುವಂತೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ, ರೆಡ್‌ಕ್ರಾಸ್‌ನ ರಂಗಸ್ವಾಮಿ, ಎಂ.ಯೋಗೇಶ್ ಇತರರಿದ್ದರು.