ಮರ್ಯಾದೆಗೇಡು ಹತ್ಯೆಗೆ ಕಾರಣರಾದವರನ್ನು ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಹಾವೇರಿ: ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ನಾಗರೀಕ ಸಮಾಜಕ್ಕೆ ತೀವ್ರ ಆಘಾತ ಉಂಟು ಮಾಡಿದೆ. ಇದಕ್ಕೆ ಕಾರಣರಾದವರನ್ನು ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಬುಧವಾರ ತಹಸೀಲ್ದಾರ ಕಚೇರಿ ಎದುರು ಡಿವೈಎಫ್‌ಐ, ಎಸ್‌ಎಫ್‌ಐ, ದಲಿತ ಹಕ್ಕುಗಳ ಸಮಿತಿ, ದಲಿತ ಸಂಘರ್ಷ ಸಮಿತಿ, ಅಲೆಮಾರಿ ಸಮುದಾಯ ಸಂಘಟನೆ, ಕರ್ನಾಟಕ ರಾಜ್ಯ ರೈತ ಸಂಘಟನೆಗಳು ಹಾಗೂ ಸಾಹಿತಿ ಕಲಾವಿದರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದ ಕಾರಣಕ್ಕೆ ನಡೆದಿರುವ ಈ ಕ್ರೂರ ಘಟನೆಯನ್ನು ಸಮಾಜ ಸಹಿಸುವುದಿಲ್ಲ. ಈ ಜಾತಿ ತಾರತಮ್ಯ, ದ್ವೇಷ, ಅಸ್ಪೃಶ್ಯತೆ ಹೋಗಲಾಡಿಸದೇ ಸಮಾಜದ ಬೆಳವಣಿಗೆ, ಸಾಮರಸ್ಯ ಸಾಧ್ಯವಿಲ್ಲ. ಮಾರ್ಯದೆ ಹತ್ಯೆ ನಡೆಸುವ ಎಲ್ಲರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಸರ್ಕಾರ ಅಂತರಜಾತಿ ವಿವಾಹವಾಗುವ ಎಲ್ಲ ಯುವಕ-ಯುವತಿಯರಿಗೆ ಸೂಕ್ತ ಕಾನೂನು ರಕ್ಷಣೆ, ಸಾಮಾಜಿಕವಾಗಿ ಆರ್ಥಿಕ ಬಲ ತುಂಬಲು ಪ್ರೋತ್ಸಾಹ ಧನ ಹೆಚ್ಚಳ ಹಾಗೂ ಮೀಸಲಾತಿ ಸೌಲಭ್ಯ ಒದಗಿಸುವುದು ಸೇರಿದಂತೆ ವಿಶೇಷ ಸೌಲಭ್ಯಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಮಹಿಳೆಯರ ಮೇಲಾಗುವ ಎಲ್ಲ ತರಹದ ದೌರ್ಜನ್ಯಗಳನ್ನು ತಡೆಗಟ್ಟಲು ನ್ಯಾ. ಜಿ.ಎಸ್. ವರ್ಮಾ ಹಾಗೂ ಉಗ್ರಪ್ಪ ಸಮಿತಿಯ ಮಹಿಳಾ ಪರ ಕಾನೂನು ಶಿಫಾರಸುಗಳನ್ನು ತ್ವರಿತವಾಗಿ ಹಾಗೂ ಸಮರ್ಪಕವಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ.ಈ ವೇಳೆ ಉಡಚಪ್ಪ ಮಾಳಗಿ, ವೀರಣ್ಣ ಗಡ್ಡಿಯವರ, ನಾರಾಯಣ ಕಾಳೆ, ಖಲಂದರ್ ಅಲ್ಲಿಗೌಡ್ರ, ಹರೀಶ ಘೋರ್ಪಡೆ, ಹಬೀಬ್ ಮುಲ್ಲಾ, ಶೆಟ್ಟಿ ವಿಭೂತಿ ನಾಯಕ್, ಸುರೇಶ ಛಲವಾದಿ, ನಾಗರಾಜ ರಿತ್ತಿಕುರಬರ, ತಿರಕಪ್ಪ ಹುಳಕೆಲ್ಲಪ್ಪನವರ, ಎಂ.ಕೆ ಮಕಬುಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.