ಪುನೀತ್ ರಾಜ್ ಕುಮಾರ್ ಗೆ ಜನರ ಮನದಲ್ಲಿ ಶಾಶ್ವತ ಸ್ಥಾನ

| Published : Oct 30 2024, 12:36 AM IST

ಸಾರಾಂಶ

ಕುಪ್ಪಸ್ವಾಮಿ ಸರ್ಕಲ್‌ನಲ್ಲಿ ಪುನೀತ್‌ ರಾಜಕುಮಾರ್ ಅವರ ಭಾವಚಿತ್ರಗಳು ರಾರಾಜಿಸಿದವು. ಸಂಜೆ ಬೆಳ್ಳಿ ರಥದಲ್ಲಿ ಪುನೀತ್‌ರಾಜ್‌ಕುಮಾರವರ ಭಾವಚಿತ್ರ ಮೆರವಣಿಗೆಯು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಜಾನಪದ ಕಲಾಮೇಳದೊಂದಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಕರ್ನಾಟಕ ರತ್ನ ಡಾ.ಪುನೀತ್‌ ರಾಜ್‌ಕುಮಾರ್ ಅವರ ಸಾಮಾಜಿಕ ಸೇವೆ ಜಗತ್ತಿನಲ್ಲಿಯೇ ಮಾದರಿ. ಅಪ್ಪು ಎಂದೆಂದಿಗೂ ಜನರ ಮನದಲ್ಲಿ ಶಾಶ್ವತವಾಗಿ ಉಳಿಯಲಿದ್ದಾರೆ ಎಂದು ಡಾ.ರಾಜ್‌ಕುಮಾರ್ ಕಲಾ ಸಂಘದ ಅಧ್ಯಕ್ಷ ದೊಡ್ಡಯ್ಯ ತಿಳಿಸಿದರು.

ಪಟ್ಟಣದ ಗಂಗಾಮತ ಬೀದಿಯ ಗಂಗಾ ಪರಮೇಶ್ವರಿ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಕುಮಾರ್ ಬಾಯ್ಸ್ ವತಿಯಿಂದ ಪುನೀತ್‌ ರಾಜ್‌ಕುಮಾರವರ ಮೂರನೇ ವರ್ಷದ ಪುಣ್ಯತಿಥಿ ಅಂಗವಾಗಿ ನಡೆದ ಅಪ್ಪು ಉತ್ಸವದಲ್ಲಿ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ದೇಶಾದ್ಯಂತ ಪುನೀತ್‌ರವರ ಪುಣ್ಯಸ್ಮರಣೆ ನಡೆಯುತ್ತಿದೆ. ಅಪ್ಪು ಅವರ ಸೇವೆ ಅನನ್ಯ. ಕನ್ನಡ ಚಿತ್ರರಂಗದ ಸೇವೆ ಜೊತೆಗೆ ಸಮಾಜಕ್ಕೆ ಕಾಣದ ರೀತಿಯಲ್ಲಿ ಹಲವು ಮಂದಿಗೆ ಸಹಾಯ ಹಸ್ತ ನೀಡಿರುವ ಪುನೀತ್‌ ನಡೆ ಇಂದಿನ ಯುವ ಸಮೂಹಕ್ಕೆ ಸ್ಫೂರ್ತಿಯಾಗಿದೆ ಎಂದರು.

ಡಾ.ರಾಜ್‌ ಕುಟುಂಬಕ್ಕೂ ಮಳವಳ್ಳಿ ತಾಲೂಕಿಗೂ ಅವಿನಾಭಾವ ಸಂಬಂಧವಿದೆ. ಪ್ರತಿವರ್ಷ ರಾಜ್‌ಕುಮಾರ್ ಕುಟುಂಬ ಮುತ್ತತ್ತಿ ಹಾಗೂ ಶಿವನಸಮುದ್ರ ಮಾರಮ್ಮ ದೇವರಿಗೆ ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಅವರ ಕುಟುಂಬ ಸದಸ್ಯರೊಂದಿಗೆ ಇಲ್ಲಿನ ಅಭಿಮಾನಿಗಳು ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ ಎಂದು ತಿಳಿಸಿದರು.

ಪಟ್ಟಣದ ಕುಪ್ಪಸ್ವಾಮಿ ಸರ್ಕಲ್‌ನಲ್ಲಿ ಪುನೀತ್‌ ರಾಜಕುಮಾರ್ ಅವರ ಭಾವಚಿತ್ರಗಳು ರಾರಾಜಿಸಿದವು. ಸಂಜೆ ಬೆಳ್ಳಿ ರಥದಲ್ಲಿ ಪುನೀತ್‌ರಾಜ್‌ಕುಮಾರವರ ಭಾವಚಿತ್ರ ಮೆರವಣಿಗೆಯು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಜಾನಪದ ಕಲಾಮೇಳದೊಂದಿಗೆ ನಡೆಯಿತು. ಹಾಡಿಗೆ ತಕ್ಕಂತೆ ಅಪ್ಪು ಅಭಿಮಾನಿಗಳು ಕನ್ನಡದ ಬಾವುಟವನ್ನು ಹಿಡಿದು ಕುಣಿದು ಕುಪ್ಪಳಿಸಿದರು. ಸಾವಿರಾರು ಮಂದಿಗೆ ಅನ್ನಸಂತರ್ಪಣೆ ನಡೆಯಿತು.

ಇದೇ ವೇಳೆ ರಾಶಿರಾಪು ಕೃಷ್ಣ, ಪುರಸಭೆ ಸದಸ್ಯರಾದ ನಾಗೇಶ್, ಎಂ.ಎನ್ ಶಿವಸ್ವಾಮಿ, ಮುಖಂಡರಾದ ಯಜಮಾನ್ ರಾಮಸ್ವಾಮಿ, ಅಣ್ಣಯ್ಯ, ಪ್ರಭು, ಬಸಪ್ಪ, ಕಂಬರಾಜು, ಜಗದೀಶ್, ನಂಜುಂಡ, ಶ್ರೀನಿವಾಸ್,ರವಿ, ಪರಮೇಶ್, ಮಹದೇವು, ಶಿವಕುಮಾರ್, ವೇಣು, ಉಮೇಶ್,ಗುಡ್ಟಪ್ಪ ಮಹದೇವಪ್ಪ, ಉಂತೂರ, ಪುಟ್ಟಸ್ವಾಮಿ, ಪ್ರೇಸ್ ವೆಂಟಕಸ್ವಾಮಿ ಸೇರಿದಂತೆ ಇತರರು ಇದ್ದರು.