ಸಾರಾಂಶ
ಚಾಲನೆ । ಪುಷ್ಪಗಿರಿ ಜಗದ್ಗುರು ಸೋಮಶೇಖರ ಶಿವಾಚಾರ್ಯ ಸ್ವಾಮಿ, ಶಾಸಕ ಎಚ್.ಕೆ.ಸುರೇಶ್ ನೇತೃತ್ವ
ಕನ್ನಡಪ್ರಭ ವಾರ್ತೆ ಬೇಲೂರು
ಹಳೇಬೀಡು ಸಮೀಪದ ಪುಷ್ಪಗಿರಿ ಶ್ರೀ ಮಲ್ಲಿಕಾರ್ಜುನಸ್ವಾಮಿ ರಥೋತ್ಸವ ಅತ್ಯಂತ ಅದ್ಧೂರಿ ಮತ್ತು ಸಂಭ್ರಮ ಸಡಗರದಿಂದ ನಡೆಸಲಾಯಿತು. ರಥೋತ್ಸವಕ್ಕೆ ಪುಷ್ಪಗಿರಿ ಜಗದ್ಗುರು ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿ, ಬೇಲೂರಿನ ಶಾಸಕ ಎಚ್.ಕೆ. ಸುರೇಶ್ ಹಾಗೂ ತಹಸೀಲ್ದಾರ್ ಎಂ. ಮಮತ ಚಾಲನೆ ನೀಡಿದರು.ಪ್ರತಿ ವರ್ಷಕ್ಕೆ ಒಮ್ಮೆ ನಡೆಯುವ ಪುಷ್ಪಗಿರಿ ಮಲ್ಲಿಕಾರ್ಜುನಸ್ವಾಮಿ ದಿವ್ಯ ರಥೋತ್ಸವಕ್ಕೆ ಮುನ್ನ ಶ್ರೀ ಮಲ್ಲಿಕಾರ್ಜುನಸ್ವಾಮಿ ಮತ್ತು ಶ್ರೀ ಪಾರ್ವತಮ್ಮ ಮೂರ್ತಿಗಳಿಗೆ ಗಿರಿಜಾ ಕಲ್ಯಾಣೋತ್ಸವ ನಡೆಸಲಾಯಿತು. ಬಳಿಕ ಸ್ವಾಮಿಗೆ ರುದ್ರಾಭಿಷೇಕ ಮತ್ತು ಪುಷ್ಟಾಲಂಕಾರ ಹಾಗೂ ಮಹಾಮಂಗಳಾರತಿಯನ್ನು ತಟ್ಟೆಹಳ್ಳಿ ಗ್ರಾಮದ ಟಿ.ಎಸ್ ಸೂರ್ಯನಾರಾಯಣ ಮತ್ತು ರಮೇಶ್ ಹಾಗೂ ಬ್ರಾಹ್ಮಣ ಮಹಾಸಭಾ ಶ್ರದ್ಧಾಭಕ್ತಿಯಿಂದ ನಡೆಸಿದರು. ಬಳಿಕ ಶ್ರೀ ಮಲ್ಲಿಕಾರ್ಜುನಸ್ವಾಮಿ ಮತ್ತು ಪಾರ್ವತಮ್ಮ ದೇವರ ಉತ್ಸವ ಮೂರ್ತಿಯನ್ನು ದೇಗುಲದ ಸುತ್ತ ಪ್ರದಕ್ಷಿಣೆ ನಡೆಸಿ ರಥದ ಬಳಿ ತರಲಾಯಿತು.
ಅಷ್ಟರಲ್ಲಿ ಬೃಹತ್ ಹೂವು ಮಾಲೆ ಮತ್ತು ಕೇಸರಿ ಬಾವುಟದಿಂದ ಶೃಂಗರಿಸಿದ ರಥಕ್ಕೆ ಸಂಪ್ರದಾಯದಂತೆ ಬಲಿ ನೀಡಿದ ತರುವಾಯ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪುಷ್ಪಗಿರಿ ಜಗದ್ಗುರು ಮತ್ತು ತಹಸೀಲ್ದಾರ್ ಎಂ.ಮಮತ ಈಡುಗಾಯಿ ಒಡೆಯುವ ಮೂಲಕ ಜಯಘೋಷದೊಂದಿಗೆ ಚಾಲನೆ ನೀಡಿದರು. ಸ್ವತಃ ಪುಷ್ಪಗಿರಿ ಜಗದ್ಗುರು ರಥದ ಹಗ್ಗವನ್ನು ಹಿಡಿದ ಎಳೆಯುವ ವೇಳೆ ಅಸಂಖ್ಯಾತ ಭಕ್ತರು ಕೂಡ ದೇಗುಲದ ಸುತ್ತ ರಥವನ್ನು ಎಳೆದು ಧನ್ಯರಾದರು.ರಥ ಸಾಗುತ್ತಿರುವ ಸಂದರ್ಭದಲ್ಲಿ ಭಕ್ತರು ರಥದ ಮೇಲೆ ಬಾಳೆಹಣ್ಣು ಎಸೆದು ಹರಕೆ ಕಟ್ಟಿಕೊಂಡರು. ದೇಗುಲದ ಸುತ್ತ ಸಾಗಿ ಬಂದ ರಥವನ್ನು ಸ್ವಸ್ಥಾನದಲ್ಲಿ ನಿಲ್ಲಿಸಲಾಯಿತು. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಮತ್ತು ಅಶಾಂತಿ ಉಂಟಾಗಂತೆ ಹಳೇಬೀಡು ವೃತ್ತ ನಿರೀಕ್ಷಕ ಜಯರಾಂ, ಹಳೇಬೀಡು ಎಸ್‌ಐ ಬಿಗಿ ಭದ್ರತೆ ವ್ಯವಸ್ಥೆ ಮಾಡಿದ್ದರು.
ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವದಲ್ಲಿ ಗಿರಿಸ್ಥಳಗಳಾದ ಸಿದ್ಧಾಪುರ, ಭಂಡಾರಿ ಕಟ್ಟೆ, ಹುಲಿಕೆರೆ, ರಾಜಗೆರೆ, ಗಿರಿಕಲ್ಲಹಳ್ಳಿ, ವಡ್ರಹಳ್ಳಿ, ಕೋಮಾರನಹಳ್ಳಿ, ಮಲ್ಲಾಪುರ, ಹತ್ತು ಹಳ್ಳಿ ಗ್ರಾಮಸ್ಥರು ಸೇರಿದಂತೆ ತಾಲೂಕಿನ ಹಲವು ಗ್ರಾಮಸ್ಥರು. ಕುಲದೈವ ವಂಶಸ್ಥರು ಭಾಗಿಯಾದರು. ಬಂದ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಪುಷ್ಪಗಿರಿ ಜಗದ್ಗುರು ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿ, ೧೨೦೦ ವರ್ಷಗಳ ಗತ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಪುಷ್ಪಗಿರಿ ಮಹಾಸಂಸ್ಥಾನದ ಸಮೀಪದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇಗುಲ ಕೂಡ ೯೦೦ ವರ್ಷಗಳ ಇತಿಹಾಸ ಹೊಂದಿದೆ. ಅಂದಿನಿಂದ ಇಲ್ಲಿ ನಡೆಯುವ ಕಾರ್ತಿಕ ಜಾತ್ರಾ ಮಹೋತ್ಸವ, ರಥೋತ್ಸವ ಮತ್ತು ಕೆಂಡೋತ್ಸವ ಸರ್ವ ಭಕ್ತರ ಸಹಕಾರದಿಂದ ಸಂಭ್ರಮ ಮತ್ತು ಸಡಗರದಿಂದ ಶಾಂತಿ ಮತ್ತು ಸಮನ್ವಯದಿಂದ ನಡೆದುಕೊಂಡು ಬಂದಿದೆ. ಮುಂದಿನ ದಿನದಂದು ಹೀಗೆ ನಡೆದು ನಾಡಿಗೆ ಉತ್ತಮ ಮಳೆಬೆಳೆಯಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.
ಪುಷ್ಪಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಗ್ರಾನೈಟ್ ರಾಜಶೇಖರ, ಆಡಳಿತಾಧಿಕಾರಿ ಕಿಟ್ಟಪ್ಪ. ರಾಜಣ್ಣ ಹಾಜರಿದ್ದರು.ಬೇಲೂರು ತಾಲೂಕಿನ ಹಳೇಬೀಡು ಸಮೀಪದ ಪುಷ್ಪಗಿರಿ ಮಲ್ಲಿಕಾರ್ಜುನಸ್ವಾಮಿ ರಥೋತ್ಸವ ಪುಷ್ಪಗಿರಿ ಜಗದ್ಗುರು ಸಮ್ಮುಖದಲ್ಲಿ ನೆರವೇರಿತು.
;Resize=(128,128))