ದಾಸರಲ್ಲೇ ಪುರಂದರದಾಸರು ಶ್ರೇಷ್ಠರು: ಪಂ.ನರಸಿಂಹಾಚಾರ್ಯ

| Published : Feb 11 2024, 01:47 AM IST

ದಾಸರಲ್ಲೇ ಪುರಂದರದಾಸರು ಶ್ರೇಷ್ಠರು: ಪಂ.ನರಸಿಂಹಾಚಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವ ಮಧ್ವ ಮಹಾಪರಿಷತ್ ವತಿಯಿಂದ, ಯಾದಗಿರಿ ಉತ್ತರಾದಿಮಠದ ಶ್ರೀರಾಘವೇಂದ್ರಸ್ವಾಮಿ ಪರಿಮಳ ಮಂಟಪದಲ್ಲಿ ಪುರಂದರ ದಾಸರ ಆರಾಧನಾ ಮಹೋತ್ಸವ ಅಂಗವಾಗಿ ನಗರ ಕೀರ್ತನ ಸಂಕೀರ್ತನ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಕೀರ್ತನ ಸಾಹಿತ್ಯದಲ್ಲಿ ಪುರಂದರದಾಸರದು ಬಹು ದೊಡ್ಡ ಹೆಸರು. ಗಾತ್ರ-ಗುಣ ಎರಡರಲ್ಲೂ ಅವರ ಕೃತಿಗಳದು ಗಿರಿತೂಕ. ಯತಿವರ್ಯರಾದ ವ್ಯಾಸರಾಯರು ಪುರಂದರ ವ್ಯಕ್ತಿತ್ವಕ್ಕೆ ಮಾರು ಹೋಗಿ ‘ದಾಸರೆಂದರೆ ಪುರಂದರದಾಸರಯ್ಯ’ ಎಂದು ಪರಮ ತೃಪ್ತಿಯ ಉದ್ಗಾರವೆತ್ತಿದ್ದಾರೆ. ಅಂತಹವರ ಕೀರ್ತನೆ ಅರಿತು ಮೋಕ್ಷದ ಹಾದಿ ಕಾಣಬೇಕು ಎಂದು ಪಂ.ನರಸಿಂಹಾಚಾರ್ಯ ಪುರಾಣಿಕ ಹೇಳಿದರು.

ವಿಶ್ವ ಮಧ್ವ ಮಹಾಪರಿಷತ್ ವತಿಯಿಂದ, ನಗರದ ಉತ್ತರಾದಿಮಠದ ಶ್ರೀರಾಘವೇಂದ್ರಸ್ವಾಮಿ ಪರಿಮಳ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ ಅಂಗವಾಗಿ ನಗರ ಕೀರ್ತನ- ಸಂಕೀರ್ತನ ನಂತರದಲ್ಲಿ ಉಪನ್ಯಾಸ ನೀಡಿದರು.

ಪುರಂದರದಾಸರು ವ್ಯಾಸರಾಯರಿಂದ ದೀಕ್ಷೆ ಪಡೆದು ಪುರಂದರ ವಿಠಲ ಎಂಬ ಅಂಕಿತ ಸ್ವೀಕರಿಸಿ ಮಧ್ವಮತಾನುಯಾಯಿಗಳಾಗಿದ್ದರೂ, ವಿಶಾಲವಾದ ಭಾಗವತ ಮನೋಧರ್ಮವನ್ನು ಬೆಳೆಸಿಕೊಂಡವರು. ಆದುದರಿಂದಲೇ ಪುರಂದರದಾಸರು ಅಲ್ಲಿ ಮಾತ್ರವಲ್ಲ, ಎಲ್ಲಿಯೂ ಸಲ್ಲುವ ಕನ್ನಡದ ಮಹಾಪುರುಷ. ಸಂತ ತ್ಯಾಗರಾಜರಂತಹ ಮಹಾಮಹಿಮರಿಂದಲೂ ಪೂಜಿಸಲ್ಪಟ್ಟ ಶ್ರೇಷ್ಠರು ಎಂದು ಹೇಳಿದರು.

ಪುರಂದರದಾಸರು ತಿರುಪತಿ, ಶ್ರೀರಂಗ, ಕಳಸ, ಬೇಲೂರು, ನಂಜನಗೂಡು, ಶ್ರೀರಂಗಪಟ್ಟಣ, ಉಡುಪಿ, ಪಂಡರಾಪುರ ಕ್ಷೇತ್ರಗಳನ್ನು ಸಂದರ್ಶಿಸಿ, ಸುಮಾರು 4 ಲಕ್ಷ ಕೀರ್ತನೆಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.

ಯಾದಗಿರಿ: ನಗರದ ಬಾಲಾಜಿ ಮಂದಿರದಿಂದ ಉತ್ತರಾದಿ ಮಠದ ಶ್ರೀರಾಘವೇಂದ್ರಸ್ವಾಮಿ ಪರಿಮಳ ಮಂಟಪದವರಿಗೆ ಡೋಲು ಬಾಜಾ ಭಜಂತ್ರಿಯ ಮೂಲಕ ನೃತ್ಯ ಭಜನೆ, ಕೋಲಾಟ, ಸೇರಿ ವಿವಿಧ ರೀತಿಯ ಸಡಗರ ಸಂಭ್ರಮದಿಂದ ಬಹಳ ಅದ್ಧೂರಿಯಾಗಿ ನಗರ ಸಂಕೀರ್ತನೆ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ವಿವಿಧ ಪುರುಷ ಹಾಗೂ ಮಹಿಳಾ ಭಜನಾ ಮಂಡಳಿ ಸದಸ್ಯರು ಸೇರಿ ಮಕ್ಕಳು, ವಿಪ್ರ ಮುಖಂಡರು ಭಾಗವಹಿಸಿದ್ದರು. ಮಧ್ಯಾಹ್ನ ಪುರಂದರ ರಥೋತ್ಸವ ಹಾಗೂ ವಿಶೇಷ ಪೂಜೆ ಮತ್ತು ತೀರ್ಥ ಪ್ರಸಾದ ಜರುಗಿತು.

ಮಠದ ವ್ಯವಸ್ಥಾಪಕರಾದ ರಾಘವೇಂದ್ರ ಆಚಾರ್ಯ ಜೋಶಿ ಅವರು ಕಾರ್ಯಕ್ರಮದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು.

ದಾಸರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ:

ಪುರಂದರದಾಸರು ತಮ್ಮ ಜೀವಿತಾವಧಿಯವರೆಗೂ ನಾಡಿನ ಪ್ರತಿಯೊಂದು ಊರುಗಳಿಗೆ ಸಂಚರಿಸಿ ಪ್ರತಿಯೊಂದು ಸಮಾಜವನ್ನು ಉದ್ಧಾರ ಮಾಡಿದ ಮಹಾನ್ ಸಮಾಜ ಸುಧಾರಕ ಎಂದು ದಾಸಕವಿ ಸರ್ವೇಶ ವಿಠಲ ದಾಸರು (ರಾಘವೇಂದ್ರ ಶಿರವಾಳ) ಹೇಳಿದರು.

ತಾಲೂಕಿನ ಕೆಂಭಾವಿ ಪಟ್ಟಣದ ಉತ್ತರಾದಿ ಮಠದಲ್ಲಿ ಪುರಂದರ ದಾಸರ ಆರಾಧನಾ ಮಹೋತ್ಸವದ ನಿಮಿತ್ತ ದಾಸರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, 15ನೇ ಶತಮಾನದಲ್ಲಿ ಅವತರಿಸಿದ ಪುರಂದರ ದಾಸರು ಸಾಕ್ಷಾತ್ ನಾರದ ಮಹರ್ಷಿಗಳ ಅವತಾರವೆಂದು ಪುರಾಣಗಳು ನಮಗೆ ತಿಳಿಸಿ ಕೊಡುತ್ತವೆ ಎಂದರು.

ಸುಮಾರು 4 ಲಕ್ಷ ದಾಸರ ಕೀರ್ತನೆ ರಚಿಸಿದ ಕೀರ್ತಿ ಪುರಂದರದಾಸರಿಗೆ ಸಲ್ಲುತ್ತದೆ. ನಾಡಿನ ಸಮಗ್ರ ದಾಸಸಾಹಿತ್ಯ ರಚನೆಯಲ್ಲಿ ಪುರಂದರದಾಸರು ಅಗ್ರಗಣ್ಯರು, ಅವರು ರಚಿಸಿದ ಪ್ರತಿಯೊಂದು ಹಾಡುಗಳು ನಮ್ಮ ಜೀವನವನ್ನು ಬದಲಿಸಬಲ್ಲದು ಎಂದು ತಿಳಿಸಿದರು.

ಬ್ರಾಹ್ಮಣ ಸಂಘದ ಜಿಲ್ಲಾ ಗೌರವಾಧ್ಯಕ್ಷ ವಾಮನರಾವ ದೇಶಪಾಂಡೆ ಮಾತನಾಡಿ, ನಾಡಿನ ದಾಸ ಸಾಹಿತ್ಯವನ್ನು ಬೆಳೆಸಿ ಬೆಳೆಸುವಲ್ಲಿ ಪ್ರತಿಯೊಂದು ಸಮಾಜದ ಯುವಕರ ಪಾತ್ರ ಅತೀ ಮುಖ್ಯವಾಗಿದೆ. ದಾಸರ ಕೃತಿ ಸಂರಕ್ಷಿಸಲು ಮತ್ತು ಅವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸರ್ಕಾರ ದಾಸ ಸಾಹಿತ್ಯ ಅಧ್ಯಯನ ಪೀಠವನ್ನು ಸ್ಥಾಪಿಸಬೇಕೆಂದು ಮನವಿ ಮಾಡಿದರು.

ಮುಂಜಾನೆ ದಾಸರ ವೇಷ ಧರಿಸಿದ ಸರ್ವೇಶ ವಿಠಲ ದಾಸರು ಹಾಗೂ ಹಳ್ಳೆಪ್ಪಾಚಾರ್ಯ ಚೆನ್ನೂರ ಇವರ ನೇತೃತ್ವದಲ್ಲಿ ರಘೋತ್ತಮ ಭಜನಾ ಮಂಡಳಿಯ ಸರ್ವ ಸದಸ್ಯರು ಹರಿನಾಮ ಸ್ಮರಣೆಯ ಮೂಲಕ ಮನೆಮನೆಗೆ ತೆರಳಿ ಯಾಯಿವಾರ (ಗೋಪಾಳ) ಬೇಡಲಾಯಿತು. ನಾಡಿಗೇರ ಹನುಮಂತ ದೇವರಗೆ ಹಾಗೂ ಪುರಂದರ ದಾಸರ ಭಾವಚಿತ್ರಕ್ಕೆ ವಿಶೇಷ ಪೂಜೆ ಅಲಂಕಾರ, ತೀರ್ಥ ಪ್ರಸಾದ ನೆರವೇರಿತು.

ಜಯ ಸತ್ಯಪ್ರಮೋದ ಸೇವಾ ಸಂಘದ ಉಪಾಧ್ಯಕ್ಷ ಬಾಳಕೃಷ್ಣರಾವ ಕುಲಕರ್ಣಿ, ತಿರುಮಲಾಚಾರ್ಯ ಜೋಷಿ, ಮೋಹನರಾವ ಕುಲಕರ್ಣಿ, ಹಣಮಂತರಾವ ಕುಲಕರ್ಣಿ, ಕೃಷ್ಣಾಜಿ ಕುಲಕರ್ಣಿ, ನರಸಿಂಹರಾವ ಕುಲಕರ್ಣಿ, ಮಧ್ವರಾವ ನಾಡಿಗೇರ, ಡಾ. ಹಳ್ಳೇರಾವ ಕುಲಕರ್ಣಿ, ಡಾ. ಗಿರೀಶ ಕುಲಕರ್ಣಿ, ಶಾಮರಾವ ನಾಡಿಗೇರ, ರಾಘವೇಂದ್ರ ನಾಡಿಗೇರ, ಹಳ್ಳೇರಾವ ಕುಲಕರ್ಣಿ, ಆನಂದ ತಿಳಗೂಳ ಸೇರಿದಂತೆ ಹಲವರಿದ್ದರು.