ಪುಂಜಿಲಗೇರಿ, ಇಂಜಿಲ ಗ್ರಾಮ: ಕಾಡಾನೆ ಹಿಂಡು ಅಟ್ಟುವ ಕಾರ್ಯಾಚರಣೆ ಶುರು

| Published : Aug 08 2024, 01:35 AM IST

ಸಾರಾಂಶ

ಅಮ್ಮತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪುಲಿಯೇರಿ ಇಂಜಿಲ ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಬುಧವಾರ ಅರಣ್ಯ ಇಲಾಖೆ ಕಾಡಿಗಟ್ಟುವ ಕಾರ್ಯಾಚರಣೆ ಕೈಗೊಂಡಿತು. ಇಲಾಖಾ ಸಿಬ್ಬಂದಿ ಪುಲಿಯೇರಿ , ಇಂಜಿಲಗೆರೆ ಭಾಗದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಬೆಳೆಗಾರರಿಗೆ ಉಪಟಳ ನೀಡುತ್ತಾ ಬೆಳೆಗಳನ್ನು ನಾಶ ಪಡಿಸುತ್ತಿದ್ದ ಕಾಡಾನೆಗಳನ್ನು ಹಿಂಡನ್ನು ಪತ್ತೆ ಹಚ್ಚಿ ಕಾಫಿ ತೋಟದಿಂದ ಅರಣ್ಯಕ್ಕೆ ಅಟ್ಟಿದರು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಅಮ್ಮತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪುಲಿಯೇರಿ ಇಂಜಿಲ ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಬುಧವಾರ ಅರಣ್ಯ ಇಲಾಖೆ ಕಾಡಿಗಟ್ಟುವ ಕಾರ್ಯಾಚರಣೆ ಕೈಗೊಂಡಿತು.

ಬೆಳಗ್ಗೆಯಿಂದಲೆ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖಾ ಸಿಬ್ಬಂದಿ ಪುಲಿಯೇರಿ , ಇಂಜಿಲಗೆರೆ ಭಾಗದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಬೆಳೆಗಾರರಿಗೆ ಉಪಟಳ ನೀಡುತ್ತಾ ಬೆಳೆಗಳನ್ನು ನಾಶ ಪಡಿಸುತ್ತಿದ್ದ ಕಾಡಾನೆಗಳನ್ನು ಹಿಂಡನ್ನು ಪತ್ತೆ ಹಚ್ಚಿ ಕಾಫಿ ತೋಟದಿಂದ ಅರಣ್ಯಕ್ಕೆ ಅಟ್ಟಿದರು.

ಕಾರ್ಯಾಚರಣೆ ಸಂದರ್ಭ ಕಾಡಾನೆಗಳು ಹಿಂಡು ಇಂಜಿಲಿಗೆರೆ, ಪುಲಿಯೇರಿ, ಸಿದ್ದಾಪುರ ಹೀಗೆ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಓಡುತ್ತಾ ಅರಣ್ಯ ಇಲಾಖಾ ಸಿಬ್ಬಂದಿಯನ್ನು ಸುತ್ತಾಡುವಂತೆ ಮಾಡಿದವು. ನಂತರ ಸಿದ್ದಾಪುರದ ಕಾಫಿ ತೋಟದ ಮೂಲಕ ಚೆನ್ನಂಗಿ ಭಾಗಕ್ಕೆ ಕಾಡಾನೆ ಹಿಂಡು ತೆರಳಿತು.

ಸಂಜೆ ಕಾರ್ಯಾಚರಣೆ ನಿಲ್ಲಿಸಲಾಗಿದ್ದು, ಗುರುವಾರ ಮತ್ತೆ ಮುಂದುವರಿಸಲಾಗುವುದೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿದ್ದಾಪುರ-ವಿರಾಜಪೇಟೆ ಮುಖ್ಯ ರಸ್ತೆಯ ಇಂಜಿಲಿಗೆರೆಯಲ್ಲಿ ಕಾಡಾನೆಗಳು ಗುಂಪಾಗಿ ರಸ್ತೆ ದಾಟುತಿದ್ದ ಸಂದರ್ಭ ಕೆಲವು ತಾಸು ರಸ್ತೆ ಸಂಪರ್ಕ ಬಂದ್ ಆಗಿ ವಾಹನಗಳ ಸಂಚಾರಕ್ಕೆ ಆಡಚಣೆಯಾಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಕಾರ್ಯಾಚರಣೆಯಲ್ಲಿ ಎಸಿಎಫ್‌ ಗೋಪಾಲ್, ಡಿಎಫ್ಒ ಶಿವರಾಂ, ಡಿಆರ್‌ಎಫ್‌ ಸಂಜಿತ್ ಸೋಮಯ್ಯ ಸೇರಿದಂತೆ15 ಕ್ಕೂ ಅಧಿಕ ಸಿಬ್ಬಂದಿ ಇದ್ದರು.

ಕಾಡಾನೆಗಳ ಹಿಂಡು ರಸ್ತೆ ದಾಟುತ್ತಿರುವುದನ್ನು ಸಾರ್ವಜನಿಕರು ಮುಗಿಬಿದ್ದು ವಿಡಿಯೋ ಮಾಡುತ್ತಿರುವುದು ಕಂಡು ಬಂದಿದ್ದು ಇದು ಅಪಾಯಕ್ಕೆ ನೇರವಾಗಿ ಆಹ್ವಾನ ನೀಡುತ್ತಿದೆ ಎಂದು ಕೆಲವು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.