ಸಾರಾಂಶ
ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಚಿತ್ರದ ಮುಂಜಾನೆ ಪ್ರದರ್ಶನಗಳನ್ನು ರದ್ದು ಮಾಡಿ ಬೆಂಗಳೂರು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು : ವಿಶ್ವಾದ್ಯಂತ ಇಂದು (ಡಿ.5) ಬಿಡುಗಡೆಯಾಗುತ್ತಿರುವ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಚಿತ್ರದ ಮುಂಜಾನೆ ಪ್ರದರ್ಶನಗಳನ್ನು ರದ್ದು ಮಾಡಿ ಬೆಂಗಳೂರು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ಆದೇಶ ರಾಜ್ಯಾದ್ಯಂತವೂ ಜಾರಿಗೆ ಬರಲಿದೆ. ಈ ಬಗ್ಗೆ ಆದೇಶ ನೀಡಿರುವ ಜಿಲ್ಲಾಧಿಕಾರಿ ಜಿ.ಜಗದೀಶ್, ನಿಯಮ ಉಲ್ಲಂಘಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಸಾಮಾನ್ಯ ಚಿತ್ರಗಳು ಬೆಳಗ್ಗೆ 10ಕ್ಕೆ ಶುರುವಾದರೆ, ಪರಭಾಷೆಯ ಅದ್ಧೂರಿ ಬಜೆಟ್ ಚಿತ್ರಗಳು ಮಧ್ಯರಾತ್ರಿ, ಬೆಳಗಿನ ಜಾವದಿಂದಲೇ ಪ್ರದರ್ಶನ ಆರಂಭಿಸುವುದು ಇತ್ತೀಚೆಗೆ ಟ್ರೆಂಡ್ ಆಗಿತ್ತು. ಅದರಂತೆ ಬೆಂಗಳೂರಿನ ವಿವಿಧ ಚಿತ್ರಮಂದಿರಗಳಲ್ಲಿ ‘ಪುಷ್ಪ 2’ ಸಿನಿಮಾ ಪ್ರದರ್ಶನವೂ ಬೆಳಗಿನ ಜಾವ 3 ಗಂಟೆಯಿಂದಲೇ ನಿಗದಿಯಾಗಿತ್ತು. ಬುಕ್‌ಮೈ ಶೋನಲ್ಲಿ ಈ ಪ್ರದರ್ಶನಕ್ಕೆ 2,500ದವರೆಗೆ ಅಧಿಕ ದರವೂ ನಿಗದಿಯಾಗಿತ್ತು. ಈ ಬಗ್ಗೆ ನಿರ್ಮಾಪಕರ ಸಂಘ ಸರ್ಕಾರಕ್ಕೆ ದೂರು ಸಲ್ಲಿಸಿತ್ತು. ಇದೀಗ ಸರ್ಕಾರ ಮುಂಜಾವದ ಸಿನಿಮಾ ಪ್ರದರ್ಶನವನ್ನು ರದ್ದು ಮಾಡಿದೆ.
‘ಕರ್ನಾಟಕ ಸಿನಿಮಾ ರೆಗ್ಯುಲೇಶನ್ ಕಾಯ್ದೆಯಡಿ ನಿಯಮ 41ರಂತೆ ಚಿತ್ರ ಪ್ರದರ್ಶನವನ್ನು ಬೆಳಗ್ಗೆ 6.30ರ ನಂತರ ಪ್ರಾರಂಭಿಸಬೇಕು. ಆದರೆ ಕೆಲವೊಂದು ಚಿತ್ರಮಂದಿರಗಳಲ್ಲಿ ‘ಪುಷ್ಪ 2’ ಸಿನಿಮಾವನ್ನು ಬೆಳಗಿನ ಜಾವ 3.30ರ ನಂತರ ಪ್ರದರ್ಶಿಸಲು ಮುಂದಾಗಿದ್ದಾರೆ. ಈ ಚಿತ್ರ ಪ್ರದರ್ಶನಗಳಿಗೆ ಟಿಕೆಟ್ ಮಾರಾಟವೂ ನಡೆದಿದ್ದು, ಇದು ನಿಯಮ ಬಾಹಿರವಾಗಿದೆ. ಬೆಂಗಳೂರಿನ ಬಾಲಾಜಿ ಚಿತ್ರಮಂದಿರ, ಅಮೃತ್ ಥಿಯೇಟರ್ ಸೇರಿದಂತೆ 42 ಚಿತ್ರಮಂದಿರಗಳಲ್ಲಿ ಅವಧಿ ಪೂರ್ವ ಪ್ರದರ್ಶನ ನಿಗದಿಯಾಗಿದೆ. ಈ ಪ್ರದರ್ಶನ ರದ್ದುಗೊಳಿಸುವ ಜೊತೆಗೆ ಕಾನೂನು ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದಿಂದ ನೂರಕ್ಕೂ ಹೆಚ್ಚು ಚಿತ್ರ ಪ್ರದರ್ಶನಗಳು ರದ್ದಾಗಿವೆ. ಸರ್ಕಾರದಿಂದ ಆದೇಶ ಬಂದ ಬಳಿಕ ಮುಂಜಾನೆ ಶೋಗಳ ಹಣವನ್ನು ಹಿಂತಿರುಗಿಸುವುದಾಗಿ ಸಿನಿಮಾ ತಂಡ ತಿಳಿಸಿದೆ. ಇದನ್ನು ಮುಂದಿನ ಶೋಗೆ ವರ್ಗಾಯಿಸುವ ವ್ಯವಸ್ಥೆಯನ್ನೂ ಮಾಡಿದೆ. ಬೆಳಗ್ಗೆ ಆರು ಗಂಟೆಯಿಂದ ‘ಪುಷ್ಪ 2’ ಸಿನಿಮಾ ಪ್ರದರ್ಶನ ನಡೆಯಲಿದೆ.
ಪರಭಾಷಾ ಸಿನಿಮಾಗಳ ನಿಯಮ ಉಲ್ಲಂಘನೆ ಬಗ್ಗೆ ಬಹಳ ಹಿಂದಿನಿಂದಲೇ ದನಿ ಎತ್ತುತ್ತಾ ಬಂದಿದ್ದೇವೆ. ಇದರಿಂದ ಕನ್ನಡದ 8 ಸಿನಿಮಾಗಳಿಗೆ ಅಡೆತಡೆಯಾಗಿದೆ. ಕರ್ನಾಟಕದ ವಿತರಕರಿಗೂ ಅನ್ಯಾಯ ಆಗಿದೆ. ದರವೂ ವಿಪರೀತವಾಗಿದೆ. ಇದೀಗ ಸರ್ಕಾರ ಸಕಾಲಕ್ಕೆ ಸ್ಪಂದಿಸಿದಕ್ಕೆ ಕೃತಜ್ಞರಾಗಿದ್ದೇವೆ.
-ಉಮೇಶ್ ಬಣಕಾರ್, ನಿರ್ಮಾಪಕರ ಸಂಘದ ಅಧ್ಯಕ್ಷ.