ದೇವನಹಳ್ಳಿ: ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಅಂದಾಜು ೬ ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸುವ ಗುರಿ ಹೊಂದಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಹೇಳಿದರು.
ಪಟ್ಟಣದ ಅಕ್ಷರ ದಾಸೋಹ ಕೇಂದ್ರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಿಂದ ೨೦೨೫-೨೬ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ರಾಗಿ ಖರೀದಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸಕ್ತ ವರ್ಷ ಸರ್ಕಾರ ಉತ್ತಮ ಬೆಲೆ ನಿಗದಿಪಡಿಸಿ ರಾಗಿ ಖರೀದಿಸುತ್ತಿದೆ. ರೈತರಿಂದ ನೇರವಾಗಿ ಖರೀದಿಸಿ ನೇರವಾಗಿ ರೈತರ ಖಾತೆಗೆ ಸಂದಾಯ ಮಾಡುತ್ತದೆ. ಗುಣಮಟ್ಟದ ರಾಗಿ ಪೂರೈಸಿದಲ್ಲಿ ಮುಂದಿನ ವರ್ಷದಲ್ಲಿ ೮ ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸುವ ಗುರಿ ಇಟ್ಟುಕೊಂಡಿದೆ ಎಂದು ಹೇಳಿದರು.ಕೇಂದ್ರದೊಂದಿಗೆ ಮಾತುಕತೆ ನಡೆಸಿದ್ದು ಮುಂದಿನ ದಿನಗಳಲ್ಲಿ ಹೊರ ರಾಜ್ಯಗಳಿಗೂ ರಾಗಿ ಪೂರೈಸುವ ಗುರಿ ಇದೆ. ಬೇಡಿಕೆಯ ಆಧಾರದ ಮೇಲೆ ಬೇರೆ ಬೇರೆ ರಾಜ್ಯಗಳಿಗೆ ರಾಗಿ ಸರಬರಾಜು ಮಾಡಲಾಗುವುದು. ಗುಣಮಟ್ಟದ ರಾಗಿಯಿಂದ ಬೇಡಿಕೆ ಹೆಚ್ಚಾಗಲಿದೆ. ಇದರಿಂದ ರೈತರ ಬಳಿ ರಾಗಿ ಖರೀದಿಸುವ ಪ್ರಮಾಣ ಕೂಡ ಹೆಚ್ಚಾಗಲಿದೆ. ಹಾಗಾಗಿ ರೈತರು ಗುಣಮಟ್ಟದ ರಾಗಿ ನೀಡಬೇಕು ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಮಾತನಾಡಿ, ೨೦೨೫-೨೬ನೇ ಸಾಲಿನ ಕನಿಷ್ಠ ಬೆಂಬಲ ಯೋಜನೆಯಡಿ ಪ್ರತಿ ಕ್ವಿಂಟಲ್ ರಾಗಿಗೆ ೪೮೮೬ ರು. ನಿಗದಿಪಡಿಸಲಾಗಿದೆ. ಪ್ರತಿ ರೈತರಿಂದ ಒಂದು ಎಕರೆಗೆ ೧೦ ಕ್ವಿಂಟಲ್‌ನಂತೆ ಗರಿಷ್ಟ ೫೦ ಕ್ವಿಂಟಲ್‌ಗಳನ್ನು ಮೀರದಂತೆ ಗುಣಮಟ್ಟದ ರಾಗಿ ಖರೀದಿಸಲಾಗುವುದು. ನೋಂದಾಯಿತ ರೈತರೇ ರಾಗಿ ಖರೀದಿ ಕೇಂದ್ರಗಳಿಗೆ ರಾಗಿ ತರುವುದು ಕಡ್ಡಾಯ ಎಂದು ಹೇಳಿದರು.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು: ೩೬೭೮, ದೊಡ್ಡಬಳ್ಳಾಪುರ: ೧೨೬೮೭, ಹೊಸಕೋಟೆ: ೧೨೪೦, ನೆಲಮಂಗಲ: ೫೬೧೯ ಸೇರಿ ಒಟ್ಟು ೨೩೨೨೪ ರೈತರು ರಾಗಿ ಪೂರೈಕೆಗೆ ನೋಂದಣಿ ಮಾಡಿಸಿದ್ದಾರೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ಪಿ ಚಂದ್ರಕಾಂತ್, ತಹಸೀಲ್ದಾರ್ ಎಂ.ಅನಿಲ್, ತಾಪಂ ಇಒ ಶ್ರೀನಾಥಗೌಡ, ಗ್ಯಾರಂಟಿ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಜಗನ್ನಾಥ, ಮುಖಂಡರಾದ ಕೆ.ಸಿ.ಮಂಜುನಾಥ್, ದಿನ್ನೂರು ವೆಂಕಟೇಶ್, ರಮೇಶ್, ಪ್ರಸನ್ನಕುಮಾರ್, ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.
(ಫೋಟೋ ಕ್ಯಾಫ್ಷನ್)
ದೇವನಹಳ್ಳಿ ಪಟ್ಟಣದ ಅಕ್ಷರ ದಾಸೋಹ ಕೇಂದ್ರದಲ್ಲಿ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸುವ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಚಾಲನೆ ನೀಡಿದರು. ಎಸ್ಪಿ ಚಂದ್ರಕಾಂತ್, ತಹಸೀಲ್ದಾರ್ ಎಂ.ಅನಿಲ್, ತಾಪಂ ಇಒ ಶ್ರೀನಾಥಗೌಡ ಇತರರಿದ್ದರು.