ಸಾರಾಂಶ
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಮಹಿಳೆಯರ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿವೆ. ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಪೌಡರ್, ಲಿಪ್‌ಸ್ಟಿಕ್ ಖರೀದಿಸುತ್ತಿದ್ದಾರೆ. ಇದು ಹೀಗೆಯೇ ಮುಂದುವರೆಯಲಿ. ಮಹಿಳೆಯರು ಪೌಡರ್ ಹಾಕೊಳಿ, ಲಿಪ್‌ಸ್ಟಿಕ್ ತಗೊಳ್ಳಿ. ಹಿಗೇ ಶಾಸಕರಾಗಿದ್ದ ತಮ್ಮ ತಂದೆ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರ ಶೈಲಿಯಲ್ಲಿ ಹಾಸ್ಯಭರಿತವಾಗಿ ಭಾಷಣ ಮಾಡಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಮಹಿಳೆಯರ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿವೆ. ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಪೌಡರ್, ಲಿಪ್‌ಸ್ಟಿಕ್ ಖರೀದಿಸುತ್ತಿದ್ದಾರೆ. ಇದು ಹೀಗೆಯೇ ಮುಂದುವರೆಯಲಿ. ಮಹಿಳೆಯರು ಪೌಡರ್ ಹಾಕೊಳಿ, ಲಿಪ್‌ಸ್ಟಿಕ್ ತಗೊಳ್ಳಿ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ನಗರದ ಮಂಡ್ಯ ವಿಶ್ವವಿದ್ಯಾಲಯ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಶಾಸಕರಾಗಿದ್ದ ತಮ್ಮ ತಂದೆ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರ ಶೈಲಿಯಲ್ಲಿ ಹಾಸ್ಯಭರಿತವಾಗಿ ಭಾಷಣ ಮಾಡಿದ ಅವರು, ಯಾವುದೇ ಅಗ್ರಿಮೆಂಟ್ ಇಲ್ಲದೆ ಗ್ಯಾರಂಟಿ ಸ್ಕೀಮ್‌ಗಳನ್ನು ಜಾರಿಗೊಳಿಸಿ ಫಲಾನುಭವಿಗಳಿಗೆ ಸವಲತ್ತು ಕಲ್ಪಿಸಲಾಗುತ್ತಿದೆ. ಇದರಿಂದ ಜನರಲ್ಲಿ ಹಣದ ಉಳಿತಾಯ ಪ್ರಮಾಣ ಹೆಚ್ಚಾಗಿದೆ. ಕುಟುಂಬದ ನಿರ್ವಹಣೆಗೆ ಅನುಕೂಲವಾಗಿದೆ ಎಂದು ವಿಶ್ಲೇಷಿಸಿದರು.
ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ ಸರ್ಕಾರದಿಂದ ಹಣ ಬರುತ್ತಿದೆ. ಶಕ್ತಿ ಯೊಜನೆ, ಗೃಹಜ್ಯೋತಿ ಯೋಜನೆಗಳಿಂದ ಹಣ ಉಳಿತಾಯವಾಗುತ್ತಿದೆ. ಇದರಿಂದ ಜನರು ಖುಷಿಯಾಗಿದ್ದಾರೆ. ಖುಷಿ, ಸಂತೋಷ ಹೆಚ್ಚಾದಾಗ ಆರೋಗ್ಯವೂ ಚೆನ್ನಾಗುತ್ತಿದೆ. ಇದರಿಂದ ಆಸ್ಪತ್ರೆ ಖರ್ಚು ಉಳಿಯುತ್ತದೆ. ಉಳಿತಾಯದ ಹಣವನ್ನು ವ್ಯವಹಾರ, ವ್ಯಾಪಾರಕ್ಕೆ ಉಳಿಸಿ, ಸ್ವ-ಉದ್ಯೋಗಗಳನ್ನು ಆರಂಭಿಸುತ್ತಿದ್ದಾರೆ. ಇದರಿಂದ ಜನರಲ್ಲಿ ಖರೀದಿ ಶಕ್ತಿಯೂ ಹೆಚ್ಚಾಗಿದೆ. ಈ ಮೂಲಕ ಗ್ಯಾರಂಟಿ ಯೋಜನೆಗಳಿಂದ ನಾನಾ ರೀತಿಯ ಪರಿಣಾಮ, ಪ್ರಯೋಜನಗಳು ಆಗುತ್ತಿವೆ ಎಂದರು.