ತಪ್ಪಿತಸ್ಥರಿಗೆ, ವಿಡಿಯೋ ವೈರಲ್‌ ಮಾಡಿದವರಿಗೆ ಶಿಕ್ಷೆಯಾಗಲಿ

| Published : May 02 2024, 12:21 AM IST

ತಪ್ಪಿತಸ್ಥರಿಗೆ, ವಿಡಿಯೋ ವೈರಲ್‌ ಮಾಡಿದವರಿಗೆ ಶಿಕ್ಷೆಯಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಸಿದ್ದಲ್ಲಿ ಅದಕ್ಕೆ ಸರ್ಕಾರ ಕಾನೂನು ಕ್ರಮಕೈಗೊಳ್ಳಿ ಎಂದು ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಸಿದ್ದಲ್ಲಿ ಅದಕ್ಕೆ ಸರ್ಕಾರ ಕಾನೂನು ಕ್ರಮಕೈಗೊಳ್ಳಿ ಎಂದು ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿಯವರ 10 ವರ್ಷಗಳ ಸಾಧನೆ ಹಾಗೂ ರಾಜ್ಯ ಕಾಂಗ್ರೆಸ್ ವೈಫಲ್ಯಗಳ ಆಡಿಯೋ ಮತ್ತು ವಿಡಿಯೋ ಬಿಡುಗಡೆ ಮಾಡಿ ಮಾತನಾಡಿದ ಅವರು, ವೈಯಕ್ತಿಕವಾಗಿ ಯಾರೇ ತಪ್ಪು ಮಾಡಿದರೂ ಅವರ ಮೇಲೆ ಕ್ರಮ ಆಗಲೇಬೇಕು. ರಾಜ್ಯದಲ್ಲಿ ಸದ್ಯ ಕಾಂಗ್ರೆಸ್ ಸರ್ಕಾರವೇ ಇದೆ. ಕಾನೂನು ಪ್ರಕಾರ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡಲಿ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣು ಮಕ್ಕಳ ಈ ರೀತಿಯ ವಿಡಿಯೋ ಬಿಡುಗಡೆ ಮಾಡುವುದೇ ಮಹಾಅಪರಾಧ. ಯಾರು ಮಾಡಿದ್ದಾರೋ ಅವರ ವಿರುದ್ಧ ರಾಜ್ಯ ಸರ್ಕಾರ ಕಠಿಣಕ್ರಮ ತೆಗೆದುಕೊಳ್ಳಬೇಕು. ಪೊಲೀಸರು ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಜೂ.4ರವರೆಗೆ ಪ್ರಜ್ವಲ್ ರೇವಣ್ಣ ಕಾಂಗ್ರೆಸ್‌, ಜೆಡಿಎಸ್ ಮೈತ್ರಿಕೂಟದ ಸಂಸದರು. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರೇ ಮಾತ್ರ ಎನ್​ಡಿಎ ಮೈತ್ರಿಕೂಟದ ಸಂಸದರಾಗುತ್ತಾರೆ. ಹಾಗಾಗಿ ಪ್ರಜ್ವಲ್ ರೇವಣ್ಣ ಜೆಡಿಎಸ್ ಪಕ್ಷಕ್ಕೆ ಸಂಬಂಧಿಸಿದವರು. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಹಕ್ಕು ಮತ್ತು ಅಧಿಕಾರ ಜೆಡಿಎಸ್ ಪಕ್ಷಕ್ಕಿದೆ. ನಿನ್ನೆ ಅವರನ್ನು ಅಮಾನತ್ತು ಕೂಡ ಮಾಡಿದ್ದಾರೆ. ಇನ್ನೂ ಹರಿದಾಡುತ್ತಿರುವ ವಿಡಿಯೋಗಳ ಸತ್ಯಾನುಸತ್ಯತೆ ಏನು? ಯಾರು, ಯಾರ ಮೇಲೆ ತಪ್ಪು ಎಸಗಿದ್ದಾರೆ ಎಂಬ ವಿಚಾರಗಳ ಬಗ್ಗೆ ಎಸ್ಐಟಿ ತಂಡ ತನಿಖೆ ನಡೆಸುತ್ತದೆ. ತಪ್ಪು ಎಸಗಿದ್ದು ನ್ಯಾಯಾಲಯದಲ್ಲಿ ಸಾಬೀತಾದರೇ ಶಿಕ್ಷೆ ಆಗಲಿದೆ ಎಂದರು.

ನೇಹಾ ಪ್ರಕರಣ ಮತ್ತು ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಕೇಸ್ ಎರಡೂ ಒಂದೇ ಅಲ್ಲ. ಅತ್ಯಂತ ಬರ್ಬರವಾಗಿ ಕಾಲೇಜು ಆವರಣದಲ್ಲಿ ನೇಹಾಳನ್ನು ಕೊಲೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಒಂದು ಸಮುದಾಯದ ಬಗ್ಗೆ ಮೃದು ಧೋರಣೆ ತೋರಿದ್ದರಿಂದ ಬಾಂಬ್ ಸ್ಫೋಟ್‌ ಸೇರಿದಂತೆ ಇಂಥ ಘಟನೆಗಳು ನಡೆಯುತ್ತಿವೆ. ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳುವುದಿಲ್ಲ ಎಂಬ ವಾತಾವರಣವನ್ನು ರಾಜ್ಯದಲ್ಲಿ ಕಾಂಗ್ರೆಸ್ ನಿರ್ಮಿಸಿದೆ. ವಿಧಾನಸೌಧ ಆವರಣದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದರೂ ಕೂಡ ಅವರು ಖಂಡಿಸುವುದಿಲ್ಲ ಎಂದು ದೂರಿದರು.

ಅಶ್ಲೀಲ ವಿಡಿಯೋ ಪ್ರಕರಣ ಅತ್ಯಂತ ದುರಾದೃಷ್ಟಕರ. ಇಡೀ ಸಮಾಜ ತಲೆ ತಗ್ಗಿಸುವಂಥದ್ದು. ಅದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ರಿಲೀಸ್ ಮಾಡಿದ್ದನ್ನು ಖಂಡಿಸುತ್ತೇನೆ. ಈ ರೀತಿ ರಿಲೀಸ್ ಮಾಡಿರುವುದರಿಂದ ಯಾರ ಮೇಲೋ ಪ್ರಹಾರ ಮಾಡುತ್ತೇವೆಂದು ಅದರಲ್ಲಿ ಸಿಲುಕಿರುವ ಮಹಿಳೆಯರ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಹಾಕಿದ್ದಾರೆ. ಇದು ದೊಡ್ಡ ಘೋರ ಅಪರಾಧ. ಆ ಮಹಿಳೆಯರ ಮುಖವನ್ನು ಬ್ಲರ್ ಮಾಡಬಹುದಾಗಿತ್ತು. ಅವರ ಗೌರವ ರಕ್ಷಿಸಬಹುದಾಗಿತ್ತು. ಅದು ಕೂಡ ಆಗಿಲ್ಲ. ಇದು ಏಕೆ ನಡೆಯಿತು?, ಹೇಗೆ ನಡೆಯಿತು? ಎಂಬ ಬಗ್ಗೆ ರಾಜ್ಯ ಸರ್ಕಾರ ತನಿಖೆ ಮಾಡಬೇಕು‌. ಯಾರು ತಪ್ಪಿತಸ್ಥರಿದ್ದಾರೋ ಎಲ್ಲರ ವಿರುದ್ಧವೂ ಕಠಿಣ ಶಿಕ್ಷೆ ಆಗಬೇಕು. ಹೆಣ್ಣು ಮಕ್ಕಳ ಖಾಸಗಿತನಕ್ಕೆ ಧಕ್ಕೆ ತರುವ ಅಧಿಕಾರ ಯಾರಿಗೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೊದಲೇ ಗೊತ್ತಿದ್ದರೂ ಪ್ರಜ್ವಲ್ ರೇವಣ್ಣಗೆ ಎನ್​ಡಿಎ ಟಿಕೆಟ್ ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಪಕ್ಷದ ಮೈತ್ರಿಯೊಂದಿಗೆ ಈ ಬಾರಿಯ ಲೋಕಸಭೆ ಚುನಾವಣೆ ಎದುರಿಸುತ್ತಿದ್ದೇವೆ. ಅವರಿಗೆ 3 ಸ್ಥಾನಗಳನ್ನು ಕೊಡಲಾಗಿತ್ತು. ಜೆಡಿಎಸ್ ವರಿಷ್ಠರು ತಮ್ಮ ಕೋರ್ ಕಮಿಟಿಯೊಂದಿಗೆ ಚರ್ಚಿಸಿ ಟಿಕೆಟ್ ಕೊಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಎಂ.ಬಿ ಜೀರಲಿ, ಗೀತಾ ಸುತಾರ್ , ಸುಭಾಷ್ ಪಾಟೀಲ, ಗಿರೀಶ ಉಪ್ಪಾರ, ಭಾರತಿ ಮಗದುಮ್ಮ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಕೋಟ್‌...

ಶಾಸಕ ರಾಜು ಕಾಗೆ ಅವರ ಪದ ಬಳಕೆ ಮತ್ತು ಭಾಷೆ ಕಾಂಗ್ರೆಸ್ ಸಂಸ್ಕೃತಿ ತೋರಿಸುತ್ತದೆ. ಮೋದಿಯವರು ನೂರು ಕಾಲ ಚೆನ್ನಾಗಿ ಇರುತ್ತಾರೆ. ಅವರನ್ನು ನಾವು ಚೆನ್ನಾಗಿ ನೋಡಿಕೊಳ್ಳುತ್ತೇವೆ. ದೇಶದ ಜನ ಮತ್ತೆ ಅವರನ್ನು ಪ್ರಧಾನಿ ಮಾಡುತ್ತಾರೆ. ಈ ರೀತಿ ಅಪಶಬ್ದಗಳು, ದೂರಾಲೋಚನೆಯನ್ನು ಖಂಡಿಸುತ್ತೇನೆ. ಅವರು ನಿಂದಿಸಿದಷ್ಟು ವಿಶ್ವದಾದ್ಯಂತ ಮೋದಿಯವರ ಪ್ರಭಾವ ಜಾಸ್ತಿ ಆಗುತ್ತದೆ. 3ನೇ ಬಾರಿ ಮೋದಿ ಪ್ರಧಾನಿ ಆಗುತ್ತಾರೆ.

-ಮಾಳವಿಕಾ ಅವಿನಾಶ, ಬಿಜೆಪಿ ವಕ್ತಾರೆ.