ದೇವರು ಬಾಹ್ಯ ಆಡಂಬರದ ಪೂಜೆಗಿಂತ ಭಕ್ತರ ಹೃದಯದ ಪರಿಶುದ್ಧತೆಯನ್ನು ಮೆಚ್ಚುತ್ತಾನೆ. ಎದೆ ಸ್ವಚ್ಛವಾಗಿರಬೇಕು, ಮನಸ್ಸು ಶಾಂತವಾಗಿರಬೇಕು ಮತ್ತು ಕೈಗಳು ಒಳ್ಳೆಯ ಕೆಲಸದಲ್ಲಿ ತೊಡಗಿರಬೇಕು.

ಈಶ್ವರ ದೇವಸ್ಥಾನದ ನೂತನ ಕಳಸಾರೋಹಣ ಅಂಗವಾಗಿ ಆಯೋಜಿಸಿದ್ದ ಧರ್ಮಸಭೆ

ಕನ್ನಡಪ್ರಭ ವಾರ್ತೆ ಗದಗ

ದೇವರು ಬಾಹ್ಯ ಆಡಂಬರದ ಪೂಜೆಗಿಂತ ಭಕ್ತರ ಹೃದಯದ ಪರಿಶುದ್ಧತೆಯನ್ನು ಮೆಚ್ಚುತ್ತಾನೆ. ಎದೆ ಸ್ವಚ್ಛವಾಗಿರಬೇಕು, ಮನಸ್ಸು ಶಾಂತವಾಗಿರಬೇಕು ಮತ್ತು ಕೈಗಳು ಒಳ್ಳೆಯ ಕೆಲಸದಲ್ಲಿ ತೊಡಗಿರಬೇಕು. ಪ್ಯೂರಿಟಿ ಇನ್ ದಿ ಹಾರ್ಟ್, ಕ್ಲಾರಿಟಿ ಇನ್ ದಿ ಮೈಂಡ್, ಚಾರಿಟಿ ಇನ್ ದಿ ಹ್ಯಾಂಡ್ ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ದೇವರನ್ನೇ ನಮ್ಮ ಬಳಿಗೆ ಆಹ್ವಾನಿಸಬಹುದು ಎಂದು ಕೊಪ್ಪಳದ ಗವಿಸಿದ್ಧೇಶ್ವರ ಮಠದ ಡಾ. ಅಭಿನವ ಗವಿಸಿದ್ಧೇಶ್ವರ ಶ್ರೀಗಳು ಹೇಳಿದರು.

ನಗರದ ಪಂಚಾಕ್ಷರಿ ನಗರದ 6ನೇ ಕ್ರಾಸ್‌ನಲ್ಲಿರುವ ಶ್ರೀ ಈಶ್ವರ ದೇವಸ್ಥಾನದ ನೂತನ ಕಳಸಾರೋಹಣ ಅಂಗವಾಗಿ ಶನಿವಾರ ಆಯೋಜಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರತಿಫಲಾಪೇಕ್ಷೆಯಿಲ್ಲದೆ ನೆರಳು, ಹಣ್ಣು ನೀಡುವ ಮರದ ನಿಸ್ವಾರ್ಥ ಗುಣವೇ ದೇವರಿಗೆ ಪ್ರಿಯವಾಗುತ್ತದೆ. ಹತ್ತು ಟನ್ ಭಾರದ ಲಾರಿಯನ್ನು ಪುಟ್ಟ ಜಾಕ್ ಎತ್ತುವಂತೆ, ಹೃದಯದಲ್ಲಿರುವ ಅಲ್ಪ ಭಕ್ತಿಯೂ ಬದುಕಿನ ಸಂಕಷ್ಟಗಳನ್ನು ಎದುರಿಸುವ ಶಕ್ತಿ ನೀಡುತ್ತದೆ. ಸಂಸಾರದಲ್ಲಿ ಸಂಪತ್ತಿಗಿಂತ ಪರಸ್ಪರ ಪ್ರೀತಿ, ನಂಬಿಕೆ ಮುಖ್ಯ ಎಂದರು.

ಸುಕ್ಷೇತ್ರ ಬಳಗಾನೂರಿನ ಪೂಜ್ಯ ಶಿವಶಾಂತವೀರ ಶರಣರು ಮಾತನಾಡಿ, ಮನುಷ್ಯನ ಬದುಕು ಸಾರ್ಥಕವಾಗಲು ಭೌತಿಕ ಸೌಲಭ್ಯಗಳಷ್ಟೇ ಸಾಲದು; ಆಧ್ಯಾತ್ಮಿಕ ಚಿಂತನೆ, ಅರಿವು ಹಾಗೂ ಸನ್ನಡತೆ ಅತ್ಯಗತ್ಯ. ಮುಂದಿನ ಪೀಳಿಗೆಗೆ ಧಾರ್ಮಿಕ ಪರಂಪರೆ ಪರಿಚಯಿಸಲು ದೇವಸ್ಥಾನಗಳ ನಿರ್ಮಾಣ ಶ್ಲಾಘನೀಯ ಕಾರ್ಯ ಎಂದರು.

ಗೌರಿ ಮಹಿಳಾ ಮಂಡಳದಿಂದ ರುದ್ರಪಠಣ ಜರುಗಿತು. ಶ್ರೀನಿಧಿ ಉಗಲಾಟ ಪ್ರಾರ್ಥಿಸಿದರು. ಬಸವರಾಜ ಕೊರ್ಲಹಳ್ಳಿ ಸ್ವಾಗತಿಸಿದರು. ಜ್ಯೋತಿ ಹೇರಲಗಿ ನಿರೂಪಿಸಿ, ವಂದಿಸಿದರು. ಪಂಚಾಕ್ಷರಿ ನಗರದ ಹಿರಿಯರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.