ಸಾರಾಂಶ
ಲಕ್ಷ್ಮೇಶ್ವರ: ಬಸವಣ್ಣನವರು ಮಹಾಮಾನವತಾವಾದಿಯಾಗಿದ್ದರು. ಸಮ ಸಮಾಜದ ತತ್ವ ಅಳವಡಿಸಿಕೊಳ್ಳುವಂತೆ ತಮ್ಮ ವಚನಗಳಲ್ಲಿ ತಿಳಿಸಿ ಹೋರಾಡಿದ ಮಹಾನುಭಾವರಾಗಿದ್ದಾರೆ ಎಂದು ಬೆಳ್ಳಟ್ಟಿಯ ರಾಮಲಿಂಗೇಶ್ವರ ಮಠದ ಪೀಠಾಧಿಪತಿ ಬಸವರಾಜ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶರಣ ಸಾಹಿತ್ಯ ಪರಿಷತ್ತು. ಮಹಿಳಾ ಕದಳಿ ವೇದಿಕೆಗಳ ಸಹಯೋಗದಲ್ಲಿ ಶನಿವಾರ ಸಂಜೆ ಬಸವ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಬಸವಣ್ಣನವರು 12 ನೇ ಶತಮಾನದಲ್ಲಿ ಉದಯಿಸಿದ ಮನುಕುಲದ ಹೊಸ ಸೂರ್ಯನಾಗಿದ್ದಾರೆ. ಸಮ ಸಮಾಜದ ನಿರ್ಮಾಣಕ್ಕೆ ಚಾಲನೆ ನೀಡಿ, ಹಳೆಯ ಕಂದಾಚರಣೆಗಳ ವಿರುದ್ಧ ಹೋರಾಡಿದರು. ಕನ್ನಡ ನಾಡಿಗೆ ವಚನ ಸಾಹಿತ್ಯ ನೀಡುವ ಮೂಲಕ ಹೊಸ ಸಾಹಿತ್ಯ ಪ್ರಕಾರಕ್ಕೆ ನಾಂದಿ ಹಾಡಿದರು. ಸಮಾಜದಲ್ಲಿನ ಮೇಲು ಕೀಳು, ಶ್ರೀಮಂತ ಬಡವ ಎನ್ನುವ ಕಂದಾಚಾರ ಕಿತ್ತೆಸೆದು ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದರು.
ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದ ಬಸವಣ್ಣನವರ ತತ್ವಗಳ ಆಚರಣೆಗಳನ್ನು ಅಳವಡಿಸಿಕೊಳ್ಳುವುದು ಇಂದು ಹೆಚ್ಚು ಪ್ರಸ್ತುತವಾಗಿದೆ. ಬಸವ ಪುರಾಣ ಆಲಿಸುವುದರಿಂದ ಜನ್ಮ ಸಾರ್ಥಕ. ಶಿವ ಶರಣರನ್ನು ಹೊಗಳಲು ನಾಲಿಗೆ ಬಳಸಬೇಕು. ಚಾಮರಸನ ಪ್ರಭುಲಿಂಗ ಲೀಲೆ ಮಹಾಪುರಾಣ ಕನ್ನಡ ಸಾಹಿತ್ಯದ ಅಮೋಘ ಕೃತಿಯಾಗಿದೆ. ಬಸವಣ್ಣನವರು ಮಾಯೆಯನ್ನು ಗೆದ್ದು, ಕಾಯಕಯೋಗಿ ಆಗಿದ್ದರು. ಒಂಭೈನೂರು ವರ್ಷಗಳಾದರೂ ಬಸವಣ್ಣ ಜೀವಂತವಾಗಿದ್ದಾರೆ. ಬಸವಣ್ಣ ಕಾಲ್ಪನಿಕ ವ್ಯಕ್ತಿಯಲ್ಲ. ಭಕ್ತಿಯಿಂದ ದೇವರನ್ನು ಒಲಿಸಲು ಸಾಧ್ಯ. ಅನುಭವದ ಸಾರವೇ ವಚನಗಳಾಗಿವೆ. ಬಸವ ತತ್ವ, ಚಿಂತನೆ ಅಗತ್ಯ.ಕಾಯಕ, ದಾಸೋಹಕ್ಕೆ ಒತ್ತು ನೀಡಬೇಕಾಗಿದೆ ಎಂದು ಹೇಳಿದರು.ಸಮಾರಂಭದಲ್ಲಿ ಉಪನ್ಯಾಸ ನೀಡಿ ಡಾ. ಎಸ್.ಆರ್.ಶಿರಹಟ್ಟಿ ಮಾತನಾಡಿ, ಬಸವಣ್ಣನವರ ಯುಗ ಸಾಮಾಜಿಕ ಬದಲಾವಣೆಯ ಯುಗವಾಗಿದೆ. ಮಕ್ಕಳಿಗೆ ಬಸವಣ್ಣನವರ ವಚನಗಳಲ್ಲಿನ ಸಾರ ತಿಳಿಸಿಕೊಡುವ ಮೂಲಕ 12 ನೇ ಶತಮಾನದಲ್ಲಿ ಬಾಳಿ ಹೋದ ಮಹಾನ್ ಶರಣರ ಅನುಭಾವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸಮಾಜದಲ್ಲಿ ಇಂದು ನಡೆಯುತ್ತಿರುವ ಕೊಲೆ, ಸುಲಿಗೆ, ಅನಾಚಾರ ತೊಡೆದು ಹಾಕಲು ಸಾಧ್ಯ. ಬಸವಣ್ಣನವರ ವಚನಗಳು ಕನ್ನಡ ಸಾಹಿತ್ಯದ ಆಸ್ತಿಯಾಗಿದೆ. ಬೇರೆಲ್ಲ ಭಾಷೆಯಲ್ಲಿ ಇಲ್ಲದೆ ವಿಶಿಷ್ಟ ಸಾಹಿತ್ಯ ವಚನ ಸಾಹಿತ್ಯ. ಸಮಾಜದ ಓರೆ ಕೋರೆಗಳನ್ನು ತಿದ್ದುವ ವಚನಗಳಲ್ಲಿ ಹಿರಿದಾದ ಮಹತ್ವವಿದೆ ಎಂದು ಹೇಳಿದರು.
ಸಭೆಯಲ್ಲಿ ಬಸವರಾಜ ಬೆಂಡಿಗೇರಿ ಹಾಗೂ ಬಸವರಾಜ ಹಿರೇಮನಿ ಸಮಾರಂಭದಲ್ಲಿ ಮಾತನಾಡಿದರು.12 ನೇ ಶತಮಾನದಲ್ಲಿ ಬಾಳಿಹೋದ ಶರಣರ ವಚನಗಳನ್ನು ಶಕುಂತಲಾ ಅಳಗವಾಡಿ, ಸಿ.ಜಿ.ಹಿರೇಮಠ, ನಾಗರಾಜ ಹಣಗಿ, ಅಶೋಕ ಸೊರಟೂರ, ಎಸ್.ಬಿ.ಕೊಣ್ಣೂರ, ಬಸವರಾಜ ಸಂಗಪ್ಪಶೆಟ್ಟರ, ಶ್ರೀನಿಧಿ ಶಿಳ್ಳಿನ, ಪಾರ್ವತಿ ಕಳ್ಳಿಮಠ, ಚಿನ್ಮಯಿ ವಡಕಣ್ಣವರ ವಚನಗಳ ಪಠಣ ಮಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಲ್.ಎಸ್. ಅರಳಹಳ್ಳಿ ಬಸವಣ್ಣನವರ ಕುರಿತು ಮಾತನಾಡಿದರು.
ಈ ವೇಳೆ ಪೂರ್ಣಾಜಿ ಖರಾಟೆ, ಎನ್,ಆರ್, ಸಾತಪುತೆ, ಮರುಳಾರಾಧ್ಯ ಕಳ್ಳಿಮಠ. ವೆಂಕಟೇಶ ಮಾತಾಡೆ, ಗಂಗಾಧರ ಅರಳಿ ಇದ್ದರು.ನಿಂಗಪ್ಪ ಗೊರವರ ಭಕ್ತಿ ಸೇವೆ ಮಾಡಿದರು. ಮಲ್ಲು ಕಳಸಾಪೂರ ಪ್ರಾರ್ಥಿಸಿದರು, ಅಶೋಕ ಸೊರಟೂರ ಸ್ವಾಗತಿಸಿದರು, ಮಾಲಾ ದಂದರಗಿ ನಿರೂಪಿಸಿದರು, ನಾಗರಾಜ ಹಣಗಿ ವಂದಿಸಿದರು.