ಸಾರಾಂಶ
ಜಿಲ್ಲಾದ್ಯಂತ ಪುಷ್ಯ ಮಳೆ ಅರ್ಭಟ ಶನಿವಾರವೂ ಮುಂದುವರಿದಿದೆ. ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದ್ದು ಮಲೆನಾಡಿಗರು ಹೈರಾಣಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲಾದ್ಯಂತ ಪುಷ್ಯ ಮಳೆ ಅರ್ಭಟ ಶನಿವಾರವೂ ಮುಂದುವರಿದಿದೆ. ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದ್ದು ಮಲೆನಾಡಿಗರು ಹೈರಾಣಾಗಿದ್ದಾರೆ.ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಹೊಸನಗರ, ಸೊರಬ, ತೀರ್ಥಹಳ್ಳಿ ತಾಲೂಕಿನ ಶಾಲಾ ಕಾಲೇಜುಗಳಿಗೆ ಇಂದು ರಜೆ ನೀಡಲಾಗಿತ್ತು. ಪ್ರಮುಖ ನದಿಗಳ ಹರಿವಿನಲ್ಲಿ ಭಾರೀ ಏರಿಕೆಯಾಗಿದೆ. ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳ ಒಳಹರಿವಿನಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಕಂಡುಬಂದಿದೆ.
ಸಮುದ್ರ ಮಟ್ಟದಿಂದ 1819 ಅಡಿ ಎತ್ತರದ ಲಿಂಗನಮಕ್ಕಿ ಜಲಾಶಯದ ಒಳಹರಿವು 67 ಸಾವಿರ ಕ್ಯೂಸೆಕ್‌ಗೂ ಅಧಿಕವಾಗಿದೆ. 3335 ಕ್ಯೂಸೆಕ್ ಹೊರಬಿಡಲಾಗುತ್ತಿದೆ. ಪ್ರಸ್ತುತ ಜಲಾಶಯದ ನೀರಿನಮಟ್ಟ 1808.35 ಅಡಿಗೆ ತಲುಪಿದ್ದು, ಭರ್ತಿಗೆ ಕೆಲವೇ ಅಡಿ ಮಾತ್ರ ಬಾಕಿ ಇದೆ. 186 ಅಡಿ ಎತ್ತರದ ಭದ್ರಾ ಜಲಾಶಯಕ್ಕೆ 21,568 ಕ್ಯೂಸೆಕ್ ಒಳಹರಿವಿದೆ. 21,568 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಪ್ರಸ್ತುತ ಡ್ಯಾಂ ನೀರಿನ ಮಟ್ಟ 180.6 ಅಡಿಗೆ ತಲುಪಿದ್ದು, ಜಲಾಶಯ ಭರ್ತಿಗೆ 6 ಅಡಿ ಬಾಕಿಯಿದೆ. ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಈಗಾಗಲೇ ಜಲಾಶಯದ ಗರಿಷ್ಠ ಮಟ್ಟ ತಲುಪುದಕ್ಕೂ ಮುನ್ನವೇ ಜಲಾಶಯದಿಂದ ನದಿಗೆ ಹಾಗೂ ಕಾಲುವೆಗೆ ನೀರು ಹರಿಸಲಾಗುತ್ತಿದೆ.ಭದ್ರಾ ಜಲಾಶಯದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆ ಆಗುತ್ತಿದ್ದು, ಜಲಾಶಯಕ್ಕೆ ಒಳಹರಿವು ಹೆಚ್ಚಿರುವುದರಿಂದ ಜಲಾಶಯದಿಂದ ಹೊರಹರಿವಿನ ಪ್ರಮಾಣ ಹೆಚ್ಚು ಮಾಡಲಾಗುತ್ತಿದೆ. ಜನರು, ಜಾನುವಾರುಗಳು ಸುರಕ್ಷಿತ ಸ್ಥಳಗಳಿಗೆ ತಲುಪುವಂತೆ ಎಚ್ಚರಿಕೆ ಸಂದೇಶ ನೀಡಲಾಗಿದೆ. ಉಳಿದಂತೆ ತುಂಗಾ ಜಲಾಶಯದ ಒಳಹರಿವು 49863 ಕ್ಯೂಸೆಕ್‌ಗೆ ಏರಿಕೆಯಾಗಿದೆ. 50667 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಕಳೆದೆರಡು ದಿನಗಳಿಂದ ಜಿಟಿಜಿಟಿ ಮಳೆಗೆ ಜನ ರೋಸಿ ಹೋಗಿದ್ದಾರೆ. ಆಗಾಗ್ಗೆ ಮಳೆ ಸಹಿತ ಜೋರು ಗಾಳಿ ಬೀಸುತ್ತಿದ್ದು, ಥಂಡಿ ವಾತಾವರಣವಿದೆ. ಸತತ ಮಳೆ ಹಿನ್ನೆಲೆಯಲ್ಲಿ ನದಿ, ಹಳ್ಳಗಳು ತುಂಬಿ ಹರಿಯುತ್ತಿವೆ.
;Resize=(128,128))
;Resize=(128,128))
;Resize=(128,128))
;Resize=(128,128))