ಶುದ್ಧ ಕುಡಿಯುವ ನೀರಿನ ಘಟಕದನಿರ್ವಹಣೆಗೆ ಹೊಸದಾಗಿ ಟೆಂಡರ್‌

| Published : Jan 10 2024, 01:46 AM IST / Updated: Jan 10 2024, 03:44 PM IST

ಶುದ್ಧ ಕುಡಿಯುವ ನೀರಿನ ಘಟಕದನಿರ್ವಹಣೆಗೆ ಹೊಸದಾಗಿ ಟೆಂಡರ್‌
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಂಡ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಹಣ ಮಾಡಿಕೊಳ್ಳುತ್ತಿದ್ದ ರಾಜಕೀಯ ಮುಖಂಡರ ಸ್ನೇಹಿತರು, ಸ್ಥಳೀಯ ಮುಖಂಡರು, ಕಾರ್ಯಕರ್ತರಿಗೆ ಕಡಿವಾಣ ಹಾಕಲು ಬಿಬಿಎಂಪಿ ಇದೀಗ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಂಡ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಹಣ ಮಾಡಿಕೊಳ್ಳುತ್ತಿದ್ದ ರಾಜಕೀಯ ಮುಖಂಡರ ಸ್ನೇಹಿತರು, ಸ್ಥಳೀಯ ಮುಖಂಡರು, ಕಾರ್ಯಕರ್ತರಿಗೆ ಕಡಿವಾಣ ಹಾಕಲು ಬಿಬಿಎಂಪಿ ಇದೀಗ ಮುಂದಾಗಿದೆ.

ನಗರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿವಿಧ ಯೋಜನೆಯಡೊ ಕೋಟ್ಯಂತರ ರು. ವೆಚ್ಚದಲ್ಲಿ ನೂರಾರು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಈ ಘಟಕಗಳು ಹಲವಾರು ವರ್ಷದಿಂದ ಕಾರ್ಯನಿರ್ವಹಿಸುತ್ತಿವೆ. ಆದರೆ, ಈ ಘಟಕಗಳಿಂದ ಹಣ ಮಾಡಿಕೊಳ್ಳುತ್ತಿದ್ದವರು ಮಾತ್ರ ರಾಜಕೀಯ ಮುಖಂಡರ ಸ್ನೇಹಿತರು, ಸ್ಥಳೀಯ ಮುಖಂಡರು, ವಿವಿಧ ಪಕ್ಷದ ಕಾರ್ಯಕರ್ತರಾಗಿದ್ದಾರೆ.

ನಗರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಈವರೆಗೆ ಬಿಬಿಎಂಪಿಗೆ ಒಂದೇ ಒಂದು ರೂಪಾಯಿ ಆದಾಯ ಬಂದಿಲ್ಲ. ಸಾರ್ವಜನಿಕರು ನೀರಿಗಾಗಿ ನೀಡಿದ ಹಣದಲ್ಲಿ ವಿದ್ಯುತ್‌ ಬಿಲ್‌ ಪಾವತಿಸಿ ಉಳಿದ ಹಣ ನಿರ್ವಹಣೆ ಮಾಡುತ್ತಿದ್ದವರ ಪಾಲಾಗುತ್ತಿತ್ತು. ಇಂತಹ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುತ್ತಿಲ್ಲ. ನಿಗದಿತ ಅವಧಿಯಲ್ಲಿ ಫಿಲ್ಟರ್‌ ಗಳನ್ನು ಬದಲಾವಣೆ ಮಾಡುತ್ತಿಲ್ಲ ಎಂಬುದು ಸೇರಿದಂತೆ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು.

ಇದೀಗ ಬಿಬಿಎಂಪಿ ಈ ಎಲ್ಲದಕ್ಕೂ ಕಡಿವಾಣ ಹಾಕಲು ಮುಂದಾಗಿದ್ದು, ನಗರದಲ್ಲಿರುವ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತನ್ನ ಸುಪರ್ದಿಗೆ ಪಡೆಯಲು ಮುಂದಾಗಿದೆ. ಜತೆಗೆ, ಅಧಿಕೃತವಾಗಿ ನಿರ್ವಹಣೆದಾರರನ್ನು ನೇಮಕ ಮಾಡಿ ಅದಾಯ ಸಂಗ್ರಹಿಸುವುದಕ್ಕೆ ಯೋಜನೆ ರೂಪಿಸಿದೆ.

₹2 ಕೋಟಿ ಮಾಸಿಕ ಆದಾಯ ನಿರೀಕ್ಷೆ: ನಗರದಲ್ಲಿ ಸುಮಾರು 500ಕ್ಕೂ ಅಧಿಕ ಶುದ್ಧ ಕುಡಿಯುವ ನೀರಿನ ಘಟಕಗಳಿವೆ ಎಂಬ ಮಾಹಿತಿ ಇದೆ. ಈ ಎಲ್ಲ ಘಟಕಗಳಿಂದ ಮಾಸಿಕವಾಗಿ ಸುಮಾರು ₹1.5 ಕೋಟಿಯಿಂದ ₹2 ಕೋಟಿವರೆಗೆ ಆದಾಯ ಬರುವ ನಿರೀಕ್ಷೆ ಇದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎರಡು ವಲಯದಲ್ಲಿ ಟೆಂಡರ್‌: ಈಗಾಗಲೇ ರಾಜಾಜಿನಗರದ ವಲಯದ 153 ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಟೆಂಡರ್‌ ಆಹ್ವಾನಿಸಲಾಗಿದೆ. ಮಾಸಿಕವಾಗಿ ₹100ರಿಂದ ₹65 ಸಾವಿರ ವರೆಗೆ ಬಿಬಿಎಂಪಿಗೆ ಪಾವತಿ ಮಾಡುವುದಾಗಿ ಟೆಂಡರ್‌ ಸಲ್ಲಿಕೆ ಮಾಡಿದ್ದಾರೆ. ಇದರಿಂದ ಬಿಬಿಎಂಪಿಗೆ ಮಾಸಿಕ ₹25 ಲಕ್ಷ ಆದಾಯ ಬರಲಿದೆ ಎಂದು ಆರ್‌ಆರ್‌ ನಗರ ವಲಯ ಆಯುಕ್ತ ಸೂರಳ್ಕರ್‌ ವಿಕಾಸ್‌ ಕಿಶೋರ್‌ ಚಂದ್ರ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಅದೇ ರೀತಿ ಇದೀಗ ಯಲಹಂಕ ವಲಯದಲ್ಲಿಯೂ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಹವಣೆಗೆ ಟೆಂಡರ್‌ ಆಹ್ವಾನಿಸಲಾಗಿದೆ. ವಿದ್ಯುತ್‌ ಬಿಲ್‌ ನಿರ್ವಹಣೆದಾರರೇ ಪಾವತಿ ಮಾಡಬೇಕು. ಸರ್ಕಾರ ನಿಗದಿ ಪಡಿಸಿದ ದರದಲ್ಲಿ ನೀರು ಪೂರೈಕೆ ಮಾಡಬೇಕು. ಆಪರೇಟರ್‌ಗಳನ್ನು ನೇಮಕ ಮಾಡಿಕೊಳ್ಳುವುದು ಗುತ್ತಿಗೆದಾರರ ಜವಾಬ್ದಾರಿಯಾಗಿದೆ. ದೂರು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಷರತ್ತು ವಿಧಿಸಲಾಗಿದೆ.

ನಗರದ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಟೆಂಡರ್‌ ಮೂಲಕ ನಿರ್ವಹಣೆದಾರರ ನೇಮಕ ಮಾಡಲು ಸೂಚಿಸಲಾಗಿದೆ. ಈಗಾಗಲೇ ಆರ್‌ಆರ್‌ ನಗರ ವಲಯದಲ್ಲಿ ಟೆಂಡರ್ ಆಹ್ವಾನಿಸಿ ಗುತ್ತಿಗೆದಾರರನ್ನು ನೇಮಕ ಮಾಡಲಾಗುತ್ತಿದೆ.

-ತುಷಾರ್‌ ಗಿರಿನಾಥ್‌, ಮುಖ್ಯ ಆಯುಕ್ತರು, ಬಿಬಿಎಂಪಿ.