ಮಾಂಸಾಹಾರವನ್ನು ತ್ಯಜಿಸಿ ಶಾಖಾಹಾರ ಹಾಗೂ ಸಾತ್ವಿಕ ಆಹಾರ ಸೇವನೆಯಿಂದ ಮನಸ್ಸು ಶುದ್ಧೀಕರಣವಾಗುತ್ತದೆ.
ಕನ್ನಡಪ್ರಭ ವಾರ್ತೆ ರೋಣ
ಮಾಂಸಾಹಾರವನ್ನು ತ್ಯಜಿಸಿ ಶಾಖಾಹಾರ ಹಾಗೂ ಸಾತ್ವಿಕ ಆಹಾರ ಸೇವನೆಯಿಂದ ಮನಸ್ಸು ಶುದ್ಧೀಕರಣವಾಗುತ್ತದೆ. ದಯೆ ಮತ್ತು ಕರುಣೆಯಂತಹ ಸದ್ಗುಣಗಳು ಬೆಳೆಯುತ್ತವೆ ಹಾಗೂ ಆಧ್ಯಾತ್ಮಿಕ ಸಾಧನೆಗೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ ಎಂದು ಉಜೈನಿ ಪರಮಸಂತ ಉಮಾಕಾಂತಜಿ ಮಹಾರಾಜ ಹೇಳಿದರು.ಮಂಗಳವಾರ ಸಂಜೆ ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಬಾಬಾ ಜಯಗುರುದೇವ ಸಂಗತ ಉಜ್ಜಯಿನಿ ಹಾಗೂ ರೋಣ ಘಟಕದ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕಾರ್ತಿಕ ಹುಣ್ಣಿಮೆಯ ಪವಿತ್ರ ದಿನ ಆಧ್ಯಾತ್ಮಿಕ ಸತ್ಸಂಗ ಮತ್ತು ನಾಮದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯನ ಜೀವನ ಸಾರ್ಥಕತೆ, ನೈತಿಕ ಮೌಲ್ಯಗಳು ಮತ್ತು ಆಧ್ಯಾತ್ಮಿಕ ಉನ್ನತಿ ಹೊಂದಬೇಕು. ಹೀಗಾಗಲು ಮಿದಲು ಶಾಖಾಹಾರಿಯಾಗಿ, ಸಾತ್ವಿಕ ಬದುಕನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉತ್ತಮ ಸಂಘವನ್ನು ಮಾಡಬೇಕು. ಮದ್ಯಪಾನ ಮತ್ತು ಧೂಮಪಾನದಂತಹ ಮಾರಕ ದುಶ್ಚಟಗಳು ಮನುಷ್ಯನ ದೈಹಿಕ ಹಾಗೂ ಮಾನಸಿಕ ನೆಮ್ಮದಿಯನ್ನು ಹಾಳುಮಾಡುವುದಲ್ಲದೆ, ಇಡೀ ಕುಟುಂಬವನ್ನು ಸಂಕಷ್ಟಕ್ಕೆ ದೂಡುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಇಂತಹ ವ್ಯಸನಗಳಿಂದ ಸಂಪೂರ್ಣವಾಗಿ ದೂರವಿರಬೇಕು ಎಂದು ಕರೆ ನೀಡಿದರು. ಉತ್ತಮ ಆರೋಗ್ಯವೇ ನಿಜವಾದ ಸಂಪತ್ತು. ನಿಯಮಿತ ದಿನಚರಿ, ಶುದ್ಧ ಆಹಾರ ಪದ್ಧತಿ ಮತ್ತು ವ್ಯಸನಮುಕ್ತ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆಧುನಿಕ ಒತ್ತಡದ ಜೀವನದಲ್ಲಿ ಮನಸ್ಸಿನ ಶಾಂತಿಗಾಗಿ ಪ್ರತಿನಿತ್ಯ ಧ್ಯಾನ ಮಾಡುವುದು ಅತ್ಯಗತ್ಯ. ನಿರಂತರ ನಾಮಸ್ಮರಣೆ ಮತ್ತು ಧ್ಯಾನದಿಂದ ಆತ್ಮಕಲ್ಯಾಣ ಸಾಧ್ಯ ಎಂದು ತಿಳಿಸಿದರು.ಸತ್ಸಂಗದ ಬಳಿಕ ಭಕ್ತರಿಗೆ ನಾಮದಾನ ನೀಡಲಾಯಿತು.
ರೋಣ ತಾಲ್ಲೂಕು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಹಾಗೂ ಬಾಬಾ ಜಯಗುರುದೇವ ಸಂಗತದ ಪದಾಧಿಕಾರಿಗಳು ಈ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರುಗಳ ದರ್ಶನ ಮತ್ತು ಆಶೀರ್ವಾದ ಪಡೆದರು.