ಸಾರಾಂಶ
ಸ್ಕೌಟ್ಸ್ ಮತ್ತು ಗೈಡ್ಸ್ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಕ್ಕಳು ನಾಲ್ಕು ಗೋಡೆಗಳ ನಡುವೆ ಓದು ಬರಹಗಳನ್ನು ಕಲಿಯುವುದರ ಜೊತೆಗೆ, ನಿಸರ್ಗದ ಮಡಿಲಲ್ಲಿ ಒಂದಾಗಿ ಬೆರೆತು, ಸಮನ್ವಯದಿಂದ ಬಾಳಲು ಕಲಿಯುವಂತೆ ಪ್ರೇರೇಪಿಸುವ ಕಾರ್ಯವೇ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮೂಲ ಉದ್ದೇಶ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿದರು. ನಗರದ ಸ್ಕೌಟ್ಸ್ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಘಟಕ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಏರ್ಪಡಿಸಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ಮೂಲ ತರಬೇತಿ ಶಿಬಿರದಲ್ಲಿ ಮಾತನಾಡಿದರು. ಸ್ಕೌಟ್ಸ್ ಮತ್ತು ಗೈಡ್ಸ್‌ನ ಸಮಾಜಮುಖಿ ಕೆಲಸಗಳು ಮತ್ತು ಪ್ರತಿಯೊಬ್ಬರಲ್ಲಿ ದೇಶ ಪ್ರೇಮ ಸಾರುವ ಯೋಜನೆಗಳನ್ನು ಮನಗಂಡಿರುವ ಸರಕಾರ ಪ್ರತಿಯೊಂದು ಶಾಲೆ ಕಾಲೇಜುಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಪ್ರಾರಂಭಿಸಲು ಸಹಕರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಕಡೆಗಳಲ್ಲಿಯೂ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳನ್ನು ನೀಡಿ ಅನೇಕ ಅನುಕೂಲಗಳನ್ನು ಸರಕಾರ ಮಾಡುವುದರಿಂದ ಶಿಕ್ಷಕರು ಮತ್ತು ಮಕ್ಕಳು ಮುಕ್ತವಾಗಿ ಭಾಗವಹಿಸಿ ಸ್ಕೌಟ್ಸ್ ಮತ್ತು ಗೈಡ್ಸ್‌ನ ಅನುಕೂಲ ಪಡೆದು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ ಎಂದರು. ಈಗಾಗಲೇ ಹತ್ತು ವರ್ಷಗಳ ತಮ್ಮ ಅವಧಿಯಲ್ಲಿ ಶಾಲಾ ಶಿಕ್ಷಣ ಇಲಾಖೆ ಹಲವಾರು ಜಿಲ್ಲೆಗಳಲ್ಲಿ ಕಾರ್ಯ ಕ್ರಮ ನಡೆಸಲು ಸಹಕಾರ ನೀಡಿ ಸ್ಕೌಟ್ಸ್ ಮತ್ತು ಗೈಡ್ಸ್‌ನ ಬೆಂಬಲಕ್ಕೆ ನಿಂತಿದೆ. ಜೊತೆಗೆ ಹಾಸನಾಂಬ ದೇವಾಲಯದಲ್ಲೂ ಸೇವಕರ ಬದಲಾಗಿ ಸ್ಕೌಟ್ಸ್ ಮಕ್ಕಳನ್ನು ಸೇವಾ ಕಾರ್ಯಕ್ಕೆ ಬಳಸಿಕೊಂಡಿರುವ ಜಿಲ್ಲಾಧಿಕಾರಿ ಹುಂಡಿಯ ಕಾಣಿಕೆ ಹಣ ಎಣಿಕೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.ಸ್ಕೌಟ್ಸ್ ಮತ್ತು ಗೈಡ್ಸ್‌ನ ದೇಶಪ್ರೇಮ ಹಾಗೂ ಶಿಸ್ತು ಸಾರುವುದನ್ನು ಮನಗಂಡು ರಾಜ್ಯದಲ್ಲಿ ಸುಮಾರು 5 ಲಕ್ಷ ಮಂದಿ ವಾರದಲ್ಲಿ ತರಬೇತಿಯಲ್ಲಿ ಪಾಲ್ಗೊಂಡು ಕಲಿಕೆಗೆ ಮುಂದಾಗುತ್ತಿದ್ದು 25,000ಕ್ಕೂ ಹೆಚ್ಚು ಶಿಕ್ಷಕರು ಶಿಬಿರಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಸಮಾಜದಲ್ಲಿ ಎದುರಾಗುವ ಸಮಸ್ಯೆಗಳನ್ನು ಮಾನಸಿಕವಾಗಿ ಆತ್ಮಸ್ಥೈರ್ಯ ತುಂಬುವ ಮೂಲಕ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯನಿರ್ವಹಿಸುತ್ತಿದ್ದು ಕೇಂದ್ರ ಸರ್ಕಾರ ಈ ಬಗ್ಗೆ ವಿಶೇಷ ಕಾಳಜಿ ವಹಿಸಿ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಕಡ್ಡಾಯಗೊಳಿಸಲು ಮುಂದಾಗಿದ್ದು ರಾಜ್ಯದಲ್ಲೂ ಈ ಶಿಕ್ಷಣ ನೀತಿ ಜಾರಿಯಾಗಲಿದೆ ಎಂದು ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸಿ.ರವೀಶ್ ಮಾತನಾಡಿ, ಅಂತಾರಾಷ್ಟ್ರೀಯ ಸಂಸ್ಥೆಯಾದ ಸ್ಕೌಟ್ಸ್ ಮತ್ತು ಗೈಡ್ಸ್ ನ್ನು ಗ್ರಾಮೀಣ ಪ್ರದೇಶದ ಶಾಲೆಗಳಿಗೂ ವಿಸ್ತರಿಸಿದರೆ ಮಕ್ಕಳ ಕಲಿಕೆಗೆ ಅನುಕೂಲವಾಗಲಿದೆ. ಜೊತೆಗೆ ಪಠ್ಯಪುಸ್ತಕದಲ್ಲೂ ಈ ವಿಷಯ ಅಳವಡಿಸಲು ಶಿಕ್ಷಣ ಸಚಿವರಿಗೆ ಶಿಕ್ಷಕರು ಮನವಿ ಸಲ್ಲಿಸಿ ಒತ್ತಾಯಿಸಿದರೆ ಮಕ್ಕಳ ಶ್ರೇಯೋಭಿವೃದ್ದಿ ಬಹಳಷ್ಟು ಉಪಯೋಗವಾಗಲಿದೆ ಎಂದರು.
ಜಿಲ್ಲಾ ಆಯುಕ್ತ ಎಂ.ಎನ್.ಷಡಕ್ಷರಿ, ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪು ಗೊಳ್ಳಲು ಶಿಕ್ಷಕರು ಮಹತ್ತರ ಕೆಲಸ ನಿಭಾಯಿಸುತ್ತಿದ್ದು ಇದರೊಂದಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಣ ಅತ್ಯಗತ್ಯ. ಆ ನಿಟ್ಟಿನಲ್ಲಿ ಶಿಕ್ಷಕರು ಶಿಬಿರದಲ್ಲಿ ಪಡೆದುಕೊಂಡ ತರಬೇತಿಯನ್ನು ಮಕ್ಕಳಿಗೆ ಬೋಧಿಸಿ ಪ್ರತಿ ಶಾಲೆಗಳಲ್ಲಿ ಒಂದೊಂದು ತಂಡ ರಚಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಜಿಲ್ಲಾ ಆಯುಕ್ತೆ ಮಮತ, ತರಬೇತಿ ಆಯುಕ್ತೆ ಸಂಧ್ಯಾರಾಣಿ, ಸಂಘಟನಾ ಆಯುಕ್ತ ಕಿರಣ್‌ಕುಮಾರ್, ಜಂಟಿ ಕಾರ್ಯದರ್ಶಿ ಪ್ರತಿಮಾ, ಸಹಾಯಕ ಕಾರ್ಯದರ್ಶಿ ನೀಲಕಂಠಚಾರ್, ಗೈಡ್ಸ್ ತರಬೇತಿ ನಾಯಕ ಡಾ. ಇಂಚರ ನಾರಾಯಣಸ್ವಾಮಿ, ಗೈಡ್ಸ್ ತರಬೇತಿ ನಾಯಕಿ ಮಮತ ಉಪಸ್ಥಿತರಿದ್ದರು.9 ಕೆಸಿಕೆಎಂ 1ಚಿಕ್ಕಮಗಳೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಶನಿವಾರ ನಡೆದ ಮೂಲ ತರಬೇತಿ ಶಿಬಿರದಲ್ಲಿ ಪಿ.ಜಿ.ಆರ್. ಸಿಂಧ್ಯಾ ಅವರು ಮಾತನಾಡಿದರು.