ಸಾರಾಂಶ
ಕಾರವಾರ:
ತಾಲೂಕಿನ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಪಡೆಯಲಾಗಿದ್ದ ಸ್ಪಿರಿಟ್ ಮದ್ಯಕ್ಕೆ ಬಳಸುವುದಾಗಿದೆ ಎಂದು ಪ್ರಯೋಗಾಲಯದ ವರದಿ ಬಂದ ಬಳಿಕ ಇಲ್ಲಿನ ಅಬಕಾರಿ ಇಲಾಖೆಯಲ್ಲಿ ದೂರು ದಾಖಲಾಗಿದೆ.ಟ್ಯಾಂಕರ್ ಚಾಲಕ ಮಧ್ಯಪ್ರದೇಶದ ಇಂದೋರ ಪಿ.ಪಿ., ನಗರದ ಮುಗ್ಗರ್ ಸಿಂಗ್ ಮೋಹನ ಸಿಂಗ್ (೫೨), ಬೀದರ ಜಿಲ್ಲೆಯ ಮಿರ್ಜಾಪುರದ ಎಂ.ಎಸ್. ರವೀಂದ್ರ ಆ್ಯಂಡ್ ಕಂಪನಿ ಲಿ. ಪ್ರಾಥಮಿಕ ಡಿಸ್ಟಿಲರಿ ಎಸ್.ವೈ., ಗೋವಾದ ಮಾರ್‌ಗಾಂವನ ಗ್ಲೋಬಲ್ ಕೆಮಿಕಲ್ಸ್ ವಿರುದ್ಧ ಪ್ರಕರಣ ದಾಖಲಾಗಿದೆ.
ಹಿನ್ನೆಲೆ:ನ. ೪ರಂದು ಮಹಾರಾಷ್ಟ್ರ ನೋಂದಣಿಯ ಟ್ಯಾಂಕರ್‌ನಲ್ಲಿ ₹ ೧೮ ಲಕ್ಷ ಮೌಲ್ಯದ ೩೦ ಸಾವಿರ ಲೀ. ಸ್ಪಿರಿಟ್ ತುಂಬಿಕೊಂಡು ಬೀದರ್‌ನಿಂದ ಗೋವಾಕ್ಕೆ ತೆರಳಿತ್ತಿತ್ತು. ಖಚಿತ ಮಾಹಿತಿ ಮೇರೆಗೆ ಈ ಟ್ಯಾಂಕರ್ ತಪಾಸಣೆ ಮಾಡಿದ್ದು, ಪರವಾನಗಿ ಕೇಳಿದಾಗ ಚಾಲಕ ತೋರಿಸಿದ್ದಾನೆ. ಇಎನ್‌ಎ ನಾನ್‌ಪೋಟೆಬಲ್ (ಕೈಗಾರಿಕೆಗೆ ಬಳಸುವುದು) ಎಂದು ಬರೆದಿತ್ತು. ಇಎನ್‌ಎ ನಾನ್‌ಪೋಟೆಬಲ್‌ಗೊಳಿಸಲು ಯಾವ ಡಿನೇಚರಂಟ್ ಬಳಕೆ ಮಾಡಲಾಗಿದೆ ಎಂದು ನಮೂದಾಗದ ಕಾರಣ ಅಬಕಾರಿ ಅಧಿಕಾರಿಗಳಿಗೆ ಅನುಮಾನ ಬಂದಿದ್ದು, ಕೂಡಲೇ ಟ್ಯಾಂಕರ್ ಜಪ್ತು ಮಾಡಿ ಚಾಲಕನನ್ನು ವಶಕ್ಕೆ ಪಡೆದಿದ್ದರು. ಸ್ಪಿರಿಟ್ ಮಾದರಿ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಕೈಗಾರಿಕೆಗೆ ಬಳಸುವುದಲ್ಲ, ಶುದ್ಧ ಸ್ಪಿರಿಟ್(ಮದ್ಯಕ್ಕಾಗಿ ಬಳಸುವುದು) ಎಂದು ವರದಿ ಬಂದಿದೆ. ೩೦ ಸಾವಿರ ಲೀ. ಸ್ಪಿರಿಟ್‌ನಿಂದ ೯೦ ಸಾವಿರ ಲೀ. ಭಾರತೀಯ ಮದ್ಯವನ್ನು (ಅಂದಾಜು ೧೦,೫೦೦ಪೆಟ್ಟಿಗೆ) ತಯಾರಿಸಬಹುದಾಗಿದ್ದು, ಇದರ ಮೌಲ್ಯ ₹ ೩.೬೬ ಕೋಟಿಯಾಗಿದೆ. ರಾಜ್ಯ ಸರ್ಕಾರದ ಅಬಕಾರಿ ಸುಂಕ ತಪ್ಪಿಸಲು ಈ ರೀತಿ ಕೈಗಾರಿಕಾ ಸ್ಪಿರಿಟ್ ಎಂದು ನಮೂದಿಸಿ ತೆಗೆದುಕೊಂಡು ಬಂದಿರಬಹುದು ಎಂದು ಅಂದಾಜಿಸಲಾಗಿದ್ದು, ಅಬಕಾರಿ ಕಾಯ್ದೆ ೧೯೫೬ರ ಕಲಂ ೨(೬)-೨(೨೬), ೧೧, ೧೪, ೧೫, ೩೨(೨), ೩೪, ೩೮(ಎ), ೪೩ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ತನಿಖೆ ಮುಂದುವರಿದಿದೆ.