ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ಡಿ.21ರಂದು ಬೆಳಗ್ಗೆ 8 ರಿಂದ ಸಂಜೆ 5ರ ತನಕ ನಡೆಯಲಿದೆ. ಇದರ ಅಂಗವಾಗಿ ಜಿಲ್ಲೆಯ 5 ವರ್ಷದೊಳಗಿನ 1,41,594 ಮಕ್ಕಳಿಗೆ ಲಸಿಕೆ ಹಾಕುವುದಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ

ಮಂಗಳೂರು: ಈ ಬಾರಿಯ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ಡಿ.21ರಂದು ಬೆಳಗ್ಗೆ 8 ರಿಂದ ಸಂಜೆ 5ರ ತನಕ ನಡೆಯಲಿದೆ. ಇದರ ಅಂಗವಾಗಿ ಜಿಲ್ಲೆಯ 5 ವರ್ಷದೊಳಗಿನ 1,41,594 ಮಕ್ಕಳಿಗೆ ಲಸಿಕೆ ಹಾಕುವುದಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ತಿಳಿಸಿದರು.ತಮ್ಮ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲೆಯ 956 ಲಸಿಕಾ ಕೇಂದ್ರದಲ್ಲಿ 1,41,594 ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಅಲ್ಲದೆ ಇದರಲ್ಲಿ ಬಿಟ್ಟು ಹೋಗುವ ಮಕ್ಕಳನ್ನು ಗುರುತಿಸಲು ಡಿ.22, 23 ಮತ್ತು 24ರಂದು ನಗರದ ವ್ಯಾಪ್ತಿ ಹಾಗೂ ಡಿ.22 ಮತ್ತು 23ರಂದು ಗ್ರಾಮಾಂತರ ವ್ಯಾಪ್ತಿಯಲ್ಲಿ ಗುರುತಿಸುವುದಕ್ಕಾಗಿ ಮನೆ ಮನೆ ಭೇಟಿ ಕೈಗೊಳ್ಳಲಾಗುವುದು. ಮಾತ್ರವಲ್ಲದೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಳಿದ ದಿನಗಳಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯೊಳಗೆ ಹಾಕಿಸಿಕೊಳ್ಳಬಹುದು ಎಂದರು.ಡಿ.21ರಂದು ಬೆಳಗ್ಗೆ 8 ಗಂಟೆಗೆ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಕ್ರಮಕ್ಕೆ ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಚಾಲನೆ ನೀಡಲಾಗುವುದು ಎಂದು ಡಿಎಚ್ಒ ತಿಳಿಸಿದರು.ಆರ್‌ಸಿಎಚ್ ಅಧಿಕಾರಿ ಡಾ.ರಾಜೇಶ್, ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಇದ್ದರು.ಪಲ್ಸ್ ಪೋಲಿಯೋ ಲಸಿಕೆ ಮಹತ್ವ:

ಹುಟ್ಟಿದ ಮಗುವಿನಿಂದ ತೊಡಗಿ ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಪಲ್ಸ್ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಪೋಲಿಯೋ ರೋಗವನ್ನು ನಿಯಂತ್ರಣ ಮಾಡುವುದು ಸರ್ಕಾರ ಉದ್ದೇಶ.

ರಾಜ್ಯದಲ್ಲಿ 2007ರಲ್ಲಿ ಹಾಗೂ ದೇಶದಲ್ಲಿ 2011ರಲ್ಲಿ ಪೋಲಿಯೋ ಪ್ರಕರಣ ಕೊನೆದಾಗಿ ಕಾಣಿಸಿಕೊಂಡಿತ್ತು. ಕಳೆದ 14 ವರ್ಷಗಳಿಂದ ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿದ್ದರೂ ಕೂಡ ವಿಶ್ವದ ಹಲವು ದೇಶಗಳಲ್ಲಿ ಈಗಲೂ ಪೋಲಿಯೋ ಪ್ರಕರಣಗಳು ಕಾಣಿಸಿಕೊಂಡಿದೆ. ವಿಶೇಷವಾಗಿ ಅಪಘಾನಿಸ್ತಾನ, ಪಾಕಿಸ್ತಾನದಲ್ಲಿ ಪತ್ತೆಯಾಗುತ್ತಿದ್ದು, ಭಾರತಕ್ಕೂ ಅಲ್ಲಿನ ಮಂದಿ ವಲಸೆ ಬರುವ ಸಾಧ್ಯತೆ ಇರುವುದರಿಂದ ಪಲ್ಸ್ ಪೋಲಿಯೋ ಲಸಿಕೆ ಹಾಕಿಸುವುದು ಅಗತ್ಯವಿದೆ.