ಸಾರಾಂಶ
ಮಾಧ್ಯಮದ ಜತೆ ಮಾತು । ಮಲ್ಲಿಕಾರ್ಜುನ ದೇಗುಲಕ್ಕೆ ರಾಜ್ಯಾದ್ಯಂತ ಬರುವ ಭಕ್ತರು
ಕನ್ನಡಪ್ರಭ ವಾರ್ತೆ ಹಳೇಬೀಡುಸಮೀಪದ ಶ್ರೀ ಕ್ಷೇತ್ರ ಪುಷ್ಪಗಿರಿಯ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಕರ್ನಾಟಕ ರಾಜ್ಯಾದ್ಯಂತ ಭಕ್ತರನ್ನು ಹೊಂದಿದ್ದು ಇಲ್ಲಿಗೆ ನಿತ್ಯ ಸಾವಿರಾರು ಭಕ್ತರು ಬಂದು ಹೋಗುತ್ತಾರೆ. ಹಾಗಾಗಿ ಇಲ್ಲಿಗೆ ಯಾತ್ರಿಕರ ನಿವಾಸದ ಅವಶ್ಯಕತೆ ಇದೆ ಎಂದು ಬೇಲೂರು ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
ಮಾಧ್ಯಮದೊಂದಿಗೆ ಮಾತನಾಡಿ, ‘ಈ ಪುಷ್ಪಗಿರಿ ಕ್ಷೇತ್ರ ಇತಿಹಾಸವುಳ್ಳ ಶ್ರೀಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಇಲ್ಲಿನ ಹಾಗೂ ಹೊರ ಭಕ್ತರಿಂದ ದಾಸೋಹ ಭವನದ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ನಾನು ಶಾಸಕ ಆಗಿದ್ದಾಗ ಅಂದು ಶಂಕುಸ್ಥಾಪನೆ ಮಾಡಿದ್ದೆ. ಇಂದಿನ ದಿನ ಪೂರ್ವಭಾವಿಯಾಗಿ ಪೂಜಾ ಕೈಂಕರ್ಯ ಹಾಗೂ ಹೋಮಗಳನ್ನು ಇಟ್ಟುಕೊಂಡಿದ್ದು ನನ್ನನ್ನು ಆಹ್ವಾನ ಮಾಡಿದ ಸಮಿತಿಯವರಿಗೆ ಧನ್ಯವಾದ ಅರ್ಪಿಸುತ್ತೇನೆ. ಈ ಮಲ್ಲಿಕಾರ್ಜುನ ಸ್ವಾಮಿ ಕ್ಷೇತ್ರಕ್ಕೆ ಯಾತ್ರಿಕರ ನಿವಾಸದ ಅವಶ್ಯಕತೆ ಇದೆ. ಈ ಕಾರ್ಯದ ಜವಾಬ್ದಾರಿಯನ್ನು ಈ ಕ್ಷೇತ್ರದ ಶಾಸಕ ಎಚ್.ಕೆ.ಸುರೇಶ್ ತಕ್ಷಣವೇ ಗಮನಹರಿಸಿ ಇಲ್ಲಿಗೆ ಯಾತ್ರಿಕರ ನಿವಾಸ ಮಾಡಿಕೊಟ್ಟರೆ ಎಲ್ಲಾ ಭಕ್ತರಿಗೆ ಅನುಕೂಲವಾಗುತ್ತದೆ’ ಎಂದು ಹೇಳಿದರು.‘ಈ ಹಿಂದೆ ದೇವಾಲಯ ಸಮಿತಿಯವರು ಒಂದು ಪುಷ್ಪಗಿರಿ ಕಲ್ಯಾಣ ಮಂಟಪದ ನಿರ್ವಹಣೆಯನ್ನು ಮಾಡುತ್ತ ಇದ್ದಾರೆ. ಸ್ಥಳೀಯ ಬಡವರಿಗೆ ಕೇವಲ ೫ ಸಾವಿರ ರು. ಹಣದಲ್ಲಿ ಮದುವೆಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುತ್ತಿವೆ. ಇದರ ಮಧ್ಯೆ ಸ್ವಲ್ಪ ಸರ್ಕಾರದ ಆಡಳಿತ ಅಧಿಕಾರಿಗಳು ವ್ಯವಸ್ಥೆ ಬದಲಾಗಿ ತೊಂದರೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತವಾಗಿ ಗಮನಹರಿಸಿ ಇಲ್ಲಿಯ ಸ್ಥಳೀಯ ಬಡವರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಮನವಿ ಮಾಡಿಕೊಂಡರು.
ಪುಷ್ಪಗಿರಿ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸೋಮಸುಂದರ್ ಮಾತನಾಡಿ, ‘ಈ ದಾಸೋಹ ಭವನ ಸುಮಾರು ೮೫ ಲಕ್ಷ ರು. ವೆಚ್ಚದಲ್ಲಿ ನಿರ್ಮಾಣ ಮಾಡಿದ್ದೇವೆ. ಇದರ ವೆಚ್ಚದ ಕಾರ್ಯ ಎಲ್ಲಾ ಭಕ್ತರ ಸಹಕಾರ ಪಡೆದು, ಸರ್ಕಾರದ ಸೌಲಭ್ಯವನ್ನು ಪಡೆಯದೆ ಭವನವನ್ನು ನಿರ್ಮಿಸಿದ್ದೇವೆ. ಈ ಪುಷ್ಪಗಿರಿ ಕಲ್ಯಾಣ ಮಂಟಪದಲ್ಲಿ ಹಿಂದೆ ಕಡಿಮೆ ಹಣದಲ್ಲಿ ಬಡವರಿಗೆ ಮದುವೆ ಮತ್ತು ಧಾರ್ಮಿಕ ಕಾರ್ಯಕ್ರಮ ನೆಡೆದುಕೊಂಡು ಹೋಗುತ್ತಿತ್ತು. ಇದರ ಮಧ್ಯೆ ತಾಲೂಕು ಆಡಳಿತವು ಆಗಮಿಸಿ ಪೂರ್ತಿ ಹಣವನ್ನು ಬಿಲ್ಲು ಮುಖಾಂತರ ಸಂದಾಯ ಮಾಡಿಕೊಂಡಿತು. ಇದರಿಂದ ಕೂಲಿ ಕಾರ್ಮಿಕರ ಖರ್ಚು ವೆಚ್ಚಗಳು ಸಮಿತಿ ನೀಡುವಂತಾಯಿತು. ತಕ್ಷಣವೇ ಕಲ್ಯಾಣ ಮಂಟಪದ ವ್ಯವಸ್ಥೆ ಸ್ಥಗಿತ ಮಾಡಿ ಇದರ ಬಗ್ಗೆ ಸಂಬಂಧಪಟ್ಟ ಮುಜರಾಯಿ ಸಚಿವರು, ಅಧಿಕಾರಿಗಳನ್ನು ಭೇಟಿ ಮಾಡಿದ್ದೇವೆ. ಸದ್ಯದಲ್ಲೇ ಪುಷ್ಪಗಿರಿ ಕಲ್ಯಾಣ ಮಂಟಪವು ಪುಷ್ಪಗಿರಿ ದೇವಾಲಯ ಸಮಿತಿಗೆ ವರ್ಗಾಯಿಸಿಕೊಡುತ್ತೇವೆ ಎಂದು ಹೇಳಿದ್ದಾರೆ. ತಕ್ಷಣ ಮುಂದಿನ ದಿನಗಳಲ್ಲಿ ಪುಷ್ಪಗಿರಿ ಕಲ್ಯಾಣ ಮಂಟಪದಲ್ಲಿ ಹಿಂದಿನಂತೆ ಬಡವರಿಗೆ ಕಡಿಮೆ ದರದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿಕೊಳ್ಳಬಹುದು’ ಎಂದು ಹೇಳಿದರು.ದೇವಾಲಯದ ಕಾರ್ಯದರ್ಶಿ ಸಂಗಮ, ಬಸ್ತಿಯಲ್ಲಿ ಮಲ್ಲಿಕಣ್ಣ, ಅರ್ಚಕರು ಹಾಗೂ ದೇವಾಲಯದ ಸಮಿತಿ ಸದಸ್ಯರು ಹಾಜರಿದ್ದರು.