ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲೆಯಾದ್ಯಂತ 28 ರಿಂದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ಸಿದ್ಧತೆ ಬಗ್ಗೆ ಅಧಿಕಾರಿಗಳಿಂದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಮಾಹಿತಿ ಪಡೆದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಯಶಸ್ಸಿಗೆ ಎಲ್ಲ ಇಲಾಖೆಗಳು, ಸಂಘ ಸಂಸ್ಥೆಗಳು ಕೈಜೋಡಿಸಬೇಕು. ಅಗತ್ಯ ಸಿಬ್ಬಂದಿ ಹಾಗೂ ವಾಹನಗಳ ನಿಯೋಜನೆ, ನಿರಂತರ ವಿದ್ಯುತ್ ಪೂರೈಕೆ, ಅಂಗನವಾಡಿ ಮತ್ತು ಶಾಲಾ- ಕಾಲೇಜುಗಳಲ್ಲಿ ಇತರೆ ಪ್ರದೇಶಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆ ನೀಡಲು ವ್ಯವಸ್ಥೆ ಮಾಡುವುದು ಮತ್ತಿತರ ವಿಷಯಗಳ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಮಾಹಿತಿ ನೀಡಿ, ಜಿಲ್ಲೆಯಲ್ಲಿ 5 ವರ್ಷದವರೆಗಿನ ಒಟ್ಟು 29,011 ಮಕ್ಕಳಿದ್ದು, ನಗರ ವ್ಯಾಪ್ತಿಯಲ್ಲಿ 2,638, ಗ್ರಾಮೀಣ ಭಾಗದಲ್ಲಿ 26,373 ಮಕ್ಕಳಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 5,52,210 ಜನಸಂಖ್ಯೆ ಇದ್ದು, ನಗರ ವ್ಯಾಪ್ತಿಯಲ್ಲಿ 55,399, ಗ್ರಾಮೀಣ ಭಾಗದಲ್ಲಿ 4,99,811 ಜನ ಸಂಖ್ಯೆ ಇದೆ. ಇವರಲ್ಲಿ ವಲಸಿಗ ಮಕ್ಕಳ ಸಂಖ್ಯೆ 1297 ಮತ್ತು ಸ್ಥಿರವಾಸಿತ ವಲಸೆ ಜನಸಂಖ್ಯೆಯು 15,927 ಸೇರಿ ಒಟ್ಟು 17,224 ಇರುತ್ತದೆ ಎಂದು ಮಾಹಿತಿ ನೀಡಿದರು.
28 ರಂದು ಬೆಳಗ್ಗೆ 8 ರಿಂದ ಬೂತ್ ಮಟ್ಟದಲ್ಲಿ ಪೋಲಿಯೋ ಹನಿ ನೀಡಲಾಗುತ್ತದೆ. ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಹಾಗೂ ಸ್ಥಿರವಾಸಿತ ವಲಸೆ ಮಕ್ಕಳ ಸಂಖ್ಯೆಯೂ ಹೆಚ್ಚಿರುವುದರಿಂದ ಮೂರು ದಿನಗಳ ಕಾಲ ನಗರ, ಪಟ್ಟಣ ಪ್ರದೇಶ ಭೇಟಿ ನೀಡಿ ಪೋಲಿಯೋ ಹನಿ ನೀಡಲಾಗುತ್ತದೆ ಎಂದರು.
ವಿವಿಧ ಇಲಾಖೆ, ಸಂಘಟನೆ ಸಹಕಾರ ಬೇಕು: ವೈದ್ಯಕೀಯ ಶಿಕ್ಷಣ ಇಲಾಖೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜೊತೆ ಕೈಜೋಡಿಸುವುದು, ವಿವಿಧ ಸಂಘ, ಸಂಸ್ಥೆಗಳು ಪಲ್ಸ್ ಪೋಲಿಯೋ ಯಶಸ್ಸಿಗೆ ಕೈಜೋಡಿಸುವುದು, ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಇರುವ ಗ್ರಾಮಗಳು, ಲಸಿಕೆ ನೀಡುವ ಸ್ಥಳ ಹಾಗೂ ದಿನಾಂಕವನ್ನು ಕರಪತ್ರದಲ್ಲಿ ಮುದ್ರಿಸಿ ವಿತರಿಸುವುದು, ಹಾಗೆಯೇ ವಿವಿಧ ಧಾರ್ಮಿಕ ಮುಖಂಡರು ಸಹ ಪಲ್ಸ್ ಪೋಲಿಯೋ ಲಸಿಕೆ ಮಹತ್ವ ಬಗ್ಗೆ ಜಾಗೃತಿ ಮೂಡಿಸುವುದು. ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಂಚಾರಿ ಘಟಕಕ್ಕೆ ಸ್ಥಳಾವಕಾಶ ನೀಡಿ ಲಸಿಕೆ ಪಡೆಯಲು ಅವಕಾಶ ಮಾಡುವುದು. ಹೀಗೆ ವಿವಿಧ ಇಲಾಖೆಗಳ ಸಹಕಾರ ಪಡೆಯಲಾಗಿದೆ ಎಂದು ಡಾ.ಸತೀಶ್ ಕುಮಾರ್ ಅವರು ಹೇಳಿದರು.
ಸೆಸ್ಕ್ ಇಇ ರಾಮಚಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್, ಪ್ರಾದೇಶಿಕ ಸಾರಿಗೆ ಇಲಾಖೆಯ ಇನ್‌ಸ್ಪೆಕ್ಟರ್ ಮೋಹನ್ ಕುಮಾರ್, ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು, ಕೆಎಸ್‍ಆರ್‌ಟಿಸಿ ಘಟಕ ವ್ಯವಸ್ಥಾಪಕ ಈರಸಪ್ಪ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ದೀಪಕ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.