ಸಾರಾಂಶ
ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆ ಮುಳುಗಿದ್ದು, ಅಂತರ ಜಿಲ್ಲೆ ಸಂಪರ್ಕ ಕಡಿತಗೊಂಡಿದೆ. ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ
ಕನ್ನಡಪ್ರಭ ವಾರ್ತೆ ರಾಯಚೂರು
ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 3 ಲಕ್ಷ ಕ್ಯುಸೆಕ್ ನೀರು ಹರಿದು ಬಿಟ್ಟಿದ್ದು ಇದರಿಂದಾಗಿ ನದಿಪಾತ್ರದಲ್ಲಿ ನೆರೆ ಪರಿಸ್ಥಿತಿ ನಿರ್ಮಾಣಗೊಂಡಿದೆ.ದಿನೇ ದಿನೆ ನದಿಯಲ್ಲಿ ನೀರಿನ ಮಟ್ಟ ಜಾಸ್ತಿಯಾಗುತ್ತಿರುವುದರಿಂದ ಜಿಲ್ಲೆ ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆ ಮುಳುಗಿದ್ದು, ಅಂತರ ಜಿಲ್ಲೆ ಸಂಪರ್ಕ ಕಡಿತಗೊಂಡಿದೆ. ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಮಹಾರಾಷ್ಟ್ರ ಪ್ರಾಂತದಲ್ಲಿ ಭಾರಿ ಮಳೆಯಿಂದಾಗಿ ಆಲಮಟ್ಟಿ, ಬಸವಸಾಗರ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದ್ದರಿಂದ ಕೃಷ್ಣಾ ನದಿಯಿಂದ 2.50 ಲಕ್ಷರಿಂದ 3 ಲಕ್ಷ ಕ್ಯುಸೆಕ್ ನೀರನ್ನು ಹೊರಗಡೆ ಬಿಡುತ್ತಿದ್ದು ಇದರಿಂದಾಗಿ ಜಿಲ್ಲೆ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಿ ನಡುಗಡ್ಡೆಗಳಿಗೆ ಸಂಪರ್ಕ ಕಡಿತಗೊಂಡಿದೆ. ಇನ್ನು ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆ ಮೇಲೆ ನೀರು ಬಂದ ಕಾರಣಕ್ಕೆ ಗುರುವಾರದಿಂದಲೆಯೇ ಸಂಚಾರವನ್ನು ನಿಲ್ಲಿಸಲಾಗಿದೆ. ಹೀಗಾಗಿ ಪಕ್ಕದ ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳ ನೇರ ಸಂಪರ್ಕ ಕಡಿತಗೊಂಡಿದ್ದು, ಪರ್ಯಾಯ ಮಾರ್ಗವಾದ ತಿಂಥಣಿ ಮುಖಾಂತರ ವಾಹನಗಳ ಸಂಚಾರ ನಡೆಯುತ್ತಿದೆ.ಲಕ್ಷಾಂತರ ಕ್ಯುಸೆಕ್ ನೀರು ಹರಿದು ಬರುತ್ತಿರುವುದರಿಂದ ಜಿಲ್ಲೆ ಲಿಂಗಸುಗೂರು, ದೇವದುರ್ಗ ಮತ್ತು ರಾಯಚೂರು ತಾಲೂಕುಗಳ ಅಚ್ಚುಕಟ್ಟು ಪ್ರದೇಶದ ಹಳ್ಳಿಗಳಲ್ಲಿ ನೆರೆ ಭೀತಿ ಎದುರಾಗಿರುವುದರಿಂದ ಜಿಲ್ಲಾಡಳಿತದಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ. ಈಗಾಗಲೇ ನೆರೆ ನಿರ್ವಹಣೆಗಾಗಿ ಎನ್‌ಡಿಆರ್‌ಎಫ್ ತಂಡವು ಆಗಮಿಸಿದೆ.
ಶೀಲಹಳ್ಳಿ ಸೇತುವೆ ಮುಳುಗಿದ್ದರಿಂದ ಸಂಪರ್ಕ ಕಡಿತಗೊಂಡ ನಡುಗಡ್ಡಗಳ ಜನರಿಗೆ ಅಧಿಕಾರಿಗಳ ಅಗತ್ಯ ಔಷಮಧಿ, ದಿನಸಿಗಳನ್ನು ನೀಡಿ ಬಂದಿದ್ದಾರೆ.ಪ್ರವಾಹದಿಂದಾಗಿ ದೇವದುರ್ಗ ತಾಲೂಕಿನ ಐತಿಹಾಸಿಕ ಕೊಪ್ಪರ ಲಕ್ಷ್ಮೀನರಸಿಂಹ ದೇವಸ್ಥಾನ, ಗೂಗಲ್ ಅಲ್ಲಮಪ್ರಭು ಮಂದಿರ, ಜಾಲಹಳ್ಳಿ ಹತ್ತಿರದ ಲಿಂಗದಳ್ಳಿಯ ರಾಮದಾಸದ ಬೃಂದಾವನ, ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನಗಳು ಜಲಾವೃತಗೊಮಂಡಿವೆ.
ನದಿ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದ್ದರಿಂದ ನೂರಾರು ಎಕರೆಯ ಭತ್ತ ಇತರೆ ಬೆಳೆಗಳು ಹಾಗೂ ರೈತರು ಅಳವಡಿಸಿದ್ದ ಪಂಪ್‌ಸೆಟ್‌ಗಳು ಮುಳುಗಿವೆ.ಬಾಕ್ಸ್...ತುಂಗಭದ್ರಾ ನದಿ ಪಾತ್ರದಲ್ಲಿ ಮೊಸಳೆ ಪ್ರತ್ಯಕ್ಷ
ಇತ್ತ ತುಂಗಭದ್ರಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ಮಾನ್ವಿ ತಾಲೂಕಿನ ಚೀಕಲಪರ್ವಿ ಗ್ರಾಮದ ತುಂಗಭದ್ರಾ ನದಿಯಲ್ಲಿ ಪಾತ್ರದಲ್ಲಿ ಮೊಸಳೆ ಪ್ರತ್ಯಕ್ಷಗೊಂಡಿದ್ದು ಇದರಿಂದಾಗಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ನದಿಯಲ್ಲಿ ಮೊಸಳೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಜನರು ಹಾಗೂ ರೈತರು ತಮ್ಮ ಜಾನುವಾರುಗಳನ್ನು ನದಿಯಲ್ಲಿ ನೀರು ಕುಡಿಸುವುದಕ್ಕೆ ಬಿಡಲು ಭಯಪಡುತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಮೊಸಳೆಗಳನ್ನು ಸ್ಥಳಾಂತರಿಸುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಇತ್ತೀಚಿಗೆ ಮೊಸಳೆ ಒಂದು ಆಕಳಕರುವಿನ ಮೇಲೆ ದಾಳಿ ಮಾಡಿದ್ದು, ಕೂಡಲೇ ಹೆಚ್ಚಿನ ಅನಾಹುತಗಳನ್ನು ತಪ್ಪಿಸುವುದಕ್ಕಾಗಿ ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳುವಂತೆ ರೈತರು ಆಗ್ರಹಿಸುತ್ತಿದ್ದಾರೆ.