ಕನ್ನಡಪ್ರಭ ವಾರ್ತೆ ಕಾರವಾರ

ಜಿಲ್ಲೆಯಲ್ಲಿ ಅತ್ಯಂತ ಸವಾಲಿನ ನಡುವೆಯೂ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ದಾಖಲೆ ವೇಗದಲ್ಲಿ ಸಾಗುತ್ತಿದ್ದು, ಕೇವಲ 20 ದಿನಗಳಲ್ಲಿ ಶೇ.75ರಷ್ಟು ಡಿಜಿಟಲೈಸೇಶನ್‌ ಕಾರ್ಯ ಪೂರ್ಣಗೊಂಡಿರುವುದು ಶ್ಲಾಘನೀಯ ಎಂದು ಎಐಸಿಸಿ ನಿಯೋಜಿತ ಉಸ್ತುವಾರಿ, ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ತಿಳಿಸಿದರು.

ಕಾರವಾರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಬಡವರು ಹಾಗೂ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಕಾಂಗ್ರೆಸ್‌ನ ಬಿಎಲ್ಎ-2 ಪದಾಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.

ಈ ವೇಳೆ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಡಾ. ಅಂಜಲಿ ನಿಂಬಾಳ್ಕರ್, ಕಳೆದ ವಿವಿಧ ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಮತದಾರರ ಪಟ್ಟಿಯಿಂದ ವಿರೋಧ ಪಕ್ಷಗಳ ಬೆಂಬಲಿಗರ ಹೆಸರುಗಳನ್ನು ಕೈಬಿಟ್ಟಿರುವುದೇ ಮುಖ್ಯ ಕಾರಣ ಎಂದು ಆರೋಪಿಸಿದರು.

ದೇಶಾದ್ಯಂತ ಈ ಪ್ರಕ್ರಿಯೆಯ ಮೂಲಕ ಲಕ್ಷಾಂತರ ಮತಗಳನ್ನು ವ್ಯವಸ್ಥಿತವಾಗಿ ಕಡಿತಗೊಳಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ 91 ಲಕ್ಷ, ಬಿಹಾರದಲ್ಲಿ 47 ಲಕ್ಷ ಹಾಗೂ ಉತ್ತರ ಪ್ರದೇಶದಲ್ಲಿ ಬರೋಬ್ಬರಿ 2 ಕೋಟಿಗೂ ಅಧಿಕ ಮತಗಳು ಕಡಿತಗೊಂಡಿರುವ ಬಗ್ಗೆ ಸ್ಪಷ್ಟ ದಾಖಲೆಗಳಿವೆ. ಈಗ ಕರ್ನಾಟಕದಲ್ಲೂ ಹಿಂದುಳಿದ ವರ್ಗಗಳ ಮತಗಳನ್ನು ಗುರಿಯಾಗಿಸಿಕೊಂಡು ಬಿಜೆಪಿ ಇಂತಹದ್ದೇ ಸಂಚು ರೂಪಿಸುತ್ತಿದ್ದು, ಇದನ್ನು ತಡೆಯಲು ಕಾಂಗ್ರೆಸ್ ಬೂತ್ ಮಟ್ಟದಲ್ಲಿ ಜಾಗೃತವಾಗಿದೆ ಎಂದು ತಿಳಿಸಿದರು.


ರಾಜ್ಯ ಸರ್ಕಾರದ ಗೃಹಲಕ್ಷ್ಮಿ, ಅನ್ನಭಾಗ್ಯದಂತಹ 5 ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಕಡ್ಡಾಯವಾಗಿದೆ ಎಂದರು.

ಶಿರಸಿ-ಸಿದ್ದಾಪುರ ಶಾಸಕ, ಎಸ್ಐಆರ್ ಜಿಲ್ಲಾ ಉಸ್ತುವಾರಿ ಭೀಮಣ್ಣ ನಾಯ್ಕ, ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣನ ಅಬ್ಬರ ಜೋರಾಗಿದ್ದರೂ ಸಹ, ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ನಿಂತಿಲ್ಲ. ವಾಹನಗಳು ಹೋಗಲು ಸಾಧ್ಯವಿಲ್ಲದ ದಟ್ಟ ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶಗಳಿಗೆ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಮತ್ತು ಅಧಿಕಾರಿಗಳು ಮಳೆಯಲ್ಲಿ ನೆನೆಯುತ್ತಲೇ 3ರಿಂದ 4 ಕಿಮೀ ನಡೆದು ಮಾಹಿತಿ ಸಂಗ್ರಹಿಸುತ್ತಿರುವುದು ಶ್ಲಾಘನೀಯ. ಸಿಎಂ ಡಿ.ಕೆ. ಶಿವಕುಮಾರ್ ಈ ಎಸ್ಐಆರ್ ಪ್ರಕ್ರಿಯೆಗೆ ವಿಶೇಷ ಒತ್ತು ನೀಡಿದ್ದು, ಜಿಲ್ಲೆಯಲ್ಲಿ ಬಿಎಲ್ಎ-2 ಕಾರ್ಯಕರ್ತರು ರಾತ್ರಿ ವೇಳೆ ಕೂಲಿ ಕಾರ್ಮಿಕರ ಮನೆಗಳಿಗೆ ಭೇಟಿ ನೀಡಿ ಅರ್ಜಿ ತುಂಬಲು ನೆರವಾಗುತ್ತಿದ್ದಾರೆ. ಈ ನಿರಂತರ ಪರಿಶ್ರಮದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಅರ್ಜಿ ಸಲ್ಲಿಕೆಯ ಅವಧಿಯನ್ನು ಆ. 8 ರವರೆಗೆ ವಿಸ್ತರಿಸಿದ್ದು, ಜಿಲ್ಲೆಯಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸುವುದು ನಮ್ಮ ಗುರಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್, ಕಾರವಾರ ಉಸ್ತುವಾರಿ ಸುಷ್ಮಾ ರಾಜಗೋಪಾಲ ರೆಡ್ಡಿ, ರಾಮಾ ಮೊಗೇರ, ಆರ್.ಎಚ್. ನಾಯ್ಕ ಹಾಗೂ ಜ್ಯೋತಿ ಪಾಟೀಲ್ ಸೇರಿ ಮುಖಂಡರು, ಕಾರ್ಯಕರ್ತರು ಇದ್ದರು.ಸಚಿವ ಸ್ಥಾನಕ್ಕೆ ಪ್ರಯತ್ನಿಸುವ ಅವಕಾಶದಿಂದ ವಂಚಿತರನ್ನಾಗಿಸಲ್ಲ

ಜಿಲ್ಲೆಯ ಮೂವರು ಶಾಸಕರು ಸಚಿವ ಸ್ಥಾನದ ಆಕಾಂಕ್ಷೆಯಿಂದ ಬೆಂಗಳೂರಿನಲ್ಲೇ ಕುಳಿತಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅಂಜಲಿ ನಿಂಬಾಳ್ಕರ್, ಜಿಲ್ಲೆಯ ಎಸ್‌ಐಆರ್ ಪ್ರಕ್ರಿಯೆಯನ್ನು ಸಂಘಟನೆ, ಕಾರ್ಯಕರ್ತರು ಮತ್ತು ಬಿಎಲ್‌ಎ-2 ಪದಾಧಿಕಾರಿಗಳು ಅತ್ಯುತ್ತಮವಾಗಿ ನಿಭಾಯಿಸುತ್ತಿದ್ದಾರೆ. ಅದಕ್ಕೆ ಶಾಸಕರೇ ಇರಬೇಕೆಂದೇನೂ ಇಲ್ಲ. ಅವರು ತಮ್ಮ ಸಚಿವ ಸ್ಥಾನಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ವಂಚಿತರನ್ನಾಗಿಸುವುದು ಏಕೆ, ಅವರು ಪ್ರಯತ್ನಿಸಲಿ ಎಂದರು.