ಡಿಸೆಂಬರ್ ಮಧ್ಯಭಾಗದಿಂದ ಜನವರಿ ಮಧ್ಯದವರೆಗೆ ಇರುವ ಧನುರ್ಮಾಸವು ಅತ್ಯಂತ ಪವಿತ್ರವಾದುದು. ಈ ಮಾಸದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಜಪ, ಪೂಜೆ ಹಾಗೂ ಭಜನೆ ಮಾಡುವುದರಿಂದ ಮತ್ತು ಅಯ್ಯಪ್ಪ ಸ್ವಾಮಿಯ ಪಡಿಪೂಜೆ ಕೈಗೊಳ್ಳುವುದರಿಂದ ಭಕ್ತರ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ಮುನಿರಾಜು ವಿವರಿಸಿದರು.

ವಿಜಯಪುರ: ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಚಾರಗಳ ಸಂಗಮವಾದ ಭಜನೆಯು ಮನುಷ್ಯನ ಮನಸ್ಸನ್ನು ಶುದ್ಧೀಕರಿಸಲು ಸಹಕಾರಿಯಾಗಿದೆ ಎಂದು ಪಟ್ಟಣದ ಶ್ರೀ ಧರ್ಮಶಾಸ್ತ್ರ ಅಯ್ಯಪ್ಪ ಸ್ವಾಮಿ ದೇವಾಲಯದ ಗುರುಸ್ವಾಮಿ ಜೆ.ವಿ. ಮುನಿರಾಜು ತಿಳಿಸಿದರು. ಪಟ್ಟಣದ ಕೆರೆ ಕೋಡಿ ರಸ್ತೆಯ ಮಾರುತಿ ನಗರದ ಪಿ. ಗೋಪಾಲಪ್ಪನವರ ಸ್ವಗೃಹದಲ್ಲಿ ಧನುರ್ಮಾಸದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಪಡಿಪೂಜೆ, ಧರ್ಮಶಾಸ್ತ್ರ ಅಯ್ಯಪ್ಪ ಸ್ವಾಮಿ ಭಜನೆ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಿಸೆಂಬರ್ ಮಧ್ಯಭಾಗದಿಂದ ಜನವರಿ ಮಧ್ಯದವರೆಗೆ ಇರುವ ಧನುರ್ಮಾಸವು ಅತ್ಯಂತ ಪವಿತ್ರವಾದುದು. ಈ ಮಾಸದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಜಪ, ಪೂಜೆ ಹಾಗೂ ಭಜನೆ ಮಾಡುವುದರಿಂದ ಮತ್ತು ಅಯ್ಯಪ್ಪ ಸ್ವಾಮಿಯ ಪಡಿಪೂಜೆ ಕೈಗೊಳ್ಳುವುದರಿಂದ ಭಕ್ತರ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ಮುನಿರಾಜು ವಿವರಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರ್ವೋದಯ ಮಂಡಳಿ ಅಧ್ಯಕ್ಷ ಡಾ. ವಿ. ಪ್ರಶಾಂತ್ ಮಾತನಾಡಿ, ಅಯ್ಯಪ್ಪ ಸ್ವಾಮಿ ಭಜನೆಯು ಕೇವಲ ಹಾಡಲ್ಲ, ಅದು ಆಧ್ಯಾತ್ಮಿಕ ಉನ್ನತಿ ಮತ್ತು ಸಕಾರಾತ್ಮಕ ಶಕ್ತಿಯ ಸಂಕೇತ. ಶರಣು ಘೋಷಣೆ, ಇರುಮುಡಿ, ಮಾಲೆ ಮತ್ತು ಕಪ್ಪು ವಸ್ತ್ರಧಾರಿಗಳಾದ ಭಕ್ತರಿಗೆ ಶಿಸ್ತು ಮತ್ತು ಸಮಾನತೆಯನ್ನು ಈ ವ್ರತವು ಕಲಿಸಿಕೊಡುತ್ತದೆ. ಸ್ವಾಮಿಯ ದರ್ಶನವು ಮನಸ್ಸಿಗೆ ಧೈರ್ಯ ನೀಡುವುದಲ್ಲದೆ ಪರಿಶುದ್ಧ ಜೀವನಕ್ಕೆ ಸ್ಫೂರ್ತಿಯಾಗುತ್ತದೆ ಎಂದರು.

ವೈವಿಧ್ಯಮಯ ಧಾರ್ಮಿಕ ವಿಧಿಗಳು:

ಕಾರ್ಯಕ್ರಮದಲ್ಲಿ ಮಾಲಾಧಾರಿಗಳಿಂದ ಶರಣು ಘೋಷಣೆ, ಕನ್ನಿ ಸ್ವಾಮಿಗಳ ಪಾದಪೂಜೆ ಹಾಗೂ ಭಕ್ತಿಗೀತೆಗಳ ಭಜನೆ ನಡೆಯಿತು. ದೀಪಾರತಿ, ವ್ರತಾರತಿ ಮತ್ತು ವಿಶೇಷ ಭಸ್ಮ ಆರತಿಯ ಮೂಲಕ ದೇವರಿಗೆ ಪೂಜೆ ಸಲ್ಲಿಸಲಾಯಿತು. ಗುರುಸ್ವಾಮಿ ಜೆ.ವಿ. ಮುನಿರಾಜು, ಹಿರಿಯ ಧಾರ್ಮಿಕ ಸಲಹೆಗಾರ ಸಿ. ನಾರಾಯಣಪ್ಪ ಮತ್ತು ಡಾ. ವಿ. ಪ್ರಶಾಂತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪಿ. ಗೋಪಾಲಪ್ಪ, ಪಾಪಮ್ಮ, ಜಿ. ಸುರೇಶ್, ಎಂ. ಮಂಜುಳಾ, ಜಿ. ಪ್ರಕಾಶ್, ಎಸ್. ಹರ್ಷಿತ್, ಕನ್ನಡಪರ ಹೋರಾಟಗಾರ ಶಿವಕುಮಾರ್, ಸಂಯೋಜಕ ರವಿ ಕಿರಣ್ ಹಾಗೂ ಹಲವಾರು ಮಾಲಾಧಾರಿಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.