ನಾಳೆಯಿಂದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ: ಶಶಿಧರ ಕುರೇರ್‌

| Published : Mar 02 2024, 01:49 AM IST

ಸಾರಾಂಶ

ಬಾಗಲಕೋಟೆ ಜಿಲ್ಲಾದ್ಯಂತ ಮಾ.3ರಿಂದ ನಾಲ್ಕು ದಿನಗಳ ಕಾಲ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸುವಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ಪಾಲಕರಲ್ಲಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲಾದ್ಯಂತ ಮಾ.3ರಿಂದ ನಾಲ್ಕು ದಿನಗಳ ಕಾಲ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸುವಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ಪಾಲಕರಲ್ಲಿ ಮನವಿ ಮಾಡಿದರು.

ಜಿಪಂ ಸಭಾಭವನದಲ್ಲಿ ಶುಕ್ರವಾರ ಜರುಗಿದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಕುರಿತು ಜಿಲ್ಲಾಮಟ್ಟದ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಗೊಳಿಸಲು ಮಾ.3ರಂದು ಬೂತ್ ಮಟ್ಟದಲ್ಲಿ ನಡೆಸಲಾಗುತ್ತಿದ್ದು, ನಂತರದ ಮೂರು ದಿನ ಮನೆ ಮನೆಗೆ ತೆರಳಿ ಲಸಿಕೆ ಹಾಕಲಾಗುತ್ತಿದೆ ಎಂದು ತಿಳಿಸಿದರು.

ಪೋಲಿಯೋ ಒಂದು ಮಾರಕ ರೋಗವಾಗಿದ್ದು, 5 ವರ್ಷದೊಳಗಿನ ಯಾವುದೇ ಮಗು ಈ ಕಾರ್ಯಕ್ರಮದಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಈ ಲಸಿಕಾ ಕಾರ್ಯಕ್ರಮಕ್ಕೆ ಗ್ರಾಪಂ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಕಾಳಜಿ ವಹಿಸಿ, ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಲಸಿಕಾ ಕೇಂದ್ರಗಳಿಗೆ ಕರೆದುಕೊಂಡು ಬರಬೇಕು ಸಿಇಒ ಹೇಳಿದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಸುವರ್ಣ ಕುಲಕರ್ಣಿ ಮಾತನಾಡಿ, ನಗರ ಪ್ರದೇಶದಲ್ಲಿ 76348 ಹಾಗೂ ಗ್ರಾಮೀಣ ಪ್ರದೇಶದಲ್ಲಿ 149661 ಸೇರಿ ಒಟ್ಟು 226009 ಮಕ್ಕಳಿದ್ದು, 418458 ಕುಟುಂಬಗಳಿವೆ. ಲಸಿಕಾ ಕಾರ್ಯಕ್ಕೆ ಒಟ್ಟು 1302 ಬೂತ್‌ ಗಳನ್ನು ಸ್ಥಾಪಿಸಲಾಗಿದೆ. 80 ಮೊಬೈಲ್ ಟೀಮ್ ಗಳನ್ನು ಕೂಡ ಸ್ಥಾಪಿಸಲಾಗಿದೆ. ಪ್ರತಿ ಬೂತ್ ಗೆ ಇಬ್ಬರು ಸದಸ್ಯರು, ಐದು ತಂಡಕ್ಕೆ ಒಬ್ಬ ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದು, ಪ್ರತಿ ಬೂತ್ ಮಟ್ಟದ ವ್ಯಾಪ್ತಿಯಲ್ಲಿ ಬರುವ ಮನೆಗಳಿಗೆ ತೆರಳಿ ತಪ್ಪದೆ ಪೋಲಿಯೋ ಹನಿ ಹಾಕಲಿದ್ದಾರೆ ಎಂದರು.

ಲಸಿಕಾ ಕಾರ್ಯಕ್ರಮಕ್ಕೆ 2842 ಸಿಬ್ಬಂದಿ, 263 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಬಾಗಲಕೋಟೆ-40266, ಬಾದಾಮಿ-40946, ಬೀಳಗಿ-23136, ಹುನಗುಂದ-43256, ಮುಧೋಳ-49592 ಹಾಗೂ ಜಮಖಂಡಿ-76352 ಸೇರಿ ಜಿಲ್ಲೆಯಾದ್ಯಂತ ಒಟ್ಟು 273548 ಹನಿ ಪೋಲಿಯೋ ಹನಿ ಹಾಕಲಾಗುತ್ತದೆ. ಈ ಕಾರ್ಯಕ್ರಮಕ್ಕೆ 77 ವಾಹನಗಳು ಅವಶ್ಯವಿದ್ದು, ಈಗಾಗಲೇ 28 ಇಲಾಖೆ ವಾಹನಗಳಿದ್ದು, ಹೆಚ್ಚುವರಿ 49 ವಾಹನಗಳು ಅವಶ್ಯಕತೆ ಇದರುವುದಾಗಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಕುಮಾರ ಯರಗಲ್ಲ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ಬಿ.ಪಟ್ಟಣಶೆಟ್ಟಿ, ವಿಶ್ವ ಆರೋಗ್ಯ ಸಂಸ್ಥೆಯ ಡಾ.ಮುಕುಂದ ಗಲಗಲಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕುಸುಮಾ ಮಾಗಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ದಯಾನಂದ ಕರೆನ್ನವರ, ರೋಟರಿ ಕ್ಲಬ್ನ ಪ್ರತಿನಿಧಿ ಪರಾಂಡೆ, ಚಿಕ್ಕ ಮಕ್ಕಳ ತಜ್ಞ ಡಾ.ರಮೇಶ ಪೋಳ ಸೇರಿದಂತೆ ಆಯಾ ತಾಲೂಕಾ ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.