ಸಾರಾಂಶ
ಹಾವೇರಿ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸೋಯಾಬಿನ್ ಹಾಗೂ ಶೇಂಗಾ ಉತ್ಪನ್ನ ಖರೀದಿ ಕೇಂದ್ರಗಳನ್ನು ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ಆರಂಭಿಸುವಂತೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನಿಷ್ಠ ಬೆಂಬಲ ಬೆಲೆಯಡಿ ಸರ್ಕಾರದ ಮಾರ್ಗಸೂಚಿಯಂತೆ ಸೋಯಾಬಿನ್ ಹಾಗೂ ಶೇಂಗಾ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಸೋಯಾಬಿನ್ ಉತ್ಪನ್ನ ಪ್ರತಿ ಕ್ವಿಂಟಲ್‌ಗೆ ೫,೩೨೮ ರು. ಹಾಗೂ ಶೇಂಗಾ ೭,೨೬೩ ರು.ಗಳಂತೆ ಖರೀದಿಗೆ, ಸರ್ಕಾರದ ಆದೇಶದ ದಿನಾಂಕದಿಂದ ೮೦ ದಿನಗಳವರೆಗೆ ಹಾಗೂ ನೋಂದಣಿ ಕಾರ್ಯಜೊತೆಯಲ್ಲಿ ಖರೀದಿ ಕಾಲಾವಧಿಯನ್ನು ೯೦ ದಿನಗಳವರೆಗೆ ನಿಗದಿಪಡಿಸಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಸಂಸ್ಥೆ ಹಾಗೂ ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳದ ಮೂಲಕ ಖರೀದಿಸಲು ಆದೇಶಿಸಲಾಗಿದೆ ಎಂದರು.ಸೋಯಾಬಿನ್ ಖರೀದಿ ಕೇಂದ್ರ: ಬೆಂಬಲ ಬೆಲೆ ಯೋಜನೆಯಡಿ ಸೋಯಾಬಿನ್ ಉತ್ಪನ್ನ ಖರೀದಿ ಕೇಂದ್ರಗಳನ್ನು ಹಾವೇರಿ, ಬಂಕಾಪೂರ, ಹಾನಗಲ್ಲ, ರಾಣೇಬೆನ್ನೂರು, ಸವಣೂರು, ರಟ್ಟಿಹಳ್ಳಿ ಟಿ.ಎಪಿ.ಸಿ.ಎಂ.ಎಸ್‌ನಲ್ಲಿ ಹಾಗೂ ಶಿಗ್ಗಾವಿಯ ಶ್ರೀ ಮಹಾನಂದಿ ಗ್ರೀನ್ ರೈತರ ಉತ್ಪಾದಕ ಕಂಪನಿಯಲ್ಲಿ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಿದರು.ಶೇಂಗಾ ಖರೀದಿ ಕೇಂದ್ರ: ಬೆಂಬಲ ಬೆಲೆ ಯೋಜನೆಯಡಿ ಶೇಂಗಾ ಉತ್ಪನ್ನ ಖರೀದಿ ಕೇಂದ್ರಗಳನ್ನು ರಾಣೇಬೆನ್ನೂರು, ಸವಣೂರು ಟಿ.ಎಪಿ.ಸಿ.ಎಂ.ಎಸ್‌ನಲ್ಲಿ ಹಾಗೂ ಶಿಗ್ಗಾಂವನ ಶ್ರೀ ಮಹಾನಂದಿ ಗ್ರೀನ್ ರೈತರ ಉತ್ಪಾದಕ ಕಂಪನಿ ಮತ್ತು ಹುಲಗೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಿದರು.ಡಿಬಿಟಿ ಮೂಲಕ ಹಣ ಜಮೆ: ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಿದ ಸೋಯಾಬಿನ್ ಹಾಗೂ ಶೇಂಗಾ ಉತ್ಪನದ ಮೊತ್ತವನ್ನು ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣ ಜಮೆ ಮಾಡಬೇಕು ಎಂದು ಸೂಚಿಸಿದರು.
ಕನಿಷ್ಠ ಬೆಂಬಲ ಬೆಲೆಯಡಿ ಸೋಯಾಬಿನ್ ಹಾಗೂ ಶೇಂಗಾ ಉತ್ಪನ್ನ ಖರೀದಿ ಕೇಂದ್ರ ಆರಂಭಿಸಿರುವ ಕುರಿತಂತೆ ವ್ಯಾಪಕ ಪ್ರಚಾರನಡೆಸಿ, ಕರಪತ್ರ, ಬ್ಯಾನರ್ ಅಳಡಿಸುವ ಮೂಲಕ ರೈತರಿಗೆ ಮಾಹಿತಿ ತಲುಪಿಸಬೇಕು. ರೈತರಿಂದ ಖರೀದಿಸಿದ ಭತ್ತ ಉತ್ಪನ್ನ ದಾಸ್ತಾನುಮಾಡಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಉಗ್ರಾಣಗಳನ್ನು ಕಾಯ್ದಿರಿಸಬೇಕು ಎಂದು ಸೂಚನೆ ನೀಡಿದರು.ಎಫ್‌ಎಕ್ಯೂ ಗುಣಮಟ್ಟ: ಸೋಯಾಬಿನ್ ಹಾಗೂ ಶೇಂಗಾ ಎಫ್.ಎ.ಕ್ಯೂ ಗುಣಮಟ್ಟ ಗುರುತಿಸಲು ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಸಿಬ್ಬಂದಿಗಳನ್ನು ಖರೀದಿ ಕೇಂದ್ರಕ್ಕೆ ನಿಯೋಜಿಸಬೇಕು. ಪ್ರತಿ ರೈತರಿಂದ ಪ್ರತಿ ಎಕರೆಗೆ ಐದು ಕ್ವಿಂಟಲ್‌ನಂತೆ ಗರಿಷ್ಠ ೨೦ ಕ್ವಿಂಟಲ್ ಸೋಯಾಬಿನ್ ಖರೀದಿಸಲು ಹಾಗೂ ಪ್ರತಿ ರೈತರಿಂದ ಪ್ರತಿ ಎಕರೆಗೆ ಮೂರು ಕ್ವಿಂಟಲ್‌ನಂತೆ ಗರಿಷ್ಠ ೧೫ ಕ್ವಿಂಟಲ್ ಶೇಂಗಾ ಖರೀದಿಸಲು ಅವಕಾಶವಿದೆ.ಬಿತ್ತನೆ ಪ್ರದೇಶ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ೧೪,೬೮೭ ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬಿನ್ ಬಿತ್ತನೆಯಾಗಿದೆ. ಹಾವೇರಿ ತಾಲೂಕಿನಲ್ಲಿ ೩,೫೮೪ ಹೆ., ಶಿಗ್ಗಾಂವಿ-೪,೪೫೪ ಹೆ., ಹಾನಗಲ್ಲ-೨,೧೭೫ ಹೆ., ರಾಣೇಬೆನ್ನೂರು-೨,೨೧೫ ಹೆ., ಸವಣೂರ-೧,೩೬೧ ಹೆ., ಬ್ಯಾಡಗಿ-೬೩೬ ಹೆ., ಹಿರೇಕೆರೂರು-ರಟ್ಟಿಹಳ್ಳಿ ತಾಲೂಕಿನಲ್ಲಿ ೨೬೨ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.ಅದೇ ರೀತಿ ಜಿಲ್ಲೆಯಲ್ಲಿ ೪,೯೭೬ ಹೆ.ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದ್ದು, ಹಾವೇರಿ ತಾಲೂಕಿನಲ್ಲಿ ೫೧೯ ಹೆ., ಶಿಗ್ಗಾಂವಿ-೯೪೧ ಹೆ., ಹಾನಗಲ್ಲ-೨೬೮ ಹೆ., ರಾಣೇಬೆನ್ನೂರು-೪೬೯ ಹೆ., ಸವಣೂರ-೨,೦೬೩ ಹೆ., ಬ್ಯಾಡಗಿ-೬೧೬ ಹೆ., ಹಿರೇಕೆರೂರು-ರಟ್ಟಿಹಳ್ಳಿ ತಾಲೂಕಿನಲ್ಲಿ ೧೦೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತೆನೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ತಹಸೀಲ್ದಾರಗಳು, ಸಹಕಾರಿ ಸಂಘಗಳ ಉಪನಿಬಂಧಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಶಾಖಾ ವ್ಯವಸ್ಥಾಪಕರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ಇತರರು ಇದ್ದರು.