ಗ್ರಾಪಂಗಳಲ್ಲಿ ಇ , ಬಿ ಖಾತೆಗಳ ಅಕ್ರಮಕ್ಕೆ ಕಡಿವಾಣ ಹಾಕಿ: ಯಲುವಳ್ಳಿ ಪ್ರಭಾಕರ್

| Published : Jan 28 2025, 12:45 AM IST

ಗ್ರಾಪಂಗಳಲ್ಲಿ ಇ , ಬಿ ಖಾತೆಗಳ ಅಕ್ರಮಕ್ಕೆ ಕಡಿವಾಣ ಹಾಕಿ: ಯಲುವಳ್ಳಿ ಪ್ರಭಾಕರ್
Share this Article
  • FB
  • TW
  • Linkdin
  • Email

ಸಾರಾಂಶ

ಪಂಚಾಯಿತಿಗಳಲ್ಲಿ ಹೆಜ್ಜೆ ಹೆಜ್ಜೆಗೂ ನಡೆಯುವ ಭ್ರಷ್ಟಾಚಾರದಲ್ಲಿ ಅಲ್ಲಿನ ಕೆಳಹಂತದ ಬಿಲ್ ಕಲೆಕ್ಟರ್, ವಾಟರ್‌ಮೆನ್, ಕಂಪ್ಯೂಟರ್ ಆಪರೇಟರ್‌ಗಳ ಪಾತ್ರ ಬಹುದೊಡ್ಡದಾಗಿದೆ. ಭ್ರಷ್ಟಾಚಾರ ನಿಂತು ಹಳ್ಳಿಗಳ ಅಭಿವೃದ್ಧಿಯಾಗಬೇಕಾದರೆ ವರ್ಷಕ್ಕೊಮ್ಮೆ ಕಡ್ಡಾಯವಾಗಿ ಅಧಿಕಾರಿಗಳ ವರ್ಗಾವಣೆ ಆಗಬೇಕು,

ನ್ನಡಪ್ರಭ ವಾರ್ತೆ ಮುಳಬಾಗಿಲು

ತಾಲೂಕಿನಾದ್ಯಾಂತ ಗ್ರಾಪಂಗಳಲ್ಲಿ ಅಕ್ರಮ ಇ ಹಾಗೂ ಬಿ ಖಾತೆ ಹಾಗೂ ನರೇಗಾ ಕಾಮಗಾರಿಗಳಲ್ಲಿ ನಡೆದಿರುವ ಭ್ರಷ್ಟಾಚಾರ ತನಿಖೆಗಾಗಿ ವಿಶೇಷ ತಂಡ ರಚನೆ ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ, ರೈತ ಸಂಘದಿಂದ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಸರ್ವೇಶ್‌ರಿಗೆ ಮನವಿ ಸಲ್ಲಿಸಲಾಯಿತು.

ತಾಲೂಕಾಧ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ, ಪಂಚಾಯಿತಿಯಲ್ಲಿ ಬಡವರಿಗೆ ತಲುಪಬೇಕಾದ ನಿವೇಶನಗಳು ಇಂದು ಬಲಾಢ್ಯರ ಪಾಲಾಗುತ್ತಿವೆ. ಅಧಿಕಾರಿಗಳ ವೈಫಲ್ಯತೆಗೆ ಬಡವರು ಬಲಿಯಾಗುತ್ತಿದ್ದಾರೆ. ತಾಲೂಕಿನಾದ್ಯಂತ ಅಕ್ರಮ ಲೇಔಟ್‌ಗಳನ್ನು ಸೃಷ್ಟಿಸಿ, ಬಡವರಿಗೆ ಕಡಿಮೆ ಬೆಲೆಯಲ್ಲಿ ನಿವೇಶನ ನೀಡುತ್ತೇವೆಂದು ವಂಚನೆ ಮಾಡುವ ದೊಡ್ಡ ದಂಧೆಯೇ ನಡೆಯುತ್ತಿದೆ. ಅದಕ್ಕೆ ಬೆಂಗಾವಲಾಗಿ ಅಧಿಕಾರಿಗಳು ನಿಂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ನರೇಗಾ ಕಾಮಗಾರಿಗಳಲ್ಲಿ ಜೆಸಿಬಿಗಳ ಅಬ್ಬರ, ಜಾಬ್ ಕಾರ್ಡ್‌ಗಳ ದುರ್ಬಳಕೆ ಹೆಚ್ಚಾಗಿದೆ. ನರೇಗಾ ಯೋಜನೆಯು ಇಂದು ಅಧಿಕಾರಿಗಳ ಮತ್ತು ಗುತ್ತಿಗೆದಾರರಿಗೆ ಚಿನ್ನದ ಮೊಟ್ಟೆ ಇಡುವ ಕಾಮಗಾರಿಯಾಗಿ ಮಾರ್ಪಟ್ಟಿದೆ. ಗ್ರಾಮೀಣ ಪ್ರದೇಶದ ಬಡ, ಕೂಲಿ ಕಾರ್ಮಿಕರಿಗೆ ಕೆಲಸ ನೀಡುವ ನೆಪದಲ್ಲಿ ಜಾಬ್‌ಕಾರ್ಡ್ಗಳನ್ನು ಪಡೆದು ಕಾಮಗಾರಿಗಳನ್ನು ಜೆಸಿಬಿಗಳಲ್ಲಿ ಮಾಡುವ ಮೂಲಕ ಲಕ್ಷ ಲಕ್ಷ ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ವರ್ಷಕ್ಕೊಮ್ಮೆ ಪಂಚಾಯ್ತಿ ಸಿಬ್ಬಂದಿಯನ್ನು ಬದಲಾಯಿಸಿ:

ಪಂಚಾಯಿತಿಗಳಲ್ಲಿ ಹೆಜ್ಜೆ ಹೆಜ್ಜೆಗೂ ನಡೆಯುವ ಭ್ರಷ್ಟಾಚಾರದಲ್ಲಿ ಅಲ್ಲಿನ ಕೆಳಹಂತದ ಬಿಲ್ ಕಲೆಕ್ಟರ್, ವಾಟರ್‌ಮೆನ್, ಕಂಪ್ಯೂಟರ್ ಆಪರೇಟರ್‌ಗಳ ಪಾತ್ರ ಬಹುದೊಡ್ಡದಾಗಿದೆ. ಭ್ರಷ್ಟಾಚಾರ ನಿಂತು ಹಳ್ಳಿಗಳ ಅಭಿವೃದ್ಧಿಯಾಗಬೇಕಾದರೆ ವರ್ಷಕ್ಕೊಮ್ಮೆ ಕಡ್ಡಾಯವಾಗಿ ಅಧಿಕಾರಿಗಳ ವರ್ಗಾವಣೆ ಆಗಬೇಕು,

ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳು ಮತ್ತು ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ಗ್ರಾಮಸಭೆಗಳು ಇಂದು ಕೇವಲ ಛಾಯಾಚಿತ್ರಗಳಿಗೆ ಸೀಮಿತವಾಗಿವೆ ಎಂದು ತಿಳಿಸಿ, ಹಳ್ಳಿಗಳ ಚರಂಡಿ, ವಿದ್ಯುತ್ ದೀಪ, ರಸ್ತೆಗಳ ಅಭಿವೃದ್ಧಿಗೆ ಬಿಡುಗಡೆಯಾಗುವ ೧೪- ೧೫ ನೇ ಹಣಕಾಸು ಯೋಜನೆಯ ದುರ್ಬಳಕೆಯನ್ನು ತನಿಖೆ ಮಾಡಬೇಕೆಂದು ಆಗ್ರಹಿಸಿದರು.

ಒಂದು ವಾರದೊಳಗೆ ತಾಲೂಕಿನಾದ್ಯಂತ ಗ್ರಾಪಂಗಳಲ್ಲಿ ಅಕ್ರಮ ಇ ಹಾಗೂ ಬಿ ಖಾತೆ ಹಾಗೂ ನರೇಗಾ ಕಾಮಗಾರಿಗಳಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ತನಿಖೆ ಮಾಡಲು ವಿಶೇಷ ತಂಡ ರಚಿಸಿ, ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಾಲೂಕು ಪಂಚಾಯ್ತಿ ಇಒ ಸರ್ವೇಶ್, ನರೇಗಾ ಕಾಮಗಾರಿ ಯಂತ್ರೋಪಕರಣಗಳಲ್ಲಿ ಮಾಡುತ್ತಿರುವ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವ ಜೊತೆಗೆ ಲೇಔಟ್‌ಗಳ ದಾಖಲೆಗಳನ್ನು ಪರೀಶೀಲನೆ ಮಾಡುವವರೆಗೂ ಯಾವುದೇ ಕಾರಣಕ್ಕೂ ಖಾತೆಗಳಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡುವ ಭರವಸೆ ನೀಡಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್‌ಪಾಷ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದ್‌ರೆಡ್ಡಿ, ತಾಲೂಕು ಪ್ರಧಾನ ಕಾರ್ಯದರ್ಶಿ ರಾಜೇಶ್, ಮೇಲಾಗಣಿ ವಿಜಯ್‌ಪಾಲ್, ಭಾಸ್ಕರ್, ನ.ಅ ಜುಬೇರ್‌ಪಾಷ, ವಿಜಯ್‌ಪಾಲ್, ಆದಿಲ್‌ಪಾಷ, ಪುತ್ತೇರಿ ರಾಜು, ಸುನಿಲ್ ಕುಮಾರ್, ಅಂಬ್ಲಿಕಲ್ ಮಂಜುನಾಥ್, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ಕೇಶವ, ವೇಣು, ಇದ್ದರು.