ಮಹಾರಾಷ್ಟ್ರ ಸರ್ಕಾರ ಕೃಷ್ಣಾ ನದಿಯ ನೀರನ್ನು ಅಕ್ರಮವಾಗಿ ಬಳಸಿಕೊಳ್ಳಲು ಮುಂದಾಗಿರುವ ವಿಚಾರವಾಗಿ ರಾಜ್ಯ ಸರ್ಕಾರ ಕೇವಲ ಕೇಂದ್ರಕ್ಕೆ ಪತ್ರ ಬರೆಯುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಮಹಾರಾಷ್ಟ್ರ 40 ಟಿಎಂಸಿ ನೀರು ಒಯ್ಯುತ್ತಿದೆ ಎಂಬುದಕ್ಕೆ ಅಧಿಕೃತ ದಾಖಲೆಗಳನ್ನು ಸಂಗ್ರಹಿಸಿ, ರಾಜ್ಯದ ನೀರಿನ ಹಕ್ಕು ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಜತೆಗೆ ಮಹಾರಾಷ್ಟ್ರದ ನೀರು ಬಳಕೆಗೆ ಕಡಿವಾಣ ಹಾಕಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮಹಾರಾಷ್ಟ್ರ ಸರ್ಕಾರ ಕೃಷ್ಣಾ ನದಿಯ ನೀರನ್ನು ಅಕ್ರಮವಾಗಿ ಬಳಸಿಕೊಳ್ಳಲು ಮುಂದಾಗಿರುವ ವಿಚಾರವಾಗಿ ರಾಜ್ಯ ಸರ್ಕಾರ ಕೇವಲ ಕೇಂದ್ರಕ್ಕೆ ಪತ್ರ ಬರೆಯುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಮಹಾರಾಷ್ಟ್ರ 40 ಟಿಎಂಸಿ ನೀರು ಒಯ್ಯುತ್ತಿದೆ ಎಂಬುದಕ್ಕೆ ಅಧಿಕೃತ ದಾಖಲೆಗಳನ್ನು ಸಂಗ್ರಹಿಸಿ, ರಾಜ್ಯದ ನೀರಿನ ಹಕ್ಕು ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಜತೆಗೆ ಮಹಾರಾಷ್ಟ್ರದ ನೀರು ಬಳಕೆಗೆ ಕಡಿವಾಣ ಹಾಕಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಆಗ್ರಹಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಸರ್ಕಾರದ ನೀರು ಬಳಕೆ ಕುರಿತು ಸಚಿವ ಎಂ.ಬಿ.ಪಾಟೀಲರು ಕೇಂದ್ರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಆದರೆ, ಮಹಾರಾಷ್ಟ್ರ 40 ಟಿಎಂಸಿ ನೀರು ಒಯ್ಯುತ್ತಿದೆ ಎಂಬುದಕ್ಕೆ ಅಧಿಕೃತ ದಾಖಲೆ ಪಡೆದುಕೊಂಡಿದ್ದಾರೆಯೇ? ಕೃಷ್ಣಾ ಜಲಾಧಿಕರಣದ ಸಮಿತಿ ರಚನೆಯಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.ಕರ್ನಾಟಕಕ್ಕೆ ತನ್ನದೇ ಆದ ನೀರಿನ ಹಕ್ಕಿದೆ. ರೈತರ ಹಿತದೃಷ್ಟಿಯಿಂದ ನಾವು ಹೋರಾಟಕ್ಕೆ ಸಿದ್ಧರಿದ್ದೇವೆ. ಒಂದು ರಾಜ್ಯದ ಅಭಿವೃದ್ಧಿಗಾಗಿ ಮತ್ತೊಂದು ರಾಜ್ಯಕ್ಕೆ ಅನ್ಯಾಯವಾಗಬಾರದು ಎಂಬುದು ನಮ್ಮ ಆಶಯ. ಆಲಮಟ್ಟಿ ಜಲಾಶಯದ ನೀರು ನಮ್ಮ ಉಸಿರಾಗಿದೆ. ಅಲ್ಲಿ ನೀರಿಲ್ಲದಿದ್ದರೆ ನಮ್ಮ ಬದುಕೇ ಅಸಾಧ್ಯ. ಹೀಗಾಗಿ ನೀರಾವರಿ ವಿಚಾರದಲ್ಲಿ ಪಕ್ಷ ರಾಜಕಾರಣ ಮಾಡದೆ, ಪಕ್ಷಾತೀತವಾಗಿ ಬೆಂಬಲ ನೀಡುತ್ತೇವೆ ಎಂದರು.ಪ್ರಸ್ತುತ ನೀರಾವರಿ ಸಚಿವರಾಗಿರುವ ಚಲುವರಾಯಸ್ವಾಮಿ ಅವರು ಉತ್ತರ ಕರ್ನಾಟಕದ ನೀರಾವರಿ ವಿಚಾರದಲ್ಲಿ ಅನ್ಯಾಯ ಮಾಡುತ್ತಿದ್ದಾರೆ. ಅವರಿಗೆ ಕೃಷ್ಣೆಯ ನೀರಾವರಿ ಹಾಗೂ ಉತ್ತರ ಕರ್ನಾಟಕದ ನೀರಾವರಿ ಬಗ್ಗೆ ಕಾಳಜಿಯಿಲ್ಲ. ಈ ಭಾಗದ ನೀರಾವರಿ ಯೋಜನೆಗಳನ್ನು ಕಾಳಜಿ ವಹಿಸುವವರನ್ನು ನೀರಾವರಿ ಸಚಿವರನ್ನಾಗಿ ನೇಮಿಸಬೇಕು. ತಕ್ಷಣವೇ ಕಾಂಗ್ರೆಸ್ ಸರ್ಕಾರದ ನೀರಾವರಿ ಸಚಿವರನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದರು.ಆಲಮಟ್ಟಿ ಜಲಾಶಯಕ್ಕೆ ನೀರು ಮಹಾರಾಷ್ಟ್ರದಿಂದಲೇ ಹರಿದು ಬರುತ್ತದೆ. ಹೀಗಾಗಿ ಕರ್ನಾಟಕದ ನೀರಿನ ಹಕ್ಕಿಗಾಗಿ ಹೋರಾಡಲು ಬಿಜೆಪಿ ಸಿದ್ಧವಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿರುವ ವಿಡಿಯೋ ತುಣುಕಿನ ಕುರಿತು ಚರ್ಚೆ ಮಾಡುವುದನ್ನು ಬಿಟ್ಟು, ಕಾಂಗ್ರೆಸ್ ನಾಯಕರು ಹಾಗೂ ಸಚಿವ ಎಂ.ಬಿ.ಪಾಟೀಲರು ಅಧಿಕೃತ ದಾಖಲೆಗಳನ್ನು ಸಂಗ್ರಹಿಸಬೇಕು. ಅವರು ಕೃಷ್ಣಾ ನದಿಯಿಂದ ಭೀಮಾ ನದಿಯ ಮೂಲಕ 40 ಟಿಎಂಸಿ ನೀರು ಒಯ್ಯುತ್ತಿರುವ ಕುರಿತು ಬಹಿರಂಗವಾಗಿಯೇ ಹೇಳಿ ನಾಲ್ಕು ತಿಂಗಳಾದರೂ ಈ ವಿಚಾರದ ಬಗ್ಗೆ ಸಮರ್ಪಕ ಮಾಹಿತಿ ಪಡೆಯದಿರುವುದು ರಾಜ್ಯದ ನೀರಾವರಿ ಇಲಾಖೆ ಮತ್ತು ಗುಪ್ತಚರ ಇಲಾಖೆಗಳ ಕಾರ್ಯವೈಖರಿ ಕುರಿತು ಪ್ರಶ್ನೆ ಮೂಡಿಸುತ್ತದೆ. ರಾಜ್ಯ ಸರ್ಕಾರ ಕೂಡಲೇ ಸಮಗ್ರ ಮಾಹಿತಿ ಪಡೆದು, ಮಹಾರಾಷ್ಟ್ರದ ನೀರು ಬಳಕೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.ಬಿಜೆಪಿ ಮುಖಂಡ ರವಿ ವಗ್ಗೆ ಮಾತನಾಡಿ, ನ.15 ರಂದು ಬುಡಕಟ್ಟು ಜನಾಂಗದ ನಾಯಕ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಜನಜಾತಿಯ ಗೌರವ ದಿನವಾಗಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿಜಿಯವರು ಆದೇಶಿಸಿರುವುದು ಸಂತಸದ ಸಂಗತಿಯಾಗಿದೆ. ಜಿಲ್ಲೆಯ ಎಲ್ಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಈ ದಿನವನ್ನು ಸಂಭ್ರಮದಿಂದ ಆಚರಿಸಬೇಕು ಎಂದು ಮನವಿ ಮಾಡಿದರು.ಗೋಷ್ಠಿಯಲ್ಲಿ ಮುಖಂಡರಾದ ಈರಣ್ಣ ರಾವೂರ, ಕೃಷ್ಣಾ ಗುನ್ಹಾಳಕರ, ಭರತ ಕೋಳಿ, ರಾಜಶೇಖರ ಡೊಳ್ಳಿ ಹಾಗೂ ರಾಜೇಶ ತಾವಸೆ ಉಪಸ್ಥಿತರಿದ್ದರು.