ಶಿಷ್ಯ ವೇತನದಿಂದ ಬಡ ವಿದ್ಯಾರ್ಥಿಗಳಿಗೆ ಅನುಕೂಲ: ಕೊಣನೂರು ಹನುಮಂತಯ್ಯ

| Published : Aug 29 2024, 12:53 AM IST

ಸಾರಾಂಶ

ಧರ್ಮಸ್ಥಳ ಕೇತ್ರದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ಗ್ರಾಮೀಣ ಪ್ರದೇಶದ ಬಡ ಜನರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಹಳಷ್ಟು ಯೋಜನೆಗಳು ಅನುಷ್ಠಾನಗೊಂಡಿವೆ.

ನಾಗಮಂಗಲ: ಗ್ರಾಮೀಣ ಪ್ರದೇಶದ ಬಡ ಕುಟುಂಬದ ವಿದ್ಯಾರ್ಥಿಗಳು ಸುಜ್ಞಾನ ನಿಧಿ ಶಿಷ್ಯವೇತನ ಪಡೆದುಕೊಂಡು ಉನ್ನತ ವ್ಯಾಸಂಗ ಮಾಡುವ ಜೊತೆಗೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಬಹುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಕೊಣನೂರು ಹನುಮಂತಯ್ಯ ತಿಳಿಸಿದರು.

ತಾಲೂಕಿನ ಚೋಳಸಂದ್ರ ಗ್ರಾಮದಲ್ಲಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಧರ್ಮಸ್ಥಳ ಕೇತ್ರದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ಗ್ರಾಮೀಣ ಪ್ರದೇಶದ ಬಡ ಜನರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಹಳಷ್ಟು ಯೋಜನೆಗಳು ಅನುಷ್ಠಾನಗೊಂಡಿವೆ. ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಪಡೆಯಲು ಇಚ್ಛಿಸುವ ಸಂಸ್ಥೆ ಸ್ವಸಹಾಯ ಸಂಘದ ಸದಸ್ಯರ ಮಕ್ಕಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನವನ್ನು ಮಾಸಿಕವಾಗಿ ಪಾವತಿಸಲಾಗುತ್ತದೆ ಎಂದರು.

ಸಂಸ್ಥೆ ಜಿಲ್ಲಾ ನಿರ್ದೇಶಕಿ ಎಂ.ಚೇತನ ಮಾತನಾಡಿ, ತಾಲೂಕಿನಲ್ಲಿ 141 ಮಂದಿ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಮಂಜೂರಾಗಿದೆ. ಈ ಸೌಲಭ್ಯವನ್ನು ವ್ಯರ್ಥ ಮಾಡದೆ ಉನ್ನತ ವ್ಯಾಸಂಗಕ್ಕೆ ಬಳಕೆ ಮಾಡಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸುವಂತೆ ಸಲಹೆ ನೀಡಿದರು.

ಬೆಳ್ಳೂರಿನ ಜೈನ ಸಮುದಾಯದ ಅಧ್ಯಕ್ಷ ಪದ್ಮನಾಭ (ಪಾಪಣ್ಣ) ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಹಲವು ಜನಪರ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪುತ್ತಿವೆ ಎಂದು ತಿಳಿಸಿದರು.

ಅರ್ಹ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನದ ಮಂಜೂರಾತಿ ಪತ್ರ ವಿತರಿಸಲಾಯಿತು. ಸಂಸ್ಥೆ ತಾಲೂಕು ಯೋಜನಾಧಿಕಾರಿ ದಿವಾಕರ್ ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ಮೇಲ್ವಿಚಾರಕರಾದ ಕಾರ್ತಿಕ್, ನಿಶಾಂತ್ ಸೇರಿ ಸೇವಾಪ್ರತಿನಿಧಿಗಳು, ಪಲಾನುಭವಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.