ಪುನೀತ್ ಯುವಕರಿಗೆ ಆದರ್ಶ: ಡಾ.ಎಚ್.ಎಲ್.ನಾಗರಾಜು
KannadaprabhaNewsNetwork | Published : Oct 30 2023, 12:31 AM IST
ಪುನೀತ್ ಯುವಕರಿಗೆ ಆದರ್ಶ: ಡಾ.ಎಚ್.ಎಲ್.ನಾಗರಾಜು
ಸಾರಾಂಶ
ಪುನೀತ್ ಯುವಕರಿಗೆ ಆದರ್ಶ: ಡಾ.ಎಚ್.ಎಲ್.ನಾಗರಾಜುರಕ್ತದಾನದಿಂದ ಅಮೂಲ್ಯ ಜೀವಗಳ ಉಳಿವು: ಮೀರಾ ಶಿವಲಿಂಗಯ್ಯ
- ರಕ್ತದಾನದಿಂದ ಅಮೂಲ್ಯ ಜೀವಗಳ ಉಳಿವು: ಮೀರಾ ಶಿವಲಿಂಗಯ್ಯ - ಪುನೀತ್‌ರಾಜ್‌ಕುಮಾರ್ ಎರಡನೇ ಪುಣ್ಯಸ್ಮರಣೆ ಪ್ರಯುಕ್ತ ರಕ್ತದಾನ ಶಿಬಿರ ಕನ್ನಡಪ್ರಭ ವಾರ್ತೆ ಮಂಡ್ಯ ಪುನೀತ್ ರಾಜ್‌ಕುಮಾರ್ ಅವರದ್ದು ಆದರ್ಶಪ್ರಾಯ ವ್ಯಕ್ತಿತ್ವ. ಯುವಕರಿಗೆ ಸ್ಫೂರ್ತಿಯ ಚಿಲುಮೆ. ವಯಸ್ಸಿಗೂ ಮೀರಿದ ಸಾಧನೆ ಮಾಡುವುದರೊಂದಿಗೆ ಕರ್ನಾಟಕ ರತ್ನ ಎನಿಸಿಕೊಂಡರು. ಅವರ ಜೀವನ ಎಲ್ಲರಿಗೂ ಮಾದರಿ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಬಣ್ಣಿಸಿದರು. ನಗರದ ಎಸ್.ಬಿ.ಸಮುದಾಯ ಭವನದಿಂದ ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗ, ಜಿಲ್ಲಾ ರಕ್ತನಿಧಿ ಕೇಂದ್ರ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಗೂ ಜಿಲ್ಲೆಯ ಎಲ್ಲ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಪುನೀತ್ ರಾಜ್‌ಕುಮಾರ್ ಎರಡನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ವರನಟ ಡಾ.ರಾಜಕುಮಾರ್ ಅವರ ಪುತ್ರರೆನಿಸಿದರೂ ಸಿನಿಮಾ ರಂಗದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಯುವಮನಸ್ಸುಗಳನ್ನು ಆಕರ್ಷಿಸಿದ್ದರು. ಕಲಾ ಸೇವೆಯ ಜೊತೆಯಲ್ಲೇ ಅವರು ಮಾಡಿದ ಸಾಮಾಜಿಕ, ಮಾನವೀಯ ಕಾರ್ಯಗಳಿಂದ ಸಮಾಜಕ್ಕೆ ಕೊಡುಗೆ ನೀಡಿದರು. ವಯಸ್ಸಿಗೂ ಮೀರಿದ ಸಾಧನೆಯಿಂದ ಎಲ್ಲ ವರ್ಗದ ಜನರ ಮೆಚ್ಚುಗೆಗೆ ಪಾತ್ರರಾದರು. ತಮ್ಮ ಅಪರೂಪದ ವ್ಯಕ್ತಿತ್ವದಿಂದ ಕರುನಾಡು ಮಾತ್ರವಲ್ಲದೆ ವಿಶ್ವದ ಅನೇಕ ಕಡೆಗಳಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದರು ಎಂದರು. ಪುನೀತ್ ಅಕಾಲಿಕ ನಿಧನದಿಂದ ಸಮಾಜಮುಖಿ ವ್ಯಕ್ತಿತ್ವದ ನಾಯಕನೊಬ್ಬನನ್ನು ಕಳೆದುಕೊಂಡಂತಾಗಿದೆ. ಅವರ ಅಗಲಿಕೆಯಿಂದ ಸಮಾಜಕ್ಕೆ ತುಂಬಲಾಗದ ನಷ್ಟವಾಗಿದೆ. ಇಂದಿನ ಯುವಕರು ಪುನೀತ್ ಹಾದಿಯಲ್ಲೇ ನಡೆದು ಸಮಾಜಕ್ಕಾಗಿ ದುಡಿಯುವ, ಸೇವಾ ಮನೋಭಾವನೆಯಿಂದ ದುಡಿಯುವ, ಕಲೆ, ಸಂಸ್ಕೃತಿ, ಸಾಹಿತ್ಯದ ಬೆಳವಣಿಗೆಗೆ ಶ್ರಮಿಸಿದರೆ ಅವರ ಆತ್ಮಕ್ಕೆ ಗೌರವ ಸೂಚಿಸಿದಂತಾಗುವುದು ಎಂದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ರಕ್ತಕ್ಕೆ ಪರ್ಯಾಯ ವಸ್ತುವನ್ನು ಇದುವರೆಗೂ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ರಕ್ತಕ್ಕೆ ರಕ್ತವೇ ಪರ್ಯಾಯವಾಗಿದೆ. ಆದ ಕಾರಣ ರಕ್ತದಾನ ಮಾಡುವ ಮನೋಭಾವವನ್ನು ಯುವಕರು ಹೆಚ್ಚಾಗಿ ಬೆಳೆಸಿಕೊಳ್ಳಬೇಕು ಎಂದರು. ರಕ್ತದಾನದಿಂದ ಅಪಾಯದಲ್ಲಿರುವ ಅನೇಕ ಜೀವಗಳಿಗೆ ಆಸರೆಯಾಗುತ್ತದೆ. ರಕ್ತದಾನಿಗಳಿಗೆ ಜೀವಗಳನ್ನು ಉಳಿಸಿದ ಪುಣ್ಯ ಸಿಗುತ್ತದೆ. ಎಲ್ಲರಿಂದಲೂ ರಕ್ತವನ್ನು ಪಡೆಯಲಾಗುವುದಿಲ್ಲ. ೧೮ ರಿಂದ ೬೦ ವರ್ಷದವರೆಗಿನ ಆರೋಗ್ಯವಂತ ವ್ಯಕ್ತಿಗಳಿಂದ ಮಾತ್ರ ರಕ್ತ ಪಡೆಯಲು ಸಾಧ್ಯ. ಯುವ ಸಮೂಹ ರಕ್ತದಾನಕ್ಕೆ ಹೆಚ್ಚಿನ ಆಸಕ್ತಿ ತೋರಬೇಕು ಎಂದು ನುಡಿದರು. ಜೀವಧಾರೆ ನಟರಾಜು, ಭಾರತೀಯ ರೆಡ್‌ಕ್ರಾಸ್‌ನ ರಂಗಸ್ವಾಮಿ, ಪುನೀತ್ ಅಭಿಮಾನಿ ಬಳಗದ ಹೇಮಂತ್, ರಾಜು, ಮಹೇಶ್, ಸಿದ್ದು, ಆಕಾಶ್ ಇತರರಿದ್ದರು.